ಬೆಳಗಾವಿ: ಕಳೆದ ಮೂರು ವರ್ಷಗಳಿಂದ ತುರ್ತು ಪರಿಸ್ಥಿತಿಯಲ್ಲಿರುವ ಸುಮಾರು 150ಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಅಂಬ್ಯುಲೆನ್ಸ್ ಆಟೋ ಸೇವೆ ನೀಡುತ್ತಿರುವ ಬೆಳಗಾವಿಯ ಮಂಜುನಾಥ ಪೂಜಾರಿ ಅವರು ಇಂಡಿಯಾ ಬುಕ್ ಆಪ್ ರೆಕಾರ್ಡ್ ಕೊಡ ಮಾಡುವ ರಾತ್ರಿಯ ಆಂಬ್ಯುಲೆನ್ಸ್ ಮನುಷ್ಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಲ್ಲಿಯ ಅಶೋಕ ನಗರದ ಮಂಜುನಾಥ ಪೂಜಾರಿ ಆಟೋ ಚಾಲಕರಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ಕಂಪನಿಯೊಂದರಲ್ಲಿ ಕಚೇರಿ ಸಹಾಯಕರಾಗಿ ದುಡಿಯುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿ ತುರ್ತು ಪರಿಸ್ಥಿತಿ ವೇಳೆಮಂಜುನಾಥ ಅವರಿಗೆ ಕರೆ ಮಾಡಿದರೆ ಸಾಕು ನೇರವಾಗಿ ರೋಗಿ ಇದ್ದಲ್ಲಿಗೆ ಬಂದು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುತ್ತಾರೆ. ತಮ್ಮ ಆಟೋವನ್ನು ಆಂಬ್ಯುಲೆನ್ಸ್‌ವನ್ನಾಗಿ ರೂಪಿಸಿರುವ ಮಂಜುನಾಥ ತಡರಾತ್ರಿಯಲ್ಲಿ ಉಚಿತ ಸೇವೆ ಮಾಡುತ್ತಾರೆ.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಜುನಾಥ ಪೂಜಾರಿ, ಸಮಾಜ ಸೇವೆ ಮಾಡಬೇಕೆಂಬ ಕನಸು ಕಾಣುತ್ತಿದ್ದ ನನಗೆ ದೇಶದ ಅತ್ಯುನ್ನತ ಗೌರವ ಸಿಕ್ಕಿದ್ದು ಸಂತಸವಾಗುತ್ತಿದೆ. 2004ರಲ್ಲಿ ಅಪಘಾತವೊಂದರಲ್ಲಿ ನನ್ನ ಬಲಗಾಲು ಮುರಿದು ಮೂರು ತುಂಡುಗಳಾಗಿದ್ದವು. ಸರಿಯಾಗಿ ಕೆಲಸ ಮಾಡಲು ಬರುತ್ತಿರಲಿಲ್ಲ. ಇಂಥದರ ಮಧ್ಯೆಯೂ ಸಮಾಜ ಸೇವೆ ಮಾಡಬೇಕೆಂಬ ತುಡಿತ ಇತ್ತು. ಹೀಗಾಗಿ ತಡರಾತ್ರಿಯಲ್ಲಿ ಉಚುತ ಸೇವೆ ನೀಡುತ್ತಿದ್ದೇನೆ ಎಂದರು.
ಕೇಬಲ್ ಆಪರೇಟರ್ ಆಗಿಯೂ ಕೆಲಸ ಮಾಡುತ್ತಿದ್ದು, ನಾನು ದುಡಿದ ಹಣದಲ್ಲಿ ಎಚ್‌ಐವಿ ಸೋಂಕಿತರಿಗಾಗಿ ಕಾರ್ಯನಿರ್ವಹಿಸುತ್ತಿರುವ ಆಶ್ರಯ ಫೌಂಡೇಶಶನ್‌ಗೆ, ನಂದನಾ ಮಕ್ಕಳ ಧಾಮ, ಮಹೇಶ ಫೌಂಡೇಶನ್ ಗೆ, ಅನಾಥ ಮಕ್ಕಳ ಆಶ್ರಯ ತಾಣ ಚಿಕ್ಕುಂಬಿಮಠ ಅನಾಥಾಶ್ರಮಕ್ಕೆ ಸಹಾಯ ಮಾಡುತ್ತೇನೆ. ಮನೆಗೆ ಬೇಕಾಗುವ ವೆಚ್ಚ ತೆಗೆದು ಬಾಕಿ ಉಳಿದ ಹಣ ಸಮಾಜ ಸೇವೆಗೆ ಮೀಸಲಿಡುತ್ತೇನೆ ಎಂದರು.
ವೀರೇಶ ಕಿವಡಸಣ್ಣವರ, ನಾಗರತ್ನಾ ರಾಮಗೌಡ, ತಂದೆ ನಿಂಗಪ್ಪ, ತಾಯಿ, ಪತ್ನಿ, ಪುತ್ರ ಸುದ್ದಿಗೋಷ್ಠಿಯಲ್ಲಿದ್ದರು.