Advertisement

07 ರನ್ನಿಗೆ 06 ವಿಕೆಟ್ ; ದೀಪಕ್ ಚಾಹರ್ ಬೊಂಬಾಟ್ ಆಟ : ಭಾರತಕ್ಕೆ T20 ಸರಣಿ ಜಯ

09:45 AM Nov 11, 2019 | Team Udayavani |

ನಾಗ್ಪುರ: ಬಾಂಗ್ಲಾ ದೇಶದ ವಿರುದ್ಧ ಇಂದು ಇಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಸರ್ವಾಂಗೀಣ ಆಟ ಪ್ರದರ್ಶಿಸಿದ ಭಾರತ 30 ರನ್ ಗಳ ಗೆಲುವನ್ನು ತನ್ನದಾಗಿಸಿಕೊಂಡು ಸರಣಿ ಗೆಲುವಿನ ನಗು ಬೀರಿದೆ. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಧ್ಯಮ ವೇಗಿ ದೀಪಕ್ ಚಾಹರ್. ಚಾಹರ್ ಅವರು 3.2 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್ ಪಡೆದು ಬಾಂಗ್ಲಾದ ಬ್ಯಾಟಿಂಗ್ ನಡು ಮುರಿದರು. ಈ ಗೆಲುವಿನ ಮೂಲಕ ಭಾರತ ತಂಡ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿತು.

Advertisement

ಭಾರತ ನೀಡಿದ 174 ರನ್ ಗುರಿಯನ್ನು ಬೆನ್ನತ್ತಿದ ಬಾಂಗ್ಲಾಕ್ಕೆ ಆರಂಭಿಕ ಆಟಗಾರ ಮಹಮ್ಮದ್ ನಯೀಮ್ (81) ಅವರು ಗೆಲುವಿನ ಭರವಸೆಯನ್ನು ಮೂಡಿಸಿದರು. ತನ್ನ ಜೊತೆಗಾರ ಲಿಟನ್ ದಾಸ್ (9) ಬೇಗನೇ ಔಟಾದರೂ ಅಂಜದೇ ಬ್ಯಾಟ್ ಬೀಸಿದ ನಯೀಮ್ ಭಾರತೀಯ ಬೌಲರ್ ಗಳನ್ನು ಬೆಂಡೆತ್ತಿದರು.

ಅವರು ಕ್ರೀಸಿನಲ್ಲಿದ್ದಷ್ಟೂ ಹೊತ್ತು ಭಾರತದ ಗೆಲುವು ಕಷ್ಟಕರವಾಗಿಯೇ ಇತ್ತು. ಕೇವಲ 48 ಎಸೆತೆಗಳಲ್ಲಿ 81 ರನ್ ಸಿಡಿಸಿದ ನಯೀಮ್ 10 ಬೌಂಡರಿ ಹಾಗೂ 02 ಭರ್ಜರಿ ಸಿಕ್ಸರ್ ಕೂಡಾ ಸಿಡಿಸಿದರು. ಕೊನೆಗೂ ಶಿವಮ್ ಧುಬೆ ಬಾಲ್ ಗೆ ಬೌಲ್ಡ್ ಆದಾಗಲೇ ಭಾರತೀಯ ಆಟಗಾರರು ನಿಟ್ಟುಸಿರು ಬಿಟ್ಟಿದ್ದು.

ಬಳಿಕ ಬಾಂಗ್ಲಾ ಸರದಿಯ ಯಾವ ಬ್ಯಾಟ್ಸ್ ಮನ್ ಕೂಡಾ ಸಿಡಿಯಲು ಭಾರತೀಯ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ. ಅದರಲ್ಲೂ ಮಧ್ಯಮ ಬಲಗೈ ವೇಗಿ ದೀಪಕ್ ಚಾಹರ್ ಅಂತೂ ಭಯಾನಕ ಸ್ಪೆಲ್ ಮೂಲಕ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಬೇಗ ಬೇಗ ಪೆವಿಲಿಯನ್ ಸೇರುವಂತೆ ಮಾಡಿದರು. ಟೀಂ ಇಂಡಿಯಾದ ಈ ಹೊಸ ಪ್ರತಿಭೆ ತಾನು ಎಸೆದ 3.2 ಓವರುಗಳಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್ ಪಡೆದು ಭಾರತದ ಸರಣಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂತಿಮವಾಗಿ ಬಾಂಗ್ಲಾದೇಶ 19.2 ಓವರುಗಳಲ್ಲಿ 144 ರನ್ನುಗಳಿಗೆ ಆಲೌಟ್ ಆಗಿ 30 ರನ್ನುಗಳಿಂದ ಸೋಲೊಪ್ಪಿಕೊಂಡಿತು. ದೆಹಲಿಯಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯವನ್ನು ಬಾಂಗ್ಲಾ ಗೆದ್ದುಕೊಂಡಿದ್ದರೆ, ರಾಜ್ ಕೋಟ್ ಪಂದ್ಯ ಭಾರತದ ಪಾಲಾಗಿತ್ತು.

Advertisement

ಬಾಂಗ್ಲಾ ಪರ ನಯೀಮ್ (81) ಮತ್ತು ಮಹಮ್ಮದ್ ಮಿಥುನ್ (27) ಮಾತ್ರವೇ ಎರಡಂಕೆ ಮೊತ್ತವನ್ನು ದಾಖಲಿಸಿದ್ದು ಭಾರತೀಯ ಬೌಲರ್ ಗಳ ಬೌಲಿಂಗ್ ಶಿಸ್ತಿಗೆ ಸಾಕ್ಷಿಯಾಗಿತ್ತು.

ಅಪಾಯಕಾರಿ ಬ್ಯಾಟ್ಸ್ ಮನ್ ಸೌಮ್ಯ ಸರ್ಕಾರ್ (0), ಉತ್ತಮವಾಗಿ ಆಡುತ್ತಿದ್ದ ಮಹಮ್ಮದ್ ಮಿಥುನ್ (27), ಆರಂಭಿಕ ಆಟಗಾರ ಲಿಟನ್ ದಾಸ್ (9) ವಿಕೆಟ್ ಸೇರಿದಂತೆ ಬಾಂಗ್ಲಾ ಬ್ಯಾಟಿಂಗ್ ಸರದಿಯ ಕೊನೆಯ ಮೂರೂ ವಿಕೆಟ್ ಗಳನ್ನು ದೀಪಕ್ ಚಾಹರ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದು ವಿಶೇಷವಾಗಿತ್ತು. ಶಿವಮ್ ದುಬೆ ಅವರು 03 ವಿಕೆಟ್ ಪಡೆದರೆ ಉಳಿದ 01 ವಿಕೆಟ್ ಸ್ಪಿನ್ನರ್ ಚಾಹಲ್ ಪಾಲಾಯ್ತು.

ರಾಹುಲ್ –ಶ್ರೇಯಸ್ ಭರ್ಜರಿ ಬ್ಯಾಟಿಂಗ್ ; ಬಾಂಗ್ಲಾ ಗೆಲುವಿಗೆ 175 ರನ್ ಗುರಿ
ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಬಾಂಗ್ಲಾ ಗೆಲುವಿಗೆ 175 ರನ್ ಅಗತ್ಯವಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡಿತು. ಕನ್ನಡಿಗ ಕೆ.ಎಲ್. ರಾಹುಲ್ (52) ಮತ್ತು ಶ್ರೇಯಸ್ ಅಯ್ಯರ್ (62) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರುಗಳಲ್ಲಿ 174 ರನ್ ಬಾರಿಸಿತು.

ಟಾಸ್ ಸೋತು ಬ್ಯಾಟಿಂಗ್ ಪ್ರಾರಂಭಿಸಿದ ಭಾರತಕ್ಕೆ ಪ್ರಾರಂಭದಲ್ಲಿಯೇ ಆಘಾತ ಎದುರಾಯಿತು. ಕಳೆದ ಪಂದ್ಯದ ಹೀರೋ ಹಂಗಾಮಿ ನಾಯಕ ರೋಹಿತ್ ಶರ್ಮಾ ಅವರು ಕೇವಲ 02 ರನ್ ಗಳಿಸಿ ಔಟಾದರು. ಧವನ್ ಅವರ ಆಟ 19 ರನ್ನಿಗೆ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಭಾರತದ ಸ್ಥಿತಿ 35ಕ್ಕೆ 2 ಆಗಿತ್ತು. ಈ ಹಂತದಲ್ಲಿ ರಾಹುಲ್ ಜೊತೆ ಸೇರಿಕೊಂಡ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಅವರು ಬಿರುಸಿನ ಆಟವಾಡುತ್ತಾ ತಂಡದ ಮೊತ್ತ ಹೆಚ್ಚಿಸುತ್ತಾ ಸಾಗಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಕೇವಲ 33 ಎಸೆತಗಳಲ್ಲಿ 62 ರನ್ ಸಿಡಿಸಿದರು. ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ ಅಯ್ಯರ್ ಒಟ್ಟು 5 ಸಿಕ್ಸ್ ಸಿಡಿಸಿದರು.

ರಾಹುಲ್ ಸಹ ಬಿರುಸಿನ ಆಟವಾಡಿದರು. ಅವರ 52 ರನ್ 35 ಎಸೆತೆಗಳಲ್ಲಿ ಬಂದಿತ್ತು. ಇದರಲ್ಲಿ 07 ಬೌಂಡರಿ ಸೇರಿತ್ತು. ಭಾರತದ ಇನ್ನಿಂಗ್ಸ್ ನ ಕೊನೆಯಲ್ಲಿ ಮನೀಶ್ ಪಾಂಡೆ ಅವರು 13 ಎಸೆತಗಳಲ್ಲಿ 22 ರನ್ ಸಿಡಿಸಿ ತಂಡದ ಮೊತ್ತ 174ಕ್ಕೆ ಮುಟ್ಟಿಸುವಲ್ಲಿ ಸಹಕಾರಿಯಾದರು.

 

Advertisement

Udayavani is now on Telegram. Click here to join our channel and stay updated with the latest news.

Next