Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯ 50 ಓವರ್‌ಗಳಲ್ಲಿ 7 ವಿಕೆಟಿಗೆ 347 ರನ್ ಪೇರಿಸಿ ಸವಾಲೊಡ್ಡಿದರೆ, ಅನನುಭವಿ ತಂಡವಾದ ಮಂಡಳಿ ಅಧ್ಯಕ್ಷರ ಬಳಗ 48.2 ಓವರ್‌ಗಳಲ್ಲಿ 244ಕ್ಕೆ ಸರ್ವಪತನ ಕಂಡಿತು.
Related Articles
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ ರನ್ ರಾಶಿಯನ್ನೇ ಪೇರಿಸಿತು. ಆರಂಭಕಾರ ಹಿಲ್ಟನ್ ಕಾರ್ಟ್‌ರೈಟ್ ಹಾಗೂ ಮಧ್ಯಮ ಕ್ರಮಾಂಕದ ಅಪಾಯಕಾರಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಹೊರತುಪಡಿಸಿ ಪ್ರವಾಸಿ ತಂಡದ ಉಳಿದೆಲ್ಲ ಆಟಗಾರರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನವಿತ್ತರು. ಕಾರ್ಟ್‌ರೈಟ್ ತಂಡದ ರನ್ ಖಾತೆ ತೆರೆಯುವ ಮೊದಲೇ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರೆ, ಹೆಡ್ 14 ರನ್ನಿಗೆ ಆಟ ಮುಗಿಸಿದರು.
Advertisement
ಆರಂಭಕಾರ ಡೇವಿಡ್ ವಾರ್ನರ್, ನಾಯಕ ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಾರ್ಕಸ್ ಸ್ಟೊಯಿನಿಸ್ ಅವರಿಂದ ಅರ್ಧ ಶತಕ ದಾಖಲಾಯಿತು. ಕೀಪರ್ ಮ್ಯಾಥ್ಯೂ ವೇಡ್ ಬಿರುಸಿನ ಗತಿಯಲ್ಲಿ 45 ರನ್ ಬಾರಿಸಿದರು. ಗಾಯಾಳು ಓಪನರ್ ಆರನ್ ಫಿಂಚ್ ಈ ಪಂದ್ಯದಿಂದ ಹೊರಗುಳಿದರು.
ಕಾರ್ಟ್‌ರೈಟ್ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ಜತೆಗೂಡಿದ ವಾರ್ನರ್-ಸ್ಮಿತ್ ದ್ವಿತೀಯ ವಿಕೆಟಿಗೆ 14.2 ಓವರ್‌ಗಳಿಂದ 196 ರನ್ ಪೇರಿಸಿದರು. ಈ ಹಂತದಲ್ಲಿ 48 ಎಸೆತಗಳಿಂದ 64 ರನ್ (11 ಬೌಂಡರಿ) ಬಾರಿಸಿದ ವಾರ್ನರ್ ಔಟಾದರು. 134ರ ಮೊತ್ತದಲ್ಲಿ ಸ್ಮಿತ್ ವಿಕೆಟ್ ಬಿತ್ತು. ಅವರ 55 ರನ್ 68 ಎಸೆತಗಳಿಂದ ಬಂತು (4 ಬೌಂಡರಿ, 1 ಸಿಕ್ಸರ್).
5ನೇ ವಿಕೆಟಿಗೆ ಜತೆಯಾದ ಹೆಡ್-ಸ್ಟೊಯಿನಿಸ್ ಆತಿಥೇಯರ ಬೌಲರ್‌ಗಳ ಮೇಲೆ ಸವಾರಿ ಮಾಡತೊಡಗಿದರು. ಹೆಡ್ 63 ಎಸೆತಗಳಿಂದ 65 ರನ್ (5 ಬೌಂಡರಿ, 1 ಸಿಕ್ಸರ್) ಹೊಡೆದರೆ, ಸ್ಟೊಯಿನಿಸ್ ಸರ್ವಾಧಿಕ 76 ರನ್ ಸಿಡಿಸಿದರು. 60 ಎಸೆತಗಳ ಈ ಆಕ್ರಮಣಕಾರಿ ಬ್ಯಾಟಿಂಗ್ ವೇಳೆ 5 ಸಿಕ್ಸರ್, 4 ಬೌಂಡರಿ ಸಿಡಿಯಲ್ಪಟ್ಟಿತು. ಕೀಪರ್ ವೇಡ್ ಕೇವಲ 24 ಎಸೆತ ಎದುರಿಸಿ 45 ರನ್ ಚಚ್ಚಿದರು (4 ಸಿಕ್ಸರ್, 2 ಬೌಂಡರಿ).
ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ನಿಯಂತ್ರಣ ಹೇರಿದ ಏಕೈಕ ಬೌಲರ್ ವಾಷಿಂಗ್ಟನ್ ಸುಂದರ್. ಚೆನ್ನೈಯವರೇ ಆದ ವಾಷಿಂಗ್ಟನ್ 8 ಓವರ್‌ಗಳಲ್ಲಿ ಕೇವಲ 23 ರನ್ ನೀಡಿ 2 ವಿಕೆಟ್ ಕಿತ್ತರು. ಮಧ್ಯಮ ವೇಗಿ ಕುಶಾಂಗ್ ಪಟೇಲ್ ಕೂಡ 2 ವಿಕೆಟ್ ಪಡೆದರಾದರೂ ಇದಕ್ಕೆ 58 ರನ್ ಬಿಟ್ಟುಕೊಟ್ಟರು. ಆವೇಶ್ ಖಾನ್, ಕುಲ್ವಂತ್ ಖೆಜೊÅàಲಿಯ ಮತ್ತು ಅಕ್ಷಯ್ ಕರ್ನೇವಾಲ್ ಒಂದೊಂದು ವಿಕೆಟ್ ಉರುಳಿಸಿದರು. ಭಾರತ-ಆಸ್ಟ್ರೇಲಿಯ ನಡುವಿನ ಮೊದಲ ಏಕದಿನ ಪಂದ್ಯ ರವಿವಾರ ಇದೇ ಅಂಗಳದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-50 ಓವರ್‌ಗಳಲ್ಲಿ 7 ವಿಕೆಟಿಗೆ 347 (ವಾರ್ನರ್ 64, ಸ್ಮಿತ್ 55, ಹೆಡ 65, ಸ್ಟೊಯಿನಿಸ್ 76, ವೇಡ್ 45, ವಾಷಿಂಗ್ಟನ್ 23ಕ್ಕೆ 2, ಪಟೇಲ್ 58ಕ್ಕೆ 2). ಮಂಡಳಿ ಅಧ್ಯಕ್ಷರ ಇಲೆವೆನ್-48.2 ಓವರ್‌ಗಳಲ್ಲಿ ಆಲೌಟ್ 244 (ಗೋಸ್ವಾಮಿ 43, ಅಗರ್ವಾಲ್ 42, ಪಟೇಲ್ 41, ಕರ್ನೇವಾರ್ 40, ಅಗರ್ 44ಕ್ಕೆ 4, ರಿಚರ್ಡ್‌ಸನ್ 36ಕ್ಕೆ 2).