Advertisement

ಟಿ20: ಲಂಕಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ; ಭಾರತಕ್ಕೆ ಸರಣಿ

10:52 PM Jan 07, 2023 | Team Udayavani |

ರಾಜಕೋಟ್‌: ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಭಾರತೀಯ ತಂಡ ಅಬ್ಬರಿಸಿತು. ಎದುರಾಳಿ ಶ್ರೀಲಂಕಾವನ್ನು ಎಲ್ಲ ವಿಭಾಗದಲ್ಲಿ ಮಣಿಸಿದ ಭಾರತ 2-1ರಿಂದ ಟ್ರೋಫಿ ಜಯಿಸಿತು.

Advertisement

ಹಾರ್ದಿಕ್‌ ಪಾಂಡ್ಯ ನಾಯಕತ್ವದ ಯಶಸ್ವಿ ಓಟ ಮುಂದುವರಿಯಿತು. ಈ ಗೆಲುವಿನ ಶ್ರೇಯಸ್ಸನ್ನು ಸೂರ್ಯಕುಮಾರ್‌ ಯಾದವ್‌ ಮತ್ತು ಭಾರತೀಯ ಬೌಲರ್‌ಗಳಿಗೆ ನೀಡಬೇಕಾಗುತ್ತದೆ.

ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 228 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ 16.4 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟಾಯಿತು. ಭಾರತ 91 ರನ್‌ ಅಂತರದಿಂದ ಜಯ ಸಾಧಿಸಿತು.

ಲಂಕಾ ಇನಿಂಗ್ಸ್‌ನಲ್ಲಿ ಹೇಳಿಕೊಳ್ಳುವ ಬ್ಯಾಟಿಂಗ್‌ ಯಾರಿಂದಲೂ ಬರಲಿಲ್ಲ. ಹಾರ್ದಿಕ್‌ ಪಾಂಡ್ಯ (2), ಉಮ್ರಾನ್‌ ಮಲಿಕ್‌, ಯಜುವೇಂದ್ರ ಚಹಲ್‌ ಒಗ್ಗೂಡಿ ಲಂಕಾವನ್ನು ಕಟ್ಟಿ ಹಾಕಿದರು.

ಸಿಡಿದ ಸೂರ್ಯಕುಮಾರ್‌: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಅದನ್ನು ಮೊದಲಿಂದಲೇ ಸಮರ್ಥಿಸಿಕೊಳ್ಳಲು ಶುರು ಮಾಡಿತು. ಇಡೀ ಭಾರತದ ಇನಿಂಗ್ಸ್‌ನಲ್ಲಿ ಇಶಾನ್‌ ಕಿಶನ್‌ ಔಟಾದಾಗ ಮಾತ್ರ ಎದುರಾಳಿ ಶ್ರೀಲಂಕಾ ಆತ್ಮವಿಶ್ವಾಸದಲ್ಲಿದ್ದದ್ದು. ಅದರ ಖುಷಿ ಅಲ್ಲಿಗೆ ನಿಂತುಹೋಯಿತು. ಮುಂದಿನ ಓವರ್‌ಗಳಲ್ಲಿ ಬಿಟ್ಟೂಬಿಡದೇ ಭಾರತೀಯರು ಚಚ್ಚತೊಡಗಿದರು.

Advertisement

ಭಾರತೀಯ ಇನಿಂಗ್ಸ್‌ನ ಹೀರೋ ಉಪನಾಯಕ ಸೂರ್ಯಕುಮಾರ್‌ ಯಾದವ್‌. ಮೊದಲ ಪಂದ್ಯದಲ್ಲಿ ವಿಫ‌ಲರಾಗಿದ್ದ ಅವರು 2ನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಮೂರನೇ ಪಂದ್ಯದಲ್ಲಿ ಶತಕವನ್ನೇ ಬಾರಿಸಿದರು. ಇದು ಅಂತಿಂತಹ ಶತಕವಲ್ಲ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಪರ ದಾಖಲಾದ 2ನೇ ವೇಗದ ಶತಕ. ಅವರು 45 ಎಸೆತದಲ್ಲಿ ಈ ಸಾಧನೆ ಮಾಡಿದರು. 2017ರಲ್ಲಿ ರೋಹಿತ್‌ ಶರ್ಮ ಲಂಕಾ ವಿರುದ್ಧವೇ 35 ಎಸೆತಗಳಲ್ಲಿ ಬಾರಿಸಿದ್ದ ಶತಕ, ಭಾರತ ಪರ ವೇಗದ ಶತಕ. ವಿಶ್ವದಲ್ಲಿ ರೋಹಿತ್‌ ಮೂವರೊಂದಿಗೆ ಜಂಟಿ ಅತಿವೇಗದ ಶತಕ ಬಾರಿಸಿದ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯ ಆರಂಭ: ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇಶಾನ್‌ ಕಿಶನ್‌ ಬೇಗನೇ ಔಟಾಗಿದ್ದರು. ಮೊದಲನೇ ಓವರ್‌ನ 4ನೇ ಎಸೆತದಲ್ಲೇ ಅವರು 1 ರನ್‌ಗಳಿಗೆ ವಿಕೆಟ್‌ ಚೆಲ್ಲಿದರು. ಈ ಇಡೀ ಸರಣಿಯಲ್ಲಿ ಕಿಶನ್‌ ವಿಫ‌ಲರಾಗಿದ್ದಾರೆ. ಇದೇ ಬ್ಯಾಟರ್‌ ಬಾಂಗ್ಲಾದಲ್ಲಿ ನಡೆದ 3ನೇ ಏಕದಿನದಲ್ಲಿ ವೇಗದ ದ್ವಿಶತಕ ಬಾರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಶುಭಮನ್‌ ಗಿಲ್‌ ಮತ್ತು ರಾಹುಲ್‌ ತ್ರಿಪಾಠಿ ಉತ್ತಮವಾಗಿ ಆಡಿ ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ತ್ರಿಪಾಠಿ ಬಿರುಸಿನಿಂದ ಆಡಿದ್ದರೆ ಗಿಲ್‌ ಬಹಳಷ್ಟು ಎಚ್ಚರಿಕೆಯಿಂದ ಆಡಿದರು. ಕೇವಲ 16 ಎಸೆತಗಳಿಂದ 35 ರನ್‌ ಗಳಿಸಿದ ತ್ರಿಪಾಠಿ ಅವರು ದ್ವಿತೀಯ ವಿಕೆಟಿಗೆ ಗಿಲ್‌ ಜತೆಗೂಡಿ 49 ರನ್‌ ಪೇರಿಸಿದರು. ತ್ರಿಪಾಠಿ ಇನಿಂಗ್ಸ್‌ನಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳು ಸೇರಿದ್ದವು.

ಅನಂತರ ನಡೆದಿದ್ದೆಲ್ಲ ಸೂರ್ಯ ಅವರ ಬ್ಯಾಟಿಂಗ್‌ ವೈಭವ. ಇದರ ಪರಿಣಾಮವಾಗಿಯೇ ಭಾರತ ಬೃಹತ್‌ ಮೊತ್ತ ಪೇರಿಸಿತು. ಅವರಿಗೆ ಗಿಲ್‌ ಉತ್ತಮ ಸಹರಕಾರ ನೀಡಿದರು. ಅವರಿಬ್ಬರು ಮೂರನೇ ವಿಕೆಟಿಗೆ 111 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು. ಒಂಟಿ, ಅವಳಿ ರನ್ನಿಗೆ ಹೆಚ್ಚಿನ ಗಮನ ನೀಡಿದ ಗಿಲ್‌ 46 ರನ್‌ ಗಳಿಸಿ ಔಟಾದರು. ಅದಕ್ಕಾಗಿ 36 ಎಸೆತ ತೆಗೆದುಕೊಂಡಿದ್ದರು. ಕ್ರೀಸ್‌ನ ಇನ್ನೊಂದು ಕಡೆ ಸೂರ್ಯಕುಮಾರ್‌ ಯಾದವ್‌ ಶ್ರೀಲಂಕಾ ಬೌಲರ್‌ಗಳನ್ನು ದಂಡಿಸಿ ರನ್‌ಸೂರೆಗೈದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಚಚ್ಚಿದ ಅವರು ವೇಗವಾಗಿ ರನ್‌ ಪೇರಿಸತೊಡಗಿದರು.

26 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ ಸೂರ್ಯ ಅವರು ಶತಕ ಪೂರ್ತಿಗೊಳಿಸಲು ಮತ್ತೆ ಕೇವಲ 19 ಎಸೆತ ತೆಗೆದುಕೊಂಡಿದ್ದರು. ಚಮಿಕ ಕರುಣಾರತ್ನೆ ಅವರು ಎಸೆದ ಅಂತಿಮ ಓವರಿನಲ್ಲಿ ಅವರು 1 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು. ಒಟ್ಟಾರೆ 51 ಎಸೆತ ಎದುರಿಸಿದ ಸೂರ್ಯಕುಮಾರ್‌ 7 ಬೌಂಡರಿ ಮತ್ತು 9 ಸಿಕ್ಸರ್‌ ನೆರವಿನಿಂದ 112 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದು ಅವರ ಟಿ20 ಬಾಳ್ವೆಯ ಮೂರನೇ ಶತಕವೂ ಆಗಿದೆ.

ಸ್ಕೋರ್‌ ಕಾರ್ಡ್‌
ಭಾರತ 20 ಓವರ್‌, 228/5
ಇಶಾನ್‌ ಕಿಶನ್‌ ಧನಂಜಯ ಸಿಲ್ವ ಬಿ ಮದುಶಂಕ 1
ಶುಭಮನ್‌ ಗಿಲ್‌ ಬಿ ಹಸರಂಗ 46
ರಾಹುಲ್‌ ತ್ರಿಪಾಠಿ ಸಿ ಮದುಶಂಕ ಬಿ ಕರುಣಾರತ್ನೆ 35
ಸೂರ್ಯಕುಮಾರ್‌ ಅಜೇಯ 112
ಹಾರ್ದಿಕ್‌ ಪಾಂಡ್ಯ ಸಿ ಧನಂಜಯ ಬಿ ರಜಿಥ 4
ಹೂಡಾ ಸಿ ಹಸರಂಗ ಬಿ ಮದುಶಂಕ 4
ಅಕ್ಷರ್‌ ಪಟೇಲ್‌ ಅಜೇಯ 21
ಇತರೆ 5
ವಿಕೆಟ್‌ ಪತನ: 1-3, 2-52, 3-163, 4-174, 5-189
ಬೌಲಿಂಗ್‌
ಮದುಶಂಕ 4- 0- 55- 2
ಕಸುನ್‌ ರಜಿಥ 4- 1- 35- 1
ತೀಕ್ಷಣ 4- 0- 48- 0
ಕರುಣಾರತ್ನೆ 4- 0- 52- 1
ಹಸರಂಗ 4- 0- 36- 1

ಶ್ರೀಲಂಕಾ 16.4 ಓವರ್‌, 137
ನಿಸ್ಸಂಕ ಸಿ ಮಾವಿ ಬಿ ಅರ್ಷದೀಪ್‌ 15
ಕುಸಲ್‌ ಮೆಂಡಿಸ್‌ ಸಿ ಮಲಿಕ್‌ ಬಿ ಪಟೇಲ್‌ 23
ಅವಿಶೇಕ್‌ ಸಿ ಅರ್ಷದೀಪ್‌ ಬಿ ಪಾಂಡ್ಯ 1
ಧನಂಜಯ ಸಿಲ್ವ ಸಿ ಶುಭಮನ್‌ ಬಿ ಚಹಲ್‌ 22
ಅಸಲಂಕ ಸಿ ಮಾವಿ ಬಿ ಚಹಲ್‌ 19
ಶಣಕ ಸಿ ಪಟೇಲ್‌ ಬಿ ಅರ್ಷದೀಪ್‌ 23
ಹಸರಂಗ ಸಿ ಹೂಡಾ ಬಿ ಮಲಿಕ್‌ 9
ಕರುಣಾರತ್ನೆ ಎಲ್ಬಿಡಬ್ಲ್ಯೂ 0
ಮಹೀಶ್‌ ತೀಕ್ಷಣ ಬಿ ಮಲಿಕ್‌ 2
ಕಸುನ್‌ ರಜಿಥ ಔಟಾಗದೆ 9
ಮದುಶಂಕ ಬಿ ಅರ್ಷದೀಪ್‌ 1
ಇತರೆ 13
ವಿಕೆಟ್‌ ಪತನ: 1-44, 2-44, 3-51, 4-84, 5-96, 6-107, 7-123, 8-127, 9-135, 10-137
ಬೌಲಿಂಗ್‌
ಹಾರ್ದಿಕ್‌ ಪಾಂಡ್ಯ 4- 0 -30- 2
ಅರ್ಷದೀಪ್‌ 2.4- 0- 20- 3
ಶಿವಂ ಮಾವಿ 1- 0- 6- 0
ಅಕ್ಷರ್‌ ಪಟೇಲ್‌ 3- 0- 19- 1
ಉಮ್ರಾನ್‌ ಮಲಿಕ್‌ 3- 0- 31- 2
ಯಜುವೇಂದ್ರ ಚಹಲ್‌ 3- 0- 30- 2

 

 

Advertisement

Udayavani is now on Telegram. Click here to join our channel and stay updated with the latest news.

Next