Advertisement

ಸರ್ವಾಂಗೀಣ ಪ್ರದರ್ಶನ ನೀಡಿ ಆಸೀಸ್ ವಿರುದ್ಧ ಗೆದ್ದ ಟೀಂ ಇಂಡಿಯಾ

10:21 AM Jan 18, 2020 | Hari Prasad |

ರಾಜ್ ಕೋಟ್: ವಾಂಖೇಡೆಯಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್ ಗಳ ಸೋಲನುಭವಿಸಿದ್ದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂದು ಎರಡನೇ ಏಕದಿನ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನವನ್ನು ನೀಡಿ ಫಿಂಚ್ ಪಡೆಯನ್ನು 36 ರನ್ನುಗಳಿಂದ ಮಣಿಸಿದೆ.

Advertisement

ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸರಣಿಯ ಪೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಮತ್ತು ವಿಕೆಟ್ ಕೀಪಿಂಗ್ ನಲ್ಲಿ 02 ಕ್ಯಾಚ್ ಮತ್ತು 01 ಸ್ಟಂಪಿಗ್ ಮೂಲಕ ಮಿಂಚಿದ ಕೆ.ಎಲ್. ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಭಾರತ ನೀಡಿದ 340 ರನ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಶತಕ ವಂಚಿತ ಸ್ಟೀವನ್ ಸ್ಮಿತ್ (98) ಮತ್ತು ಹೊಸ ಬ್ಯಾಟಿಂಗ್ ಸೆನ್ಸೇಷನ್ ಮಾರ್ನಸ್ ಲಬುಶೇನ್ (46) ಅವರ ಬ್ಯಾಟಿಂಗ್ ಹೋರಾಟದ ಹೊರತಾಗಿಯೂ 36 ರನ್ ಗಳಿಂದ ಸೋಲೊಪ್ಪಿಕೊಂಡಿತು. ಅಂತಿಮವಾಗಿ ಆಸ್ಟ್ರೇಲಿಯಾ 49.1 ಓವರ್ ಗಳಲ್ಲಿ 304 ರನ್ ಗಳಿಗೆ ಆಲೌಟಾಯಿತು.


340 ರನ್ ಬೆನ್ನತ್ತಲಾರಂಭಿಸಿದ ಆಸ್ಟ್ರೇಲಿಯಾ ಕಳೆದ ಪಂದ್ಯದ ಹೀರೋ ಡೇವಿಡ್ ವಾರ್ನರ್ (15) ಅವರ ವಿಕೆಟನ್ನು ತಂಡದ ಮೊತ್ತ 20 ಆಗುವಷ್ಟರಲ್ಲಿ ಕಳೆದುಕೊಂಡಿತು. ಕಳೆದ ಪಂದ್ಯದ ಇನ್ನೋರ್ವ ಶತಕವೀರ ನಾಯಕ ಆರೋನ್ ಫಿಂಚ್ (33) ಸಹ ಸಿಡಿಯಲಿಲ್ಲ. ಈ ಹಂತದಲ್ಲಿ ಅನುಭವಿ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರು ಏಕಾಂಗಿ ಹೋರಾಟದ ಮೂಲಕ ತಂಡವನ್ನು ಗೆಲುವಿನ ಗುರಿ ಮುಟ್ಟಿಸುವ ಪ್ರಯತ್ನವನ್ನು ನಡೆಸಿದ್ದರು. ಆದರೆ ಅವರಿಗೆ ಇನ್ನೊಂದು ಬದಿಯಿಂದ ಸೂಕ್ತ ಬೆಂಬಲ ಸಿಗಲೇ ಇಲ್ಲ. ಇದ್ದುದರಲ್ಲಿ ಹೊಸ ಬ್ಯಾಟಿಂಗ್ ಪ್ರತಿಭೆ ಮಾರ್ನಸ್ ಲಬುಶೇನ್ (46) ಮಾತ್ರವೇ ಸ್ಮಿತ್ ಗೆ ಸಾಥ್ ನೀಡಿದರು.


ಇವರಿಬ್ಬರು 96 ರನ್ ಗಳ ಜೊತೆಯಾಟವನ್ನು ನೀಡಿದರು. ಆಸೀಸ್ ಬ್ಯಾಟಿಂಗ್ ಸರದಿಯಲ್ಲಿ ಇವರಿಬ್ಬರದ್ದೇ ಗರಿಷ್ಠ ರನ್ ಗಳಕೆ. ಆದರೆ ಇವರಿಬ್ಬರಲ್ಲಿ ಸ್ಮಿತ್ ಅವರಿಗೆ ಶತಕ ಒಲಿಯಲಿಲ್ಲ ಮತ್ತು ಲಬುಶೇನ್ ಅವರು ಅರ್ಧಶತಕದಿಂದ ವಂಚಿತರಾದರು. ಆಸೀಸ್ ಇನ್ನಿಂಗ್ಸ್ ನ ಕೊನೆಯಲ್ಲಿ ಬೌಲರ್ ಕೇನ್ ರಿಚರ್ಡ್ಸನ್ ಅವರು ಸಿಡಿದು ನಿಂತ ಪರಿಣಾಮ ಆಸ್ಟ್ರೇಲಿಯಾ 300ರ ಗಡಿ ದಾಟುವಂತಾಯಿತು. ಕೇನ್ 11 ಎಸೆತಗಳಲ್ಲಿ 24 ರನ್ ಬಾರಿಸಿ ಅಜೇಯರಾಗುಳಿದರು.


ಭಾರತೀಯ ಬೌಲರ್ ಗಳಲ್ಲಿ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬಿಗು ಬೌಲಿಂಗ್ ದಾಳಿ ಸಂಘಟಿಸಿದರು. ಅವರು 9.1 ಓವರ್ ನಲ್ಲಿ 02 ಮೇಡನ್ ಸಹಿತ ಕೇವಲ 32 ರನ್ ನೀಡಿದರು. ಅವರಿಗೆ ದಕ್ಕಿದ್ದು 01 ವಿಕೆಟ್ ಮಾತ್ರ. ಉಳಿದಂತೆ ಮಹಮ್ಮದ್ ಶಮಿ ಅವರು 03 ವಿಕೆಟ್ ಪಡೆದು ಮಿಂಚಿದರೆ, ನವದೀಪ್ ಸೈನಿ, ರವೀಂದ್ರ ಜಡೇಜಾ, ಸ್ಪಿನ್ನರ್ ಕುಲದೀಪ್ ಯಾದವ್ ತಲಾ 02 ವಿಕೆಟ್ ಪಡೆದರು.


ಇಂದಿನ ಪಂದ್ಯದಲ್ಲಿ ಎರಡೂ ತಂಡಗಳ ಕಡೆ ಒಟ್ಟು ನಾಲ್ವರು ಬ್ಯಾಟ್ಸ್ ಮನ್ ಗಳು ಶತಕ ವಂಚಿತರಾಗಿದ್ದು ವಿಶೇಷವಾಗಿತ್ತು. ಭಾರತದ ಪರ ಶಿಖರ್ ಧವನ್ (96), ನಾಯಕ ವಿರಾಟ್ ಕೊಹ್ಲಿ (78) ಮತ್ತು ಕೆ.ಎಲ್. ರಾಹುಲ್ (80) ಶತಕ ವಂಚಿತರಾದರೆ ಆಸೀಸ್ ಪರ ಸ್ಮಿತ್ (98) ಶತಕ ವಂಚಿತರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next