Advertisement
ರೋಚಕ ಆ ಅಂತಿಮ ಓವರ್!ಭಾರತದ ಗೆಲುವಿಗೆ 6 ಎಸೆತಗಳಲ್ಲಿ 6 ರನ್ನುಗಳ ಅಗತ್ಯವಿತ್ತು. ಈ ಹಂತದಲ್ಲಿ ಕ್ರೀಸ್ ನಲ್ಲಿದ್ದಿದ್ದು ಬೌಲರ್ ಕುಲದೀಪ್ ಯಾದವ್ ಮೊದಲ ಎಸೆತದಲ್ಲಿ 1 ರನ್ ತೆಗೆದರು. ನಂತರ ಕ್ರೀಸ್ ಗೆ ಬಂದ ಜಾಧವ್ 2ನೇ ಎಸೆತದಲ್ಲಿ 1 ರನ್ ತೆಗೆದರು. 3ನೇ ಎಸೆತದಲ್ಲಿ ಜಾಧವ್ 2 ರನ್ ಹೊಡೆದರು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ ಎಸೆತದಲ್ಲಿ ಗೆಲುವಿಗೆ 1 ರನ್ ಅಗತ್ಯವಿತ್ತು ಕ್ರೀಸ್ ನಲ್ಲಿದ್ದಿದ್ದು ಜಾಧವ್ 1 ರನ್ ತೆಗೆಯುವ ಮೂಲಕ ಭಾರತ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತು.
ಬಾಂಗ್ಲಾ ನೀಡಿದ 222 ರನ್ನುಗಳ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ತಂಡದ ಮೊತ್ತ 35 ರನ್ನುಗಳಾಗುವಷ್ಟರಲ್ಲಿ 15 ರನ್ ಗಳಿಸಿದ್ದ ಶಿಖರ್ ಧವನ್ ಅವರು ಔಟಾದರು. ಒನ್ ಡೌನ್ ಬ್ಯಾಟ್ಸ್ ಮನ್ ಅಂಬಟಿ ರಾಯುಡು (2) ಸಹ ವಿಫಲರಾದರು. ಇತ್ತ ಇನ್ನೊಂದು ಬದಿಯಲ್ಲಿ ಕಪ್ತಾನ ರೋಹಿತ್ ಶರ್ಮಾ (48) ತಾಳ್ಮೆಯ ಆಟಕ್ಕೆ ಮೊರೆಹೋದರು. ಇವರಿಗೆ ದಿನೇಶ್ ಕಾರ್ತಿಕ್ (37) ಉತ್ತಮ ಬೆಂಬಲ ನೀಡಿದರು. ಈ ಜೋಡಿ 37 ರನ್ನುಗಳ ಜೊತೆಯಾಟ ದಾಖಲಿಸಿತು. ಈ ಹಂತದಲ್ಲಿ ಅರ್ಧಶತಕದ ಅಂಚಿನಲ್ಲಿದ್ದ ಶರ್ಮಾ ಔಟಾದರು.
ನಂತರ ಜೊತೆಯಾದ ಧೋನಿ (36) ಕಾರ್ತಿಕ್ ಜೊತೆ ನಿಧಾನಗತಿಯ ಆಟಕ್ಕಿಳಿದು ವಿಕೆಟ್ ಉಳಿಸಿಕೊಳ್ಳುವತ್ತ ಗಮನಹರಿಸಿದರು. ಈ ಜೋಡಿ 54 ರನ್ನುಗಳ ಅಮೂಲ್ಯ ಜೊತೆಯಾಟದಲ್ಲಿ ಪಾಲ್ಗೊಂಡಿತು. ಸುಮಾರು 14 ಓವರುಗಳ ತನಕ ಧೋನಿ-ಕಾರ್ತಿಕ್ ಜೋಡಿ ಕ್ರೀಸನ್ನು ಆಕ್ರಮಿಸಿಕೊಂಡು ಬಾಂಗ್ಲಾ ಬೌಲರ್ ಗಳನ್ನು ಕಾಡಿದರು. 61 ಎಸೆತಗಳಲ್ಲಿ 37ರನ್ ಗಳಿಸಿದ್ದ ಕಾರ್ತಿಕ್ ಔಟಾದ ಬಳಿಕ ಬಂದ ಕೇಧಾರ್ ಜಾಧವ್ (19 ರನ್ – ಗಾಯಗೊಂಡು ನಿವೃತ್ತಿ) ಧೋನಿಗೆ ಸಾಥ್ ನೀಡಿದರು. ಆದರೆ ತಂಡದ ಮೊತ್ತ 160 ಆಗಿದ್ದಾಗ ಧೋನಿ ಕ್ಯಾಚ್ ಕೊಟ್ಟು ನಿರ್ಗಮಿಸಿದ್ದರು, ಅವರ 36 ರನ್ ಗಳು 67 ಎಸೆತಗಳಲ್ಲಿ ಬಂದಿದ್ದು ಅವರ ತಾಳ್ಮೆಯ ಆಟಕ್ಕೆ ಸಾಕ್ಷಿಯಾಗಿತ್ತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಕೇದಾರ್ ಜಾಧವ್ ಗಾಯಗೊಂಡು ನಿವೃತ್ತರಾದರು. ಭಾರತದ ಗೆಲುವಿಗೆ 11 ರನ್ನುಗಳ ಅಗತ್ಯವಿದ್ದಾಗ ಉತ್ತಮವಾಗಿ ಆಡುತ್ತಿದ್ದ ರವೀಂದ್ರ ಜಡೆಜಾ 23 ರನ್ ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್ 21 ರನ್ ಹೊಡೆದು ಮಿಂಚಿದರು. ಗಾಯಗೊಂಡು ನಿವೃತ್ತಿಯಾಗಿದ್ದ ಕೇಧಾರ್ ಜಾಧವ್ (23) ಕೊನೆಯಲ್ಲಿ ಎಚ್ಚರಿಕೆಯ ಆಟವಾಡಿ ಭಾರತ ಜಯದ ಗುರಿ ಮುಟ್ಟುವಲ್ಲಿ ನೆರವಾದರು. ಜಾಧವ್ ಗೆ ಉತ್ತಮ ಬೆಂಬಲ ನೀಡಿದ ಕುಲದೀಪ್ ಯಾದವ್ (5) ಲಾಸ್ಟ್ ಓವರ್ ಪ್ರೆಶರ್ ಅನ್ನು ಉತ್ತಮವಾಗಿ ನಿಭಾಯಿಸಿದರು. ಬಾಂಗ್ಲಾ ಪರ ವೇಗಿಗಳಾದ ಮುಸ್ತಫಿಝುರ್ ರಹಮಾನ್ ಹಾಗೂ ರುಬೆಲ್ ಹುಸೈನ್ 2 ವಿಕೆಟ್ ಪಡೆದರೆ, ನಝ್ಮಲ್ ಇಸ್ಲಾಮ್, ಮೊರ್ತಜಾ, ಮತ್ತು ಮುಹಮ್ಮದುಲ್ಲಾ ತಲಾ 1 ವಿಕೆಟ್ ಪಡೆದರು.
Related Articles
ಟಾಸ್ ಗೆದ್ದ ರೋಹಿತ್ ಶರ್ಮಾ ಬಾಂಗ್ಲಾದೇಶಕ್ಕೆ ಮೊದಲು ಬ್ಯಾಟಿಂಗ್ ಬಿಟ್ಟುಕೊಟ್ಟರು. ಇದರ ಭರಪೂರ ಲಾಭವೆತ್ತಿದ ಬಾಂಗ್ಲಾ ಓಪನರ್ ಗಳು ಲಿಟನ್ ದಾಸ್ (121) ಭರ್ಜರಿ ಶತಕದ ನೆರವಿನಿಂದ ಮೊದಲ ವಿಕೆಟ್ ಗೆ 20.5 ಓವರುಗಳಲ್ಲಿ 120 ರನ್ನುಗಳನ್ನು ಕಲೆಹಾಕಿದರು. ಈ ಹಂತದಲ್ಲಿ ಬಾಂಗ್ಲಾ ದೊಡ್ಡ ಮೊತ್ತವನ್ನು ಪೇರಿಸುವ ಸೂಚನೆ ಸಿಕ್ಕಿತ್ತು. ದಾಸ್ 117 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 121 ರನ್ ಬಾರಿಸಿ ಮಿಂಚಿದರು. ಈ ಹಂತದಲ್ಲಿ ಮೆಹ್ದಿ ಹಸನ್ (32) ಔಟಾಗುವುದರೊಂದಿಗೆ ಬಾಂಗ್ಲಾ ಬ್ಯಾಟಿಂಗ್ ಲೈನ್ ಅಪ್ ಕುಸಿಯಲಾರಂಭಿಸಿತು. ಮಧ್ಯಮ ಕ್ರಮಾಂಕದಲ್ಲಿ ಸೌಮ್ಯ ಸರ್ಕಾರ್ (33) ಮಾತ್ರ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಬಾಂಗ್ಲಾ 48.3 ಓವರುಗಳಲ್ಲಿ 222 ರನ್ನುಗಳಿಗೆ ಆಲೌಟ್ ಆಯಿತು. ಈ ಮೂಲಕ ಏಷ್ಯಾಕಪ್ ಹ್ಯಾಟ್ರಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಭಾರತಕ್ಕೆ 223 ರನ್ನುಗಳ ಅಗತ್ಯವಿದೆ.
Advertisement
ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಜಾಧವ್ 2 ವಿಕೆಟ್, ಬುಮ್ರಾ ಹಾಗೂ ಚಾಹಲ್ ತಲಾ 1 ವಿಕೆಟ್ ಪಡೆದರು. 3 ವಿಕೆಟ್ ರನೌಟ್ ರೂಪದಲ್ಲಿ ಬಂತು.