Advertisement

ಭಾರತ-ಪಾಕ್‌ ಮಾತುಕತೆ ರದ್ದು

06:00 AM Sep 22, 2018 | Team Udayavani |

ಹೊಸದಿಲ್ಲಿ: ಭಾರತದೊಂದಿಗೆ ಮಾತುಕತೆ ವಿಚಾರದಲ್ಲಿ ಪಾಕ್‌ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಮಾತುಕತೆಗೆ ಕರೆದು, ಒಪ್ಪಿಕೊಂಡ ಬಳಿಕ ಕಾಶ್ಮೀರದಲ್ಲಿ ಉಗ್ರ ಕೃತ್ಯ ನಡೆಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಮಾತುಕತೆಯನ್ನು ರದ್ದುಗೊಳಿಸಿದೆ. ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಮಹಾಧಿವೇಶನದ ವೇಳೆ ಪಾಕಿಸ್ಥಾನದ ವಿದೇಶಾಂಗ ಸಚಿವ ಷಾ ಮಹಮೂದ್‌ ಖುರೇಶಿ ಹಾಗೂ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭೇಟಿಯಾಗಿ ಮಾತುಕತೆ ನಡೆಸುವ ಪಾಕಿಸ್ಥಾನದ ವಿನಂತಿಗೆ ಭಾರತ ಗುರುವಾರ ಸಮ್ಮತಿ ನೀಡಿತ್ತು. ಆದರೆ ಸಮ್ಮತಿ ನೀಡಿದ ಮರುದಿನ ಕಾಶ್ಮೀರದಲ್ಲಿ ಮೂವರು ಪೊಲೀಸ ರನ್ನು ಅಪಹರಿಸಿದ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರು ಬರ್ಬರವಾಗಿ ಹತ್ಯೆಗೈದಿದ್ದಾರೆ. ಇನ್ನೊಂದೆಡೆ ಕಾಶ್ಮೀರಿ ಉಗ್ರ ಬುರ್ಹಾನ್‌ ವಾನಿಯನ್ನು ವೈಭವೀಕರಿಸಿ ಪಾಕ್‌ ಆತನ ಹೆಸರಿನ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಇಂಥ ವಾತಾವರಣದಲ್ಲಿ ಮಾತುಕತೆ ಅರ್ಥಹೀನ ಎಂದು ನಿರ್ಧರಿಸಲಾಯಿತು ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದರು.

Advertisement

ಇಮ್ರಾನ್‌ ನಿಜ ಬಣ್ಣ ಬಯಲು
ಈ ಎರಡೂ ಘಟನೆಗಳು ಪಾಕ್‌ ಪ್ರಧಾನಿ ಇಮ್ರಾನ್‌ ಅವರ ನಿಜ ಬಣ್ಣ ಬಯಲು ಮಾಡಿದೆ. ಮಾತುಕತೆಗೆ ಆಹ್ವಾನಿಸುವುದರ ಹಿಂದೆ ಇರುವ ಪಾಕಿಸ್ಥಾನದ ಕ್ರೂರ ಅಜೆಂಡಾ ಕೂಡ ಬೆಳಕಿಗೆ ಬಂದಿದ್ದಾಗಿ ರವೀಶ್‌ ಹೇಳಿದ್ದಾರೆ. ಬುರ್ಹಾನ್‌ ವಾನಿ ಹಾಗೂ ಕಾಶ್ಮೀರ ಉಗ್ರರ ಕುರಿತ 20 ಅಂಚೆ ಚೀಟಿಗಳನ್ನು ಪಾಕಿಸ್ಥಾನವು ಜುಲೈ 24ರಂದೇ ಬಿಡುಗಡೆ ಮಾಡಿತ್ತು ಎಂದು ಹೇಳಲಾಗಿದೆ. ಇಮ್ರಾನ್‌ ಖಾನ್‌ ಪತ್ರ ಬರೆದು ಉಗ್ರವಾದದ ಬಗ್ಗೆಯೂ ಮಾತುಕತೆ ನಡೆಸಲು ಸಿದ್ಧವಿದ್ದೇವೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಮಾತುಕತೆಗೆ ಒಪ್ಪಿಕೊಂಡಿತ್ತು. ಆದರೆ ಈ ಕೃತ್ಯಗಳಿಂದಾಗಿ ಪಾಕಿಸ್ಥಾನಕ್ಕೆ ಉಗ್ರವಾದವನ್ನು ತಡೆಯುವ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದು ಸಾಬೀತಾಗಿದೆ ಮತ್ತು ಇಮ್ರಾನ್‌ ಖಾನ್‌ ಅಧಿಕಾರಕ್ಕೇರಿದ ಕೆಲವೇ ದಿನಗಳಲ್ಲಿ ತನ್ನ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ ಎಂದು ಭಾರತ ಟೀಕಿಸಿದೆ.

2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಪಾಕ್‌ ಬೆಂಬಲಿತ ಉಗ್ರರು ದಾಳಿ ನಡೆಸಿದ ಅನಂತರದಲ್ಲಿ ಉಭಯ ದೇಶಗಳ ಮಧ್ಯೆ ಶಾಂತಿ ಮಾತುಕತೆ ನಿಂತು ಹೋಗಿತ್ತು. ಅಂದಿನಿಂದಲೂ ಹಲವು ಬಾರಿ ಕಾಶ್ಮೀರ ಹಾಗೂ ವಿವಿಧೆಡೆ ನಡೆದ ಪ್ರತೀ ದಾಳಿಯಲ್ಲೂ ಪಾಕಿಸ್ಥಾನದ ಕೈವಾಡವಿದ್ದುದರಿಂದ ಉಭಯ ದೇಶಗಳ ಸಂಬಂಧ ಹದಗೆಡುತ್ತಲೇ ಸಾಗಿತ್ತು. 2016ರಲ್ಲಿ ಉರಿ ವಾಯುನೆಲೆಯ ಮೇಲೆ ದಾಳಿ ನಡೆಸಿದ ಅನಂತರ ಅದಕ್ಕೆ ಪ್ರತೀಕಾರವಾಗಿ ಭಾರತ ಸರ್ಜಿಕಲ್‌ ದಾಳಿಯನ್ನೂ ನಡೆಸಿತ್ತು.

ವಿಪಕ್ಷಗಳ ವಿರೋಧ
ಜಮ್ಮು ಕಾಶ್ಮೀರದಲ್ಲಿ ಪೊಲೀಸರನ್ನು ಪಾಕ್‌ ಪ್ರೇರಿತ ಉಗ್ರ ಸಂಘಟನೆಗಳು ಹತ್ಯೆಗೈಯುತ್ತಿದ್ದರೂ ಮಾತುಕತೆಗೆ ಸರಕಾರ ಒಪ್ಪಿಕೊಂಡಿದ್ದು ಹೇಗೆ ಮತ್ತು ಯಾಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಕೊನೆಗೂ ಮಾತುಕತೆ ನಿರಾಕರಿಸಿದ್ದು ಉತ್ತಮ ಸಂಗತಿ ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ.

ಭಾರತಕ್ಕೆ ಮಾತುಕತೆ ಬೇಕಿಲ್ಲ
ಭಾರತ ಮಾತುಕತೆಗೆ ನಿರಾಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪಾಕ್‌ ವಿದೇಶಾಂಗ ಸಚಿವ ಖುರೇಶಿ, ಹೊಸದಿಲ್ಲಿಯಲ್ಲಿರುವ ಕೆಲವು ಜನರಿಗೆ ಮಾತುಕತೆ ನಡೆಯುವುದು ಬೇಕಿಲ್ಲ. ಮುಂದಿನ ವರ್ಷ ಭಾರತದಲ್ಲಿ ಚುನಾವಣೆ ನಡೆಯಲಿದೆ. ಆದರೆ ನಾವು ದೂರದೃಷ್ಟಿಯಿಂದ ಮಾತುಕತೆಗೆ ಆಹ್ವಾನಿಸಿದ್ದೆವು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next