ನವದೆಹಲಿ: ಲಢಾಕ್ ನ ಗಲ್ವಾನ್ ಕಣಿವೆ ಭಾಗದಲ್ಲಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೋಮವಾರದಂದು ಚೀನಾ ಸೈನಿಕರ ದುಂಡಾವರ್ತನೆಗೆ ಭಾರತೀಯ ಸೇನೆಯ 20 ಜನ ಯೋಧರು ಹುತಾತ್ಮರಾಗಿದ್ದಾರೆ.
ಚೀನಾದ ಈ ಅಮಾನುಷ ಕೃತ್ಯಕ್ಕೆ ದೇಶದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಡ್ರ್ಯಾಗನ್ ರಾಷ್ಟ್ರದ ವಿರುದ್ಧ ಸೂಕ್ತ ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಕೂಗು ಎಲ್ಲೆಡೆ ಬಲವಾಗಿ ಕೇಳಿಬರಲಾರಂಭಿಸಿದೆ.
ಈ ನಡುವೆ ಚೀನಾ ಸೈನಿಕರ ಈ ಹೀನ ಕೃತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.
ಗಲ್ವಾನ್ ಬಾಗದಲ್ಲಿ ಚೀನಾ ಸೈನಿಕರೊಂದಿಗೆ ಹೋರಾಡಿ ಹುತಾತ್ಮರಾದ ಭಾರತೀಯ ಸೈನಿಕರ ಬಲಿದಾನವನ್ನು ವ್ಯರ್ಥಗೊಳ್ಳಲು ಬಿಡುವುದಿಲ್ಲ ಎಂಬ ಭರವಸೆಯನ್ನು ಪ್ರಧಾನಿ ಮೋದಿ ಅವರು ದೇಶವಾಸಿಗಳಿಗೆ ಇದೇ ಸಂದರ್ಭದಲ್ಲಿ ನೀಡಿದ್ದಾರೆ.
ನಾವು ಸ್ವಭಾವತಃ ಶಾಂತಿಯನ್ನು ಬಯಸುವವರಾಗಿದ್ದರೂ, ಯಾರಾದರೂ ಕಾಲುಕೆದಕಿ ನಮ್ಮ ಮೇಲೆ ಜಗಳಕ್ಕೆ ಬಂದ ಸಂದರ್ಭದಲ್ಲಿ ತಕ್ಕ ಶಾಸ್ತಿ ಮಾಡುವುದೂ ನಮಗೆ ತಿಳಿದಿದೆ ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ನುಡಿದಿದ್ದಾರೆ.
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂಡಿಗೆ ವಿಡಿಯೋ ಕಾನ್ಫೆರೆನ್ಸ್ ಸಭೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ನಮ್ಮ ಯೋಧರ ಬಲಿದಾನ ವ್ಯರ್ಥಗೊಳ್ಳಲು ಬಿಡುವುದಿಲ್ಲ, ದೇಶದ ಏಕತೆ ಹಾಗೂ ಸಾರ್ವಭೌಮತೆ ನಮಗೆ ಎಲ್ಲದಕ್ಕಿಂತಲೂ ಮುಖ್ಯವಾದುದು’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹುತಾತ್ಮರಾದ ಸೈನಿಕರಿಗೆ ಎರಡು ನಿಮಿಷಗಳ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.