Advertisement

India-Australia ವನಿತಾ ಕ್ರಿಕೆಟ್‌: ಇಂದಿನಿಂದ 3 ಪಂದ್ಯಗಳ ಏಕದಿನ ಸರಣಿ

11:47 PM Dec 27, 2023 | Team Udayavani |

ಮುಂಬಯಿ: ಟೆಸ್ಟ್‌ ಪಂದ್ಯಗಳಲ್ಲಿ ಸತತ ಎರಡು ಗೆಲುವಿನ ಬಳಿಕ ಬಹಳಷ್ಟು ಆತ್ಮವಿಶ್ವಾಸ ದಲ್ಲಿರುವ ಭಾರತೀಯ ವನಿತೆಯರು ಗುರುವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿದೆ. ಏಕದಿನ ಪಂದ್ಯಗಳಲ್ಲಿ ಕಳಪೆ ದಾಖಲೆ ಹೊಂದಿರುವ ಭಾರತ ತಂಡವು ಈ ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡುವ ವಿಶ್ವಾಸದಲ್ಲಿದೆ.

Advertisement

ಕಳೆದ ಮೂರು ಪಂದ್ಯಗಳಲ್ಲಿ (ಎರಡು ಟೆಸ್ಟ್‌ ಮತ್ತು ಒಂದು ಟಿ20) ಅಮೋಘ ಗೆಲುವು ದಾಖಲಿಸಿದ ಭಾರತ ತಂಡ ಇದೀಗ ಉತ್ತಮ ಫಾರ್ಮ್ನಲ್ಲಿದೆ. ಇದೇ ಉತ್ಸಾಹದಲ್ಲಿ ಭಾರತವು ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲೂ ಆಡಿದರೆ ಖಂಡಿತವಾಗಿಯೂ ಮೇಲುಗೈ ಸಾಧಿಸಬಹುದು. ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟಿ20 ಪಂದ್ಯದಲ್ಲಿ ಸೋತ ಬಳಿಕ ಭಾರತ ತಂಡ ಅಂತಿಮ ಟಿ20 ಪಂದ್ಯ ಸಹಿತ ಎರಡು ಟೆಸ್ಟ್‌ಗಳಲ್ಲಿ ಅನುಕ್ರಮವಾಗಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯವನ್ನು ಸೋಲಿಸಿ ಮೆರೆದಿತ್ತು.

ಏಕೈಕ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡ ವನ್ನು 347 ರನ್ನುಗಳಿಂದ ಭರ್ಜರಿ ಯಾಗಿ ಸೋಲಿಸಿದ್ದ ಭಾರತವು ಕಳೆದ ವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಉರುಳಿಸಿತ್ತು. ಇದೇ ಮೈದಾನದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ.

ಭಾರತೀಯ ವನಿತೆಯರ ಸದ್ಯದ ಫಾರ್ಮ್ ಗಮನಿಸಿದರೆ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ತಂಡವು ಆಸ್ಟ್ರೇಲಿಯ ವಿರುದ್ಧ ಉತ್ತಮ ಸಾಧನೆಗೈಯುವ ಸಾಧ್ಯತೆಯಿದೆ. ಆದರೆ 50 ಓವರ್‌ಗಳ ಈ ಹೋರಾಟದಲ್ಲಿ ಭಾರತವು ಪಂದ್ಯದ ಪ್ರತಿಯೊಂದು ವಿಭಾಗದಲ್ಲಿಯೂ ಮೇಲುಗೈ ಸಾಧಿಸುವುದು ಅತ್ಯಗತ್ಯವಾಗಿದೆ.

ಕೇವಲ 10ರಲ್ಲಿ ಜಯ
ಸಮಗ್ರವಾಗಿ ಆಸ್ಟ್ರೇಲಿಯ ವಿರುದ್ಧ ಆಡಲಾದ 50 ಏಕದಿನ ಪಂದ್ಯಗಳಲ್ಲಿ ಭಾರತ 40 ಪಂದ್ಯಗಳಲ್ಲಿ ಸೋತಿದ್ದರೆ ಕೇವಲ 10ರಲ್ಲಿ ಜಯ ಸಾಧಿಸಿದೆ. ತವರಿನ ಪಂದ್ಯಗಳಲ್ಲಿ ಭಾರತದ ದಾಖಲೆ ಅತ್ಯಂತ ಕಳಪೆಯಾಗಿದೆ. ಆಡಿದ 21 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿದ್ದರೆ 17 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. 2007ರ ಫೆಬ್ರವರಿ ಬಳಿಕ ತವರಿನಲ್ಲಿ ಆಸ್ಟ್ರೇಲಿಯ ವಿರುದ್ಧ ಆಡಲಾದ ಏಳು ಪಂದ್ಯಗಳಲ್ಲಿ ಭಾರತ ಜಯವನ್ನೇ ಕಂಡಿಲ್ಲ.

Advertisement

 ಸ್ಥಳ: ಮುಂಬಯಿ
ಆರಂಭ: ಮಧ್ಯಾಹ್ನ 1.30

Advertisement

Udayavani is now on Telegram. Click here to join our channel and stay updated with the latest news.

Next