ಒಮಾನ್: ಪಾಕಿಸ್ಥಾನವನ್ನು ಶೂಟೌಟ್‌ನಲ್ಲಿ ಬಗ್ಗುಬಡಿದ ಭಾರತ ಚೊಚ್ಚಲ ಹಾಕಿ ಫೈವ್ಸ್ ಏಷ್ಯಾ ಕಪ್ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಮುಂದಿನ ವರ್ಷ ಒಮಾನ್‌ನಲ್ಲೇ ನಡೆಯಲಿರುವ ಎಫ್ಐಎಚ್ ಪುರುಷರ ಹಾಕಿ ಫೈವ್ಸ್ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದಿದೆ.
ಕಳೆದ ರಾತ್ರಿ ಒಮಾನ್‌ನಲ್ಲಿ ನಡೆದ ಫೈನಲ್‌ನಲ್ಲಿ ಇತ್ತಂಡಗಳು ಸಮಬಲದ ಹೋರಾಟ ಸಂಘಟಿಸಿದವು. ನಿಗದಿತ ಅವಧಿಯಲ್ಲಿ ಪಂದ್ಯ 4-4 ಗೋಲುಗಳಿಂದ ಸಮನಾಯಿತು. ಬಳಿಕ ಶೂಟೌಟ್‌ನಲ್ಲಿ ಭಾರತ 2-0 ಅಂತರದ ಮೇಲುಗೈ ಸಾಧಿಸಿತು.
ಪಂದ್ಯದ 8 ಗೋಲುಗಳು ಮೊದಲಾರ್ಧದಲ್ಲಿ, ಬರೀ 26 ನಿಮಿಷಗಳ ಅವಧಿಯಲ್ಲಿ ದಾಖಲಾಗಿದ್ದವು. ಭಾರತದ ಪರ ಮೊಹಮ್ಮದ್ ರಾಹಿಲ್ (19 ಮತ್ತು 26ನೇ ನಿಮಿಷ), ಜುಗ್ರಾಜ್ ಸಿಂಗ್ (7ನೇ ನಿಮಿಷ) ಮತ್ತು ಮಣಿಂದರ್ ಸಿಂಗ್ (10ನೇ ನಿಮಿಷ) ಗೋಲು ಹೊಡೆದರು. ಪಾಕಿಸ್ಥಾನದ ಗೋಲುಗಳು ಅಬ್ದುಲ್ ರೆಹಮಾನ್ (5ನೇ ನಿಮಿಷ), ನಾಯಕ ಅಬ್ದುಲ್ ರಾಣಾ (13ನೇ ನಿಮಿಷ), ಝಿಕ್ರಿಯಾ ಹಯಾತ್ (14ನೇ ನಿಮಿಷ) ಮತ್ತು ಅರ್ಷದ್ ಲಿಯಾಖತ್ (19ನೇ ನಿಮಿಷ) ಅವರಿಂದ ದಾಖಲಾದವು.
ಪೆನಾಲ್ಟಿ ಶೂಟೌಟ್‌ನಲ್ಲಿ ಯಶಸ್ಸು ಸಾಧಿಸಿದ ಭಾರತೀಯರೆಂದರೆ ಗುರ್ಜೋ ತ್ ಸಿಂಗ್ ಮತ್ತು ಮಣಿಂದರ್ ಸಿಂಗ್.ಟಿರ್ಕಿ ಅಭಿನಂದನೆ: ಹಾಕಿ ಫೈವ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಹಾಕಿ ಫೈವ್ಸ್ ವಿಶ್ವಕಪ್‌ಗೆ ಅರ್ಹತೆ ಪಡೆದ ಭಾರತೀಯ ತಂಡವನ್ನು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕಿ ಅಭಿ ನಂದಿಸಿದ್ದಾರೆ. ವಿಶ್ವಕಪ್‌ನಲ್ಲೂ ನಮ್ಮವರು ಇದೇ ಮಟ್ಟದ ಪ್ರದರ್ಶನ ನೀಡಲಿ ಎಂದು ಹಾರೈಸಿದ್ದಾರೆ.