Advertisement

Rice: ಅಕ್ಕಿ ರಫ್ತಿಗೆ ಭಾರತ ನಿರ್ಬಂಧ

11:48 PM Aug 12, 2023 | Team Udayavani |

ವಿಶ್ವದ ಹಲವು ರಾಷ್ಟ್ರಗಳಲ್ಲಿ ತಲ್ಲಣ
ಪ್ರಪಂಚದ ಹಲವು ದೇಶಗಳ ಜನರು ಈಗ ಅಕ್ಕಿಯ ಹಿಂದೆ ಬಿದ್ದಿದ್ದಾರೆ. ಈ ದೇಶಗಳಲ್ಲಿ ಅಕ್ಕಿಗೆ ಈಗ ಚಿನ್ನದ ಮೌಲ್ಯ, ಸ್ಥಾನಮಾನ. ಇದಕ್ಕೆ ಕಾರಣ ಭಾರತ ಸರಕಾರ ತೆಗೆದುಕೊಂಡಿರುವ ನಿರ್ಧಾರ. ಜಾಗತಿಕ ಮಟ್ಟದಲ್ಲಿ ಅಕ್ಕಿ ಹಲವು ರಾಷ್ಟ್ರಗಳ ಜನರ ಪ್ರಧಾನ ಆಹಾರ ಧಾನ್ಯ. ಭಾರತ ವಿಶ್ವದಲ್ಲಿಯೇ ಅಕ್ಕಿಯ ಅತೀ ದೊಡ್ಡ ರಫ್ತುದಾರ ದೇಶ. ಅಕ್ಕಿಗಾಗಿ ಹಲವು ದೇಶಗಳು ಭಾರತವನ್ನೇ ಅವಲಂಬಿಸಿವೆ. ಭಾರತದ ಈ ಒಂದು ನಡೆ ವಿಶ್ವ ಮಟ್ಟದಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಮಾಡಿದೆ. ಹಾಗಾದರೆ ಭಾರತ ಸರಕಾರ ಕೈಗೊಂಡ ಆ ನಿರ್ಧಾರವೇನು?, ಯಾಕಾಗಿ ಇಂಥ ಕಠಿನ ತೀರ್ಮಾನ?, ಇದರಿಂದ ಜಾಗತಿಕ ರಾಷ್ಟ್ರಗಳ ಮೇಲೆ ಪರಿಣಾಮಗಳೇನು? ಎಂಬುದರ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

Advertisement

ಭಾರತದ ನಿರ್ಧಾರವಾದರೂ ಏನು?
ಅಕ್ಕಿ ಉತ್ಪಾದನೆ ಮತ್ತು ರಫ್ತಿನಲ್ಲಿ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಭಾರತ ಈಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಜುಲೈ 20ರಂದು ಕೇಂದ್ರ ಸರಕಾರವು ಬಾಸ್ಮತಿ ಹೊರತಾದ ಅಕ್ಕಿಯ ರಫ್ತಿನ ಮೇಲೆ ನಿಷೇಧವನ್ನು ಹೇರಿದೆ. ಭಾರತದ ಈ ನಡೆಯು ಜಾಗತಿಕ ಮಾರುಕಟ್ಟೆ ಹಾಗೂ ಅಕ್ಕಿ ಆಮದುದಾರ ರಾಷ್ಟ್ರಗಳನ್ನು ಚಿಂತೆಗೆ ದೂಡಿದೆ. ಸಹಜವಾಗಿಯೇ ಈ ರಾಷ್ಟ್ರಗಳಲ್ಲಿ ಅಕ್ಕಿಯ ಅಭಾವ ತಲೆದೋರಿದ್ದು, ತಮ್ಮ ಅಕ್ಕಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಜಗತ್ತಿನ ಇತರ ಅಕ್ಕಿ ರಫ್ತುದಾರ ರಾಷ್ಟ್ರಗಳತ್ತ ಮುಖಮಾಡಿವೆ.

ಯಾಕೆ ನಿರ್ಬಂಧ?
ಭಾರತವು ಮುಂದೆ ಬರಲಿರುವ ಹಬ್ಬದ ಋತುವಿನಲ್ಲಿ ದೇಶಿಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಈ ನಿರ್ಣಯವನ್ನು ಕೈಗೊಂಡಿದೆ. ಕಳೆದ ವರ್ಷ ಭಾರತವು ನುಚ್ಚಕ್ಕಿಯ ರಫ‌¤ನ್ನು ನಿರ್ಬಂಧಿಸಿತ್ತು. ಅಲ್ಲದೇ ಬಾಸ್ಮತಿಯೇತರ ಅಕ್ಕಿಗಳ ಮೇಲೆ ಶೇ.20ರಷ್ಟು ಪೂರಕ ಸುಂಕವನ್ನು ಹೇರಿತ್ತು.
ಏರುತ್ತಿರುವ ಅಕ್ಕಿಯ ಬೆಲೆ, ಅಲ್ಲದೇ ತಡವಾಗಿ ಸುರಿಯಲಾರಂಭಿಸಿದ ಮುಂಗಾರು ಮಳೆ ಹಾಗೂ ಈಗ ದೇಶದಲ್ಲಿ ಸುರಿಯುತ್ತಿರುವ ಅತಿಯಾದ ಮಳೆ ಅಕ್ಕಿಯ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಗೋಚರಿಸತೊಡಗಿವೆ. ಅಕ್ಕಿ ರಫ್ತಿಗೆ ನಿರ್ಬಂಧ ಹೇರಲು ಇದೂ ಒಂದು ಪ್ರಮುಖ ಕಾರಣ.

ಅತೀ ದೊಡ್ಡ ಅಕ್ಕಿ ರಫ್ತುದಾರ ದೇಶ
ವಿಶ್ವದಲ್ಲಿ ಭಾರತ ಅಕ್ಕಿ ರಫ್ತಿನಲ್ಲಿ ಅಗ್ರಸ್ಥಾನದಲ್ಲಿದ್ದು, ಅತೀ ದೊಡ್ಡ ಅಕ್ಕಿ ರಫ್ತುದಾರ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 10-15 ವರ್ಷ ಗಳಿಂದ ಭಾರತ ಈ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಜಾಗತಿಕವಾಗಿ ಅಕ್ಕಿ ರಫ್ತಿನಲ್ಲಿ ಶೇ.40ರಷ್ಟು ಪಾಲನ್ನು ಭಾರತ ಹೊಂದಿದೆ. 1970ರ ವರೆಗೂ ಅಕ್ಕಿ ಆಮದುದಾರನಾಗಿದ್ದ ಭಾರತವು 2000ದ ಹೊತ್ತಿಗೆ ಅಕ್ಕಿಯ ರಫ್ತುದಾರನಾಗಿ ಹೊರಹೊಮ್ಮಿತು. 2010ರ ವೇಳೆಗೆ ಭಾರತದ ಅಕ್ಕಿ ಉತ್ಪಾದನೆಯು ಶೇ.40ರಷ್ಟು ಏರಿಕೆ ಕಂಡು, ಚೀನದ ಅನಂತರ ಅತೀದೊಡ್ಡ ಅಕ್ಕಿ ಉತ್ಪಾದಕ ದೇಶವಾಗಿ ಮೂಡಿತು. ಅದೇ ವರ್ಷದಲ್ಲಿ ಭಾರತದ ಅಕ್ಕಿ ರಫ್ತು 20 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಏರಿಕೆ ಕಂಡಿತ್ತು.

ಅಕ್ಕಿಯೇ ಮುಖ್ಯ ಆಹಾರ
ಏಷ್ಯಾ, ಯುರೋಪ್‌ ಒಳಗೊಂಡಂತೆ ಪ್ರಪಂಚದ ಬಹುತೇಕ ರಾಷ್ಟ್ರಗಳ ಜನರಿಗೆ ಅಕ್ಕಿಯೇ ಪ್ರಧಾನ ಆಹಾರ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಬಾಂಗ್ಲಾದೇಶ, ಭೂತಾನ್‌, ಕಾಂಬೋಡಿಯಾ, ಇಂಡೋನೇಷ್ಯಾ, ಮ್ಯಾನ್ಮಾರ್‌, ನೇಪಾಲ, ಥೈಲೆಂಡ್‌, ಫಿಲಿಫೈನ್ಸ್‌ ಹಾಗೂ ಶ್ರೀಲಂಕಾದಲ್ಲಿ ಜನರು ದಿನನಿತ್ಯ ಶೇ.40ರಿಂದ ಶೇ.67ರಷ್ಟು ಅಕ್ಕಿಯನ್ನು ಆಹಾರವಾಗಿ ಬಳಕೆ ಮಾಡುತ್ತಾರೆ. ಅಕ್ಕಿಗೆ ಪರ್ಯಾಯವಾಗಿ ಇತರ ಆಹಾರಧಾನ್ಯಗಳಿವೆ ಯಾದರೂ ಈ ದೇಶಗಳಲ್ಲಿ ಜನರಿಗೆ ಅಕ್ಕಿಯಿಂದ ತಯಾರಿಸಲಾದ ಅನ್ನ ಮತ್ತು ಇತರ ಖಾದ್ಯಗಳೇ ಬಲುಮುಖ್ಯ ಆಹಾರವಾಗಿವೆ.

Advertisement

ಅಕ್ಕಿ ಆಮದು ರಾಷ್ಟ್ರಗಳಾವುವು ?
ಪ್ರಪಂಚದ 42ಕ್ಕಿಂತಲೂ ಹೆಚ್ಚಿನ ದೇಶಗಳು ಭಾರತದಿಂದಲೇ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ. ಏಷ್ಯಾದಲ್ಲಿ ಬಾಂಗ್ಲಾದೇಶ, ಭೂತಾನ್‌, ಚೀನ, ಶ್ರೀಲಂಕಾ ಹಾಗೂ ನೇಪಾಲ ದೇಶವು ಅತೀ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ. ಏಷ್ಯಾದ ಅನಂತರ ಆಫ್ರಿಕಾ ಖಂಡದ ದೇಶಗಳಿಗೆ ಭಾರತವೇ ಆಹಾರದ ಮೂಲಾಧಾರ. ಆಫ್ರಿಕಾದ ಅಕ್ಕಿ ಆಮದಿನಲ್ಲಿ ಭಾರತದ ಮಾರುಕಟ್ಟೆ ಮೌಲ್ಯವು ಶೇ. 80ಕ್ಕಿಂತಲೂ ಅಧಿಕವಾಗಿದೆ. ಈ ಸಾಲಿನಲ್ಲಿ ಇರಾನ್‌ ಕೂಡ ಸೇರಿದೆ. ಇನ್ನು ಕೆನಡಾ, ಮೆಕ್ಸಿಕೋ, ಬ್ರೆಜಿಲ್‌, ಪೆರು, ಅರ್ಜೆಂಟೀನಾ, ಕೊಲಂಬಿಯಾ, ಪಾಕಿಸ್ಥಾನ, ಅಫ್ಘಾನಿಸ್ಥಾನ, ಜರ್ಮನಿ, ಥೈಲೆಂಡ್‌ ಹಾಗೂ ಇನ್ನು ಕೆಲವು ದೇಶಗಳು ಭಾರತದಿಂದ ಶೇ.20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ.

ಭಾರತದಿಂದ ನಿರ್ಬಂಧ ಹೊಸದೇನು ಅಲ್ಲ
ಭಾರತವು ಅಕ್ಕಿ ರಫ್ತಿನ ಮೇಲೆ ನಿರ್ಬಂಧ ಹೇರುತ್ತಿರುವುದು ಇದೇ ಮೊದಲಲ್ಲ. ಜಾಗತಿಕವಾಗಿ ಬೆಲೆ ಏರಿಕೆಯಾದಾಗಲೆಲ್ಲ ಭಾರತವೂ ರಫ್ತು ನಿರ್ಬಂಧ ತಂತ್ರಕ್ಕೆ ಶರಣಾಗಿದೆ. 2007-08 ಹಾಗೂ 2010-11ರಲ್ಲಿ ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಸಮಸ್ಯೆ ಎದುರಾದಾಗ ಹೀಗೆಯೇ ಬಾಸ್ಮತಿಯೇತರ ಅಕ್ಕಿಗಳ ಹಾಗೂ ಇತರ ವಿಧದ ಅಕ್ಕಿಗಳ ರಫ‌¤ನ್ನು ಬಹುಕಾಲದ ವರೆಗೆ ನಿಲ್ಲಿಸಿತ್ತು. 2022ರಲ್ಲಿ ರಷ್ಯಾ -ಉಕ್ರೇನ್‌ ಯುದ್ಧ ಆರಂಭವಾದಾಗಲೂ ಆಮದಿನ ಬೇಡಿಕೆ ಹೆಚ್ಚಾಗಬಹುದು ಹಾಗೂ ಹಣದುಬ್ಬರದ ಏರಿಕೆಯಲ್ಲಿ ಇದು ಪರಿಣಾಮ ಬೀರಬಹುದು ಎಂದು ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿತ್ತು.

ಪರಿಣಾಮವೇನು ?
ಭಾರತದ ಈ ನಿರ್ಧಾರದಿಂದ ಅಕ್ಕಿಯನ್ನೇ ಪ್ರಧಾನ ಆಹಾರವಾಗಿರಿಸಿಕೊಂಡು, ಅಕ್ಕಿಗಾಗಿ ಭಾರತದ ಮೇಲೆ ಅವಲಂಬಿತವಾಗಿರುವ ದೇಶಗಳು ಇದರಿಂದ ಸಂಕಷ್ಟಕ್ಕೆ ಒಳಗಾಗಲಿವೆ. ಪ್ರಪಂಚದಲ್ಲಿ ಈಗಾಗಲೇ ಆಹಾರದ ಕೊರತೆಯಿರುವ ದೇಶಗಳಲ್ಲಿ ಆಹಾರದ ಅಭದ್ರತೆ ಎದುರಾಗಬಹುದು.

ಪ್ರಪಂಚದ ಒಟ್ಟಾರೆ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಶೇ.11ರಷ್ಟು ಪಾಲನ್ನು ಅಕ್ಕಿ, ಗೋಧಿ ಶೇ.27 ಹಾಗೂ ಸೋಯಾಬಿನ್‌ ಶೇ.42ರಷ್ಟು ಪಾಲನ್ನು ಹೊಂದಿದೆ. ಈ ನಿರ್ಬಂಧವು ಶೇ.40ರಷ್ಟು ಅಕ್ಕಿ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಇದರಿಂದಾಗಿ ಇನ್ನುಳಿದ ಆಹಾರ ಪದಾರ್ಥಗಳ ಬೇಡಿಕೆ ಹೆಚ್ಚಲಿದ್ದು, ಅವುಗಳ ಉತ್ಪಾದಕ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ.

ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಇತರ ದೇಶಗಳು ಈ ಆಹಾರ ಧಾನ್ಯಗಳ ರಫ್ತಿನ ಮೇಲೆ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ಅಲ್ಲದೇ ಅಕ್ಕಿ ರಫ್ತಿನ ಮೇಲಿನ ಸುಂಕದಲ್ಲಿಯೂ ಏರಿಕೆಯಾಗಬಹುದು.

ಟೊಮೇಟೊ ಬದಲಿಗೆ ಅಕ್ಕಿ ನೀಡಿ!
ಹವಮಾನ ವೈಪರೀತ್ಯ ಹಾಗೂ ಕಡಿಮೆ ಮಳೆಯ ಕಾರಣ ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಟೊಮೇಟೊ ಬೆಲೆಯು ಗಗನಕ್ಕೇರಿದೆ. ಈ ಕಾರಣದಿಂದ ಬೇರೆ ದೇಶಗಳಿಂದ ಟೊಮೇಟೊವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತಕ್ಕೆ ಟೊಮೇಟೊವನ್ನು ರಫ್ತು ಮಾಡುತ್ತಿರುವ ನೇಪಾಲ ಸರಕಾರ ಅದರ ಬದಲಾಗಿ ನಮಗೆ ಅಕ್ಕಿಯನ್ನು ನೀಡಿ ಎಂದು ಬೇಡಿಕೆಯಿಟ್ಟಿದೆ. 2021-22ರಲ್ಲಿ ನೇಪಾಲವು ಭಾರತದಿಂದ 1.4 ಮಿಲಿಯನ್‌ ಟನ್‌ನಷ್ಟು ಅಕ್ಕಿ ಹಾಗೂ 1.38 ಮಿಲಿಯನ್‌ ಟನ್‌ ಬಾಸ್ಮತಿಯೇತರ ಅಕ್ಕಿ ಹಾಗೂ 19 ಸಾವಿರ ಟನ್‌ ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಂಡಿದೆ.

  ವಿಧಾತ್ರಿ ಭಟ್‌, ಉಪ್ಪುಂದ

Advertisement

Udayavani is now on Telegram. Click here to join our channel and stay updated with the latest news.

Next