ಬ್ರಿಸ್ಟಲ್: ನಿರ್ಣಾಯಕ ಟಿ20 ಪಂದ್ಯದಲ್ಲಿ ತೀರಾ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ವನಿತಾ ತಂಡಕ್ಕೆ ಸರಣಿ ಗೆಲ್ಲುವ ಅವಕಾಶವೊಂದು ಕೈತ ಪ್ಪಿತು. ಆತಿಥೇಯ ಇಂಗ್ಲೆಂಡ್ 7 ವಿಕೆಟ್‌ಗಳ ಅಧಿಕಾರಯುತ ಜಯದೊಂದಿಗೆ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಆರಂಭದಿಂದಲೇ ಕುಸಿತ ಕಾಣುತ್ತ ಹೋಯಿತು. ಗಳಿಸಿದ್ದು 8 ವಿಕೆಟಿಗೆ ಕೇವಲ 122 ರನ್. ಜವಾಬಿತ್ತ ಇಂಗ್ಲೆಂಡ್ 18.2 ಓವರ್‌ಗಳಲ್ಲಿ ಮೂರೇ ವಿಕೆಟ್ ನಷ್ಟಕ್ಕೆ 126 ರನ್ ಬಾರಿಸಿ ಜಯಭೇರಿ ಮೊಳಗಿಸಿತು.
ದ್ವಿತೀಯ ಪಂದ್ಯವನ್ನು ಅಮೋಘ ಚೇಸಿಂಗ್ ಮೂಲಕ 8 ವಿಕೆಟ್‌ಗಳಿಂದ ಜಯಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ, ಮೂರನೇ ಮುಖಾಮುಖಿಯಲ್ಲಿ ಅಷ್ಟೇ ಕಳಪೆ ಆಟವಾಡಿತು. ಅಗ್ರ ಕ್ರಮಾಂಕದ ಐವರು ಎರಡಂಕೆಯ ಗಡಿಯನ್ನೇ ತಲುಪಲಿಲ್ಲ. ಇವರಲ್ಲಿ ಎಸ್. ಮೇಘನಾ ಮತ್ತು ಡಿ. ಹೇಮಲತಾ ಅವರದು ಶೂನ್ಯ ಸಂಪಾದನೆ. ಉಳಿದ ಮೂವರಿಂದ ಒಟ್ಟುಗೂಡಿದ್ದು 19 ರನ್ ಮಾತ್ರ. ದ್ವಿತೀಯ ಪಂದ್ಯದ ಗೆಲುವಿನ ರೂವಾರಿ ಸ್ಮತಿ ಮಂಧನಾ 9, ಶಫಾಲಿ ವರ್ಮ 5, ನಾಯಕಿ ಕೌರ್ ಕೇವಲ 5 ರನ್ ಮಾಡಿ ಔಟಾದರು.
10 ಓವರ್ ಮುಕ್ತಾಯದ ವೇಳೆ ಬರೀ 36 ರನ್ನಿಗೆ ಅರ್ಧದಷ್ಟು ಮಂದಿ ಪೆವಿಲಿಯನ್ ಸೇರಿಯಾಗಿತ್ತು. ಕೊನೆಯ ಹಂತದಲ್ಲಿ ಕೀಪರ್ ರಿಚಾ ಘೋಷ್ (ಸರ್ವಾಧಿಕ 33), ದೀಪ್ತಿ ಶರ್ಮ (24) ಮತ್ತು ಪೂಜಾ ವಸ್ತ್ರಾಕರ್ (11 ಎಸೆತಗಳಿಂದ 19 ರನ್) ಒಂದಿಷ್ಟು ಹೋರಾಟ ನೀಡಿದ ಪರಿಣಾಮ ತಂಡದ ಮೊತ್ತ ನೂರಿಪ್ಪತ್ತರ ಗಡಿ ದಾಟಿತು.
ಸಂಕ್ಷಿಪ್ತ ಸ್ಕೋರ್: ಭಾರತ-8 ವಿಕೆಟಿಗೆ 122 (ರಿಚಾ ಘೋಷ್ ಔಟಾಗದೆ 33, ದೀಪ್ತಿ ಶರ್ಮ 24, ಪೂಜಾ ವಸ್ತ್ರಾಕರ್ ಔಟಾಗದೆ 19, ಸೋಫಿ 25ಕ್ಕೆ 3, ಸಾರಾ ಗ್ಲೆನ್ 11ಕ್ಕೆ 2). ಇಂಗ್ಲೆಂಡ್-18.2 ಓವರ್‌ಗಳಲ್ಲಿ 3 ವಿಕೆಟಿಗೆ 126 (ಸೋಫಿಯಾ ಡಂಕ್ಲಿ 49, ಅಲೈಸ್ ಕ್ಯಾಪ್ಸಿ ಔಟಾಗದೆ 38, ಡೇನಿಯಲ್ ವ್ಯಾಟ್ 22, ರಾಧಾ ಯಾದವ್ 14ಕ್ಕೆ 1, ಪೂಜಾ ವಸ್ತ್ರಾಕರ್ 16ಕ್ಕೆ 1, ಸ್ನೇಹ್ ರಾಣಾ 32ಕ್ಕೆ 1).
ಪಂದ್ಯಶ್ರೇಷ್ಠ: ಸೋಫಿ
ಸರಣಿಶ್ರೇಷ್ಠ: ಸೋಫಿಯಾ ಡಂಕ್ಲಿ.