Advertisement

ರಾಜ್‌ಕೋಟ್‌ನಲ್ಲಿ ಸಾಧ್ಯವೇ ಕಾಂಗರೂ ಬೇಟೆ?

09:57 AM Jan 17, 2020 | Team Udayavani |

ರಾಜ್‌ಕೋಟ್‌: ಭಾರತದ ಕ್ರಿಕೆಟ್‌ ಪೌರುಷವೇನಿದ್ದರೂ ಶ್ರೀಲಂಕಾ, ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್‌ನಂಥ ಸಾಮಾನ್ಯ ತಂಡಗಳ ವಿರುದ್ಧ ಮಾತ್ರ ಎಂಬುದನ್ನು ಮಂಗಳವಾರದ ಮುಂಬಯಿ ಮುಖಾಮುಖೀ ಸಾಬೀತುಪಡಿಸಿದೆ. ಪ್ರಚಂಡ ಪ್ರದರ್ಶನ ನೀಡಿದ ಆಸ್ಟ್ರೇಲಿಯ ಕೊಹ್ಲಿ ಪಡೆಯನ್ನು 10 ವಿಕೆಟ್‌ಗಳಿಂದ ಹೊಡೆದುರುಳಿಸಿದೆ. “ಭಾರತ ಆಲೌಟ್‌; ಆಸ್ಟ್ರೇಲಿಯ ನೋಲಾಸ್‌’ ಎಂಬುದು ಇತ್ತಂಡಗಳ ನಡುವಿನ ವ್ಯತ್ಯಾಸಕ್ಕೆ ಸಾಕ್ಷಿ!

Advertisement

ಇದಕ್ಕೆ ಶುಕ್ರವಾರ ರಾಜ್‌ಕೋಟ್‌ನಲ್ಲಿ ತಿರುಗೇಟು ನೀಡಲೇಬೇಕಾದ ಒತ್ತಡ ಹಾಗೂ ಅನಿವಾರ್ಯತೆ ಟೀಮ್‌ ಇಂಡಿಯಾ ಮೇಲಿದೆ. ಇಲ್ಲವಾದರೆ 3 ಪಂದ್ಯಗಳ ಸರಣಿ ಭಾರತದ ಕೈಜಾರಲಿದೆ. ರಾಜ್‌ಕೋಟ್‌ ಇತಿಹಾಸ ಕೂಡ ಆತಿಥೇಯರ ಪರವಾಗಿಲ್ಲ. ಇಲ್ಲಿ ಆಡಿದ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ಸೋಲನುಭವಿಸಿದೆ. ಈ ಕಂಟಕವನ್ನೂ ಭಾರತ ತಂಡ ಮೀರಿ ನಿಲ್ಲಬೇಕಿದೆ.

ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಇರುವುದು ಒಂದೇ ಮಾರ್ಗ, ಮೊನ್ನೆ ಕಾಂಗರೂ ಪಡೆ ತೋರಿದಂಥ ಚಾಂಪಿಯನ್ನರ ಆಟವನ್ನು ಭಾರತ ಪ್ರದರ್ಶಿಸುವುದು. ಇದು ಸಾಧ್ಯವೇ ಎಂಬುದೊಂದು ಪ್ರಶ್ನೆ ಹಾಗೂ ಕುತೂಹಲ.

ಆದರೆ ಕ್ರಿಕೆಟ್‌ನಲ್ಲಿ ಎಲ್ಲವೂ ಸಾಧ್ಯವಿದೆ. ಇಂದು ಅಬ್ಬರಿಸಿದ ತಂಡ ನಾಳೆ ದಿಢೀರನೇ ಪಾತಾಳಕ್ಕಿಳಿಯಬಹುದು. ಹಾಗೆಯೇ ಇಂದು ಕುಸಿದವರು ನಾಳೆ ಮೇಲೆದ್ದು ನಿಲ್ಲಲೂಬಹುದು. ಆದರೆ ಆಸ್ಟ್ರೇಲಿಯದಂಥ ಚಾಂಪಿಯನ್ನರ ಆಟವ ನ್ನಾಡುವ, ಸ್ಥಿರ ಪ್ರದರ್ಶನ ನೀಡುವ ತಂಡದೆದುರು ಇಂಥ ಪವಾಡ ಸಂಭವಿಸುವುದು ಅಷ್ಟು ಸುಲಭವಲ್ಲ.

ಬಯಲಾದ ಬೌಲಿಂಗ್‌ ಬಂಡವಾಳ
ಬುಮ್ರಾ, ಶಮಿ, ಕುಲದೀಪ್‌, ಠಾಕೂರ್‌ ಅವರನ್ನೊಳಗೊಂಡ ಭಾರತದ ಬೌಲಿಂಗ್‌ ವಿಭಾಗ ಅತ್ಯಂತ ಅಪಾಯಕಾರಿಯೆಂದೇ ಭಾವಿಸಲಾಗಿತ್ತು. ಆದರೆ ವಾರ್ನರ್‌-ಫಿಂಚ್‌ ಸೇರಿಕೊಂಡು ಇದನ್ನು ಧೂಳೀಪಟ ಮಾಡಿಬಿಟ್ಟರು.

Advertisement

ಆಸೀಸ್‌ ಆರಂಭಿಕರು ಈಗಲೂ ನಮ್ಮವರಿಗೆ ದುಃಸ್ವಪ್ನವಾಗಿ ಕಾಡುತ್ತಿದ್ದರೆ ಆಶ್ಚರ್ಯವೇನಿಲ್ಲ.

ಆಸ್ಟ್ರೇಲಿಯದ ಬ್ಯಾಟಿಂಗ್‌ ಸಾಮರ್ಥ್ಯ ಕೇವಲ ವಾರ್ನರ್‌-ಫಿಂಚ್‌ ಜೋಡಿಗಷ್ಟೇ ಸೀಮಿತವಾಗಿಲ್ಲ. ಇನ್ನೂ ಮುಂದುವರಿದರೆ ಲಬುಶೇನ್‌, ಸ್ಮಿತ್‌, ಟರ್ನರ್‌, ಕ್ಯಾರಿ ರನ್‌ ಪ್ರವಾಹ ಹರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅಕಸ್ಮಾತ್‌ ಆರಂಭಿಕರು ವಿಫ‌ಲರಾದರೆ ಇವರು ವಿಚಲಿತರಾಗುವ ಪ್ರಮೇಯವೇ ಇಲ್ಲ.

ಆಸ್ಟ್ರೇಲಿಯದ ಬೌಲಿಂಗ್‌ ಅದೆಷ್ಟು ಘಾತಕ ಎಂಬುದಕ್ಕೂ ವಾಂಖೇಡೆಯಲ್ಲಿ ನಿದರ್ಶನ ಲಭಿಸಿದೆ. ಸ್ಟಾರ್ಕ್‌, ಕಮಿನ್ಸ್‌, ರಿಚರ್ಡ್‌ಸನ್‌, ಝಂಪ, ಅಗರ್‌ ಎಲ್ಲರೂ ವಿಕೆಟ್‌ ಬೇಟೆಯಲ್ಲಿ ತೊಡಗಿದ್ದರು. ಧವನ್‌, ರಾಹುಲ್‌ ಹೊರತು ಪಡಿಸಿದರೆ ಕಾಂಗರೂ ದಾಳಿಯನ್ನು ತಡೆದು ನಿಲ್ಲಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. ರಾಜ್‌ಕೋಟ್‌ನಲ್ಲೂ ನಮ್ಮವರು ಕ್ರೀಸ್‌ ಆಕ್ರಮಿಸಿಕೊಳ್ಳದೇ ಹೋದರೆ ಉಳಿಗಾಲವಿಲ್ಲ!

ಆಸ್ಟ್ರೇಲಿಯ ವಿಶ್ವ ಚಾಂಪಿಯನ್‌ ಅಲ್ಲದೇ ಇರ ಬಹುದು, ಆದರೆ ಚಾಂಪಿಯನ್ನರ ಆಟವನ್ನಾಡುವಲ್ಲಿ ಯಾವತ್ತೂ ಹಿಂದೆ ಬೀಳುವುದಿಲ್ಲ. 2023ರ ವಿಶ್ವಕಪ್‌ಗೆ ಈಗಿಂದಲೇ ತಂಡವನ್ನು ಕಟ್ಟುವ ಯೋಜನೆಯಲ್ಲಿರುವ ಆಸೀಸ್‌, ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲೇಬೇಕೆಂದು ಹಠತೊಟ್ಟು ಆಡುತ್ತದೆ. ಎದುರಾಳಿಗಳ ಅಪಾಯಕಾರಿ ಆಟಗಾರರನ್ನೇ ಟಾರ್ಗೆಟ್‌ ಮಾಡಿಕೊಂಡು ಉಳಿದ ವರನ್ನೆಲ್ಲ ನರ್ವಸ್‌ ಮಾಡಿಬಿಡುತ್ತದೆ.

ಮುಂಬಯಿಯಲ್ಲಿ ಸಂಭವಿಸಿದ್ದೂ ಇದೇ!
ಕೊಹ್ಲಿ ಮತ್ತೆ 3ನೇ ಕ್ರಮಾಂಕಕ್ಕೆ
ರಾಜ್‌ಕೋಟ್‌ನಲ್ಲಿ ಭಾರತದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಕೆಲವು ಅನಿವಾರ್ಯ ಬದಲಾವಣೆ ಸಂಭವಿಸಲಿದೆ. ಕ್ಯಾಪ್ಟನ್‌ ಕೊಹ್ಲಿ ಮತ್ತೆ ವನ್‌ಡೌನ್‌ನಲ್ಲಿ ಬರುವುದು ಖಚಿತ. ಆಗ ರಾಹುಲ್‌ 4ನೇ ಕ್ರಮಾಂಕಕ್ಕೆ ಇಳಿಯಬೇಕಾಗುತ್ತದೆ. ಜತೆಗೆ ಪಂತ್‌ ಗೈರಲ್ಲಿ ಅವರಿಗೆ ಕೀಪಿಂಗ್‌ ಜವಾಬ್ದಾರಿಯೂ ಇದೆ.

ಪಂತ್‌ ಬದಲು ಮನೀಷ್‌ ಪಾಂಡೆ ಅಥವಾ ಕೇದಾರ್‌ ಜಾಧವ್‌ ಆಡುವ ಬಳಗವನ್ನು ಪ್ರವೇ ಶಿಸ ಬಹುದು. ಹಾಗೆಯೇ ವೇಗಿ ನವದೀಪ್‌ ಸೈನಿ ಕೂಡ ಆಡುವ ಸಾಧ್ಯತೆ ಇದೆ. ಕುಲದೀಪ್‌ ಬದಲು ಚಹಲ್‌ ಬರಬಹುದು. ಯಾರೇ ಆಡಲಿಳಿದರೂ ಭಾರತದಲ್ಲಿ “ಬ್ಯಾಕ್‌ ಟು ಬ್ಯಾಕ್‌ ಸೀರಿಸ್‌’ ಗೆಲ್ಲಲು ಹೊರಟಿರುವ ಕಾಂಗರೂಗಳಿಗೆ ಕಡಿವಾಣ ಹಾಕುವುದು ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next