ಅನಂತಪುರ: ರಿಯಾನ್ ಪರಾಗ್ ಮತ್ತು ಶಾಶ್ವತ್ ರಾವತ್ ಅವರ ಬ್ಯಾಟಿಂಗ್ ಸಾಹಸದಿಂದ ಇಂಡಿಯಾ ಸಿ ಎದುರಿನ ದುಲೀಪ್ ಟ್ರೋಫಿ ಪಂದ್ಯದಲ್ಲಿ ಇಂಡಿಯಾ ಎ 4 ವಿಕೆಟ್ ಉಳಿದಿರುವಂತೆಯೇ 333 ರನ್ನುಗಳ ಬೃಹತ್ ಮುನ್ನಡೆ ಸಾಧಿಸಿದೆ.
63 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿರುವ ಇಂಡಿಯಾ ಎ, ಶನಿವಾರದ ಆಟದ ಮುಕ್ತಾಯಕ್ಕೆ 6 ವಿಕೆಟಿಗೆ 270 ರನ್ ಮಾಡಿದೆ. ರಿಯಾನ್ ಪರಾಗ್ 73, ಶಾಶ್ವತ್ ರಾವತ್ 53 ರನ್ ಹೊಡೆದರು. ಇವರಿಬ್ಬರಿಂದ 4ನೇ ವಿಕೆಟಿಗೆ 105 ರನ್ ಒಟ್ಟುಗೂಡಿತು.
40 ರನ್ ಗಳಿಸಿರುವ ಕೀಪರ್ ಕುಮಾರ ಕುಶಾಗ್ರ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಯಕ ಮಾಯಾಂಕ್ ಅಗರ್ವಾಲ್ 34 ರನ್ ಮಾಡಿದರು. ಇಂಡಿಯಾ ಸಿ ಪರ ಅಂಶುಲ್ ಕಾಂಬೋಜ್, ಗೌರವ್ ಯಾದವ್ ಮತ್ತು ಮಾನವ್ ಸುಥಾರ್ ತಲಾ 2 ವಿಕೆಟ್ ಉರುಳಿಸಿದರು.
ಶತಕದತ್ತ ರಿಕಿ ಭುಯಿ:
ಇಂಡಿಯಾ ಬಿ ವಿರುದ್ಧದ ಮತ್ತೂಂದು ಪಂದ್ಯದಲ್ಲಿ ಇಂಡಿಯಾ ಡಿ 5 ವಿಕೆಟಿಗೆ 244 ರನ್ ಗಳಿಸಿದ್ದು, 311 ರನ್ ಲೀಡ್ ಹೊಂದಿದೆ. ಇಂಡಿಯಾ ಡಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಕಿ ಭುಯಿ 90 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಶತಕದ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ನಾಯಕ ಶ್ರೇಯಸ್ 50 ರನ್, ಸಂಜು ಸ್ಯಾಮ್ಸನ್ 45 ರನ್ ಹೊಡೆದರು.