Advertisement

ಹಾರ್ದಿಕ್‌ ಪಾಂಡ್ಯ ಆಟಕ್ಕೆ ಭಾರತ ತಂಡದ ನಾಯಕ ರೋಹಿತ್‌ ಶರ್ಮ ಮೆಚ್ಚುಗೆ

11:15 PM Aug 29, 2022 | Team Udayavani |

ದುಬಾೖ: ಹಾರ್ದಿಕ್‌ ಪಾಂಡ್ಯ ಅವರು ತಮ್ಮ ಆಟದ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದಾರೆ ಮತ್ತು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡುವ ವಿಶ್ವಾಸ ಹೊಂದಿದ್ದಾರೆ ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತೀಯ ತಂಡ ರವಿವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ರೋಮಾಂಚಕವಾಗಿ ಗೆಲ್ಲಲು ಹಾರ್ದಿಕ್‌ ಅವರ ಆಲ್‌ರೌಂಡ್‌ ಪ್ರಯತ್ನವೇ ಕಾರಣವಾಗಿದೆ. ಅವರ ಸಹಿತ ರವೀಂದ್ರ ಜಡೇಜ, ಭುವನೇಶ್ವರ್‌ ಅವರ ಸಾಧನೆಯಿಂದ ತಂಡ ಅಮೋಘ ಗೆಲುವು ಸಾಧಿಸಿತು ಎಂದು ರೋಹಿತ್‌ ತಿಳಿಸಿದರು. ಭಾರತ ಬುಧವಾರ ನಡೆಯುವ ಪಂದ್ಯದಲ್ಲಿ ಹಾಂಕಾಂಗ್‌ ತಂಡವನ್ನು ಎದುರಿಸಲಿದೆ.

ಶಾರ್ಟ್‌ ಎಸೆತಗಳಿಂದ ಪಾಕ್‌ ಆಟಗಾರರನ್ನು ಕಟ್ಟಿಹಾಕಲು ಯಶಸ್ವಿಯಾಗಿದ್ದ ಹಾರ್ದಿಕ್‌ ಅಪಾಯಕಾರಿ ಮೊಹಮ್ಮದ್‌ ರಿಜ್ವಾನ್‌ ಸಹಿತ ಮೂರು ವಿಕೆಟ್‌ ಕಿತ್ತು ಪಾಕಿಸ್ಥಾನದ ರನ್‌ವೇಗಕ್ಕೆ ಕಡಿವಾಣ ಹಾಕಿದ್ದರು. ಒತ್ತಡದ ನಡುವೆಯೂ ಬ್ಯಾಟಿಂಗ್‌ನಲ್ಲಿ ಅದ್ಭುತವಾಗಿ ಆಡಿ ತಂಡಕ್ಕೆ ಅಮೋಘ ಗೆಲುವು ತಂದಕೊಟ್ಟರು ಎಂದು ರೋಹಿತ್‌ ಹೇಳಿದರು.

ನಿರ್ದಿಷ್ಟ ಪರಿಸ್ಥಿತಿಯಲ್ಲಿ ತಂಡಕ್ಕೆ ಅಗತ್ಯವಾಗಿ ಬೇಕಾದ ಕಾರ್ಯವನ್ನು ಹಾರ್ದಿಕ್‌ ನೆರವೇರಿಸಿಕೊಡುತ್ತಿದ್ದಾರೆ. ಅವರೊಬ್ಬ ಅದ್ಭುತ ಆಟಗಾರ, ಅವರ ಬ್ಯಾಟಿಂಗ್‌ ಗುಣಮಟ್ಟ ಗಾಯದ ಸಮಸ್ಯೆಯಿಂದ ಮರಳಿದ ಬಳಿಕ ಅದ್ಭುತವಾಗಿದೆ. ಅವರೀಗ ಅತ್ಯಂತ ತಾಳ್ಮೆಯಿಂದ ಮತ್ತು ಬಹಳಷ್ಟು ಆತ್ಮವಿಶ್ವಾಸದಿಂದ ಆಡುತ್ತಿದ್ದಾರೆ. ಅದು ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಇರಬಹುದು ಎಂದು ರೋಹಿತ್‌ ವಿವರಿಸಿದರು.

ಬೌಲರ್‌ಗಳ ಶ್ರೇಷ್ಠ ನಿರ್ವಹಣೆ
ಭಾರತದ ಚೇಸಿಂಗ್‌ ವೇಳೆ ಬೌಲರ್‌ಗಳು ಉತ್ತಮ ದಾಳಿ ಸಂಘಟಿಸಿದ್ದರು. ಪಂದ್ಯವನ್ನು ಇನ್ನಷ್ಟು ಕಠಿನಗೊಳಿಸುವಲ್ಲಿ ಬೌಲರ್‌ಗಳು ನೆರವಾಗಿದ್ದರು ಎಂದು ಪಾಕಿಸ್ಥಾನ ನಾಯಕ ಬಾಬರ್‌ ಅಜಂ ಹೇಳಿದ್ದಾರೆ.

Advertisement

“ಆರಂಭದಲ್ಲಿ ನಾವು ಆಟವಾಡಿದ ರೀತಿ ಅದ್ಭುತವಾಗಿದೆ. ಆದರೆ 10 ರಿಂದ 15 ರನ್ನಿನ ಕೊರತೆಯಿಂದ ಸೋಲು ಎದುರಾಯಿತು. ಬೌಲರ್‌ಗಳು ನಿಜವಾಗಿಯೂ ಬಿಗು ದಾಳಿ ನಡೆಸಿದ್ದರು. ಅದರಲ್ಲಿಯೂ ಎಡಗೈ ಸ್ಪಿನ್ನರ್‌ ಮೊಹಮ್ಮದ್‌ ನವಾಜ್‌ ಉತ್ತಮ ದಾಳಿ ಸಂಯೋಜಿಸಿದ್ದರು. ಆದರೆ ಹಾರ್ದಿಕ್‌ ಚೆನ್ನಾಗಿ ಆಡಿದ್ದರಿಂದ ಗೆಲುವು ಭಾರತಕ್ಕೆ ಒಲಿಯಿತು ಎಂದವರು ತಿಳಿಸಿದರು.

ಮೋದಿ ಅಭಿನಂದನೆ
ಹೊಸದಿಲ್ಲಿ: ಏಷ್ಯಾ ಕಪ್‌ ಕ್ರಿಕೆಟ್‌ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ ಅತ್ಯಮೋಘ ಗೆಲುವ ಸಾಧಿಸಿದ ಭಾರತೀಯ ತಂಡಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಏಷ್ಯಾಕಪ್‌ ಪಂದ್ಯದಲ್ಲಿ ಭಾರತೀಯ ತಂಡವು ಅತ್ಯದ್ಭುತ ಆಲ್‌ರೌಂಡ್‌ ಪ್ರದರ್ಶನ ನೀಡಿದೆ. ತಂಡವು ಅದ್ಭುತ ಕೌಶಲ ಮತ್ತು ಛಲದ ಪ್ರದರ್ಶನ ನೀಡಿದೆ. ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆಗಳು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಏಷ್ಯಾಕಪ್‌ನಲ್ಲಿ ಭಾರತೀಯ ತಂಡ ಅದ್ಭುತ ಆರಂಭ ಪಡೆದಿದೆ. ಇದೊಂದು ರೋಚಕ ಸೆಣಸಾಟವಾಗಿತ್ತು. ಅದ್ಭುತ ಗೆಲುವಿಗೆ ಅಭಿನಂದನೆಗಳು ಮುಂದೆಯೂ ಇಂತಹ ನಿರ್ವಹಣೆ ನೀಡಿ ಎಂದು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next