Advertisement

2 ನೇ ಟೆಸ್ಟ್‌: ಆಸೀಸ್‌ ಆಲೌಟ್‌, ಭಾರತಕ್ಕೆ ಆರಂಭಿಕ ಅಘಾತ

09:44 AM Dec 15, 2018 | Team Udayavani |

ಪರ್ತ್‌: ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಇತ್ತಂಡಗಳು ಸಮಬಲದ ಸಾಧನೆ ದಾಖಲಿಸಿವೆ. ಆರಂಭಿಕ ಜೋಡಿಯ ಶತಕದ ಜತೆಯಾಟದಿಂದ ಭಾರೀ ಮೊತ್ತದ ಸೂಚನೆ ನೀಡಿದ್ದ ಆತಿಥೇಯ ಆಸ್ಟ್ರೇಲಿಯಕ್ಕೆ ಭಾರತದ ಬೌಲರ್‌ಗಳು ಕಡಿವಾಣ ಹಾಕಿದ್ದಾರೆ. ವಿಕೆಟ್‌ ನಷ್ಟವಿಲ್ಲದೆ 112 ರನ್‌ ಮಾಡಿ ಮುನ್ನುಗ್ಗುತ್ತಿದ್ದ ಆಸೀಸ್‌, 2 ದಿನದಾಟದ ಆರಂಭಕ್ಕೆ 326 ಕ್ಕೆ ಆಲೌಟಾಗಿದೆ. 

Advertisement

ಪರ್ತ್‌ನ ನೂತನ ಅಂಗಳದಲ್ಲಿ ಭಾರತವೂ  ಆರಂಭಿಕ ಅಘಾತ ಎದುರಿಸಿದ್ದು,ಆರಂಭಿಕ ಆಟಗಾರರಿಬ್ಬರು ನಿರ್ಗಮಿಸಿದ್ದಾರೆ. ಎಲ್‌ ರಾಹುಲ್‌ 2 ರನ್‌ ಮತ್ತು ಮುರಳಿ ವಿಜಯ್‌ ಶೂನ್ಯಕ್ಕೆ ನಿರ್ಗಮಿಸಿದರು. ಚೇತೇಶ್ವರ ಪೂಜಾರಾ 11 ಮತ್ತು ವಿರಾಟ್‌ ಕೊಹ್ಲಿ 19 ರನ್‌ಗಳಿಸಿ ಆಟವಾಡುತ್ತಿದ್ದಾರೆ. ತಂಡ 13 ಓವರ್‌ಗಳಲ್ಲಿ 38 ರನ್‌ಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಕ್ಕೆ ಮಾರ್ಕಸ್‌ ಹ್ಯಾರಿಸ್‌-ಆರನ್‌ ಫಿಂಚ್‌ ಜೋಡಿ ಭದ್ರ ಅಡಿಪಾಯ ನಿರ್ಮಿಸಿತು. “ಬೌಲಿಂಗ್‌ ಫ್ರೆಂಡ್ಲಿ ಗ್ರೀನ್‌ ಟಾಪ್‌’ ಮೇಲೆ ಯಾವುದೇ ಆತಂಕವಿಲ್ಲದೆ ಬ್ಯಾಟ್‌ ಬೀಸಿದ ಆಸೀಸ್‌ ಆರಂಭಿಕರು 35.2 ಓವರ್‌ಗಳಲ್ಲಿ 112 ರನ್‌ ಪೇರಿಸಿ ಭಾರತಕ್ಕೆ ಸವಾಲಾದರು. ಮೊದಲ ಅವಧಿಯಲ್ಲಿ ಇವರಿಬ್ಬರ ಬ್ಯಾಟಿಂಗ್‌ ಬಹಳ ಎಚ್ಚರಿಕೆಯಿಂದ ಕೂಡಿತ್ತು. ಲಂಚ್‌ ವೇಳೆ 26 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 66 ರನ್‌ ದಾಖಲಾಯಿತು. ಆದರೆ ಮುಂದಿನೆರಡು ಅವಧಿಗಳಲ್ಲಿ ತಲಾ 3 ವಿಕೆಟ್‌ ಹಾರಿಸುವ ಮೂಲಕ ಭಾರತ ತಿರುಗಿ ಬಿತ್ತು. 

ಭಾರತದ ಪರ ಪಾರ್ಟ್‌ಟೈಮ್‌ ಸ್ಪಿನ್ನರ್‌ ಹನುಮ ವಿಹಾರಿ 53ಕ್ಕೆ 2, ವೇಗಿ ಇಶಾಂತ್‌ ಶರ್ಮ ಕ್ಕೆ 4 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಜಸ್‌ಪ್ರೀತ್‌ ಬುಮ್ರಾ ಮತ್ತು ಉಮೇಶ್‌ ಯಾದವ್‌ ತಲಾ 2 ವಿಕೆಟ್‌ ಕಿತ್ತರು. ರೋಹಿತ್‌ ಬದಲು ಆಡಲಿಳಿದ ವಿಹಾರಿ, ಅಶ್ವಿ‌ನ್‌ ಅವರಿಂದ ತೆರವಾದ ಸ್ಪಿನ್‌ ಕೊರತೆಯನ್ನೂ ನೀಗಿಸುವಲ್ಲಿ ಯಶಸ್ವಿಯಾದುದೊಂದು ವಿಶೇಷ.

ಮೂವರಿಂದ ಅರ್ಧ ಶತಕ
ಆಸ್ಟ್ರೇಲಿಯದ ಸರದಿಯಲ್ಲಿ 3 ಅರ್ಧ ಶತಕಗಳು ದಾಖಲಾದವು. ಇದರಲ್ಲಿ 2 ಫಿಫ್ಟಿ ಆರಂಭಿಕರಿಂದಲೇ ಬಂತು. ಮಾರ್ಕಸ್‌ ಹ್ಯಾರಿಸ್‌ ಸರ್ವಾಧಿಕ 70, ಆರನ್‌ ಫಿಂಚ್‌ 50 ರನ್‌ ಮಾಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಟ್ರ್ಯಾವಿಸ್‌ ಹೆಡ್‌ 58 ರನ್‌ ಹೊಡೆದರು. ಶಾನ್‌ ಮಾರ್ಷ್‌ 5 ರನ್‌ ಕೊರತೆಯಿಂದ ಅರ್ಧ ಶತಕ ತಪ್ಪಿಸಿಕೊಳ್ಳಬೇಕಾಯಿತು. ಅಗ್ಗಕ್ಕೆ ವಿಕೆಟ್‌ ಒಪ್ಪಿಸಿದವರೆಂದರೆ ಉಸ್ಮಾನ್‌ ಖ್ವಾಜಾ (5) ಮತ್ತು ಪೀಟರ್‌ ಹ್ಯಾಂಡ್ಸ್‌ಕಾಂಬ್‌ (7). ನಾಯಕ ಟಿಮ್‌ ಪೇನ್‌ 16 ರನ್‌ ಮತ್ತು ಬೌಲರ್‌ ಪ್ಯಾಟ್‌ ಕಮಿನ್ಸ್‌ 11 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

ರನ್‌ ಬರಗಾಲದಲ್ಲಿದ್ದ ಫಿಂಚ್‌ ಭರ್ತಿ 50 ರನ್‌ (105 ಎಸೆತ, 6 ಬೌಂಡರಿ) ಬಾರಿಸಿದ ಬಳಿಕ ಬುಮ್ರಾಗೆ ಲೆಗ್‌ ಬಿಫೋರ್‌ ಆಗುವುದರೊಂದಿಗೆ ಆಸ್ಟ್ರೇ ಲಿಯದ ಪತನವೊಂದು ಮೊದಲ್ಗೊಂಡಿತು. ನೋಲಾಸ್‌ 112ರಲ್ಲಿದ್ದ ಆಸೀಸ್‌ 148ಕ್ಕೆ ಮುಟ್ಟುವಷ್ಟರಲ್ಲಿ 4 ವಿಕೆಟ್‌ ಕಳೆದು ಕೊಂಡಿತು. ಫಿಂಚ್‌ ಬೆನ್ನಲ್ಲೇ ಖ್ವಾಜಾ, ಹ್ಯಾರಿಸ್‌ ಮತ್ತು ಹ್ಯಾಂಡ್ಸ್‌ಕಾಂಬ್‌ ಪೆವಿಲಿ ಯನ್‌ ಸೇರಿಕೊಂಡರು. 2ನೇ ಸ್ಲಿಪ್‌ನಲ್ಲಿದ್ದ ಕೊಹ್ಲಿ ಒಂದೇ ಕೈಯಲ್ಲಿ ಪಡೆದ ಅದ್ಭುತ ಕ್ಯಾಚ್‌ ಎನ್ನುವುದು ಹ್ಯಾಂಡ್ಸ್‌ಕಾಂಬ್‌ಗ ಪೆವಿಲಿಯನ್‌ ಹಾದಿ ತೋರಿಸಿತು.

2ನೇ ಟೆಸ್ಟ್‌ ಆಡಲಿಳಿದಿದ್ದ ಹ್ಯಾರಿಸ್‌ ಚೊಚ್ಚಲ ಅರ್ಧ ಶತಕ ದಾಖಲಿಸಿ ಮಿಂಚಿದರು. ಅವರ 70 ರನ್‌ 141 ಎಸೆತಗಳಿಂದ ಬಂತು. ಇದರಲ್ಲಿ 10 ಬೌಂಡರಿ ಸೇರಿತ್ತು. ಹ್ಯಾರಿಸ್‌ 60 ರನ್‌ ಮಾಡಿದ್ದಾಗ ರಾಹುಲ್‌ ಕ್ಯಾಚ್‌ ಒಂದನ್ನು ಕೈಚೆಲ್ಲಿದ್ದರು. ಇದರಿಂದ ಶಮಿಗೆ ವಿಕೆಟ್‌ ನಷ್ಟವಾಗಿತ್ತು.

ಆಧರಿಸಿದ ಮಾರ್ಷ್‌-ಹೆಡ್‌
ಆಸ್ಟ್ರೇಲಿಯದ ಕುಸಿತಕ್ಕೆ ತಡೆಯಾಗಿ ನಿಂತವರು ಶಾನ್‌ ಮಾರ್ಷ್‌ ಮತ್ತು ಟ್ರ್ಯಾವಿಸ್‌ ಹೆಡ್‌. 5ನೇ ವಿಕೆಟಿಗೆ ಜತೆಗೂಡಿದ ಇವರಿಬ್ಬರು 84 ರನ್‌ ಪೇರಿಸಿ ಪರಿಸ್ಥಿತಿಯನ್ನು ಸುಧಾರಿಸಿದರು. ದಿನದ ಕೊನೆಯಲ್ಲಿ ಇವರಿಬ್ಬರೂ ಔಟ್‌ ಆಗುವುದರೊಂದಿಗೆ ಭಾರತ ಮತ್ತೆ ಪಂದ್ಯಕ್ಕೆ ಮರಳಿತು. ಹೆಡ್‌ 80 ಎಸೆತಗಳಿಂದ 58 ರನ್‌ ಹೊಡೆದರು (6 ಬೌಂಡರಿ). ಇದು ಅವರ 3ನೇ, ಈ ಸರಣಿಯಲ್ಲಿ ದಾಖಲಾದ 2ನೇ ಅರ್ಧ ಶತಕ. ಅಡಿಲೇಡ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 72 ರನ್‌ ಮಾಡಿದ್ದರು.

ಕೊಹ್ಲಿ  ಟಾಸ್‌ ಸೋಲಿನ ದಾಖಲೆ
ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಟಾಸ್‌ ಸೋಲಿನಲ್ಲೂ ದಾಖಲೆ ನಿರ್ಮಿಸಿದರು. ಇದು 2018ರ ಟೆಸ್ಟ್‌ ಪಂದ್ಯಗಳಲ್ಲಿ ಕೊಹ್ಲಿ ಸೋತ 9ನೇ ಟಾಸ್‌ ಆಗಿದೆ. ಹೀಗೆ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳಲ್ಲಿ ಟಾಸ್‌ ಸೋತ 3ನೇ ಭಾರತೀಯ ನಾಯಕನೆನಿಸಿದರು. ಇವರಿಗಿಂತ ಮುಂದಿರುವವರೆಂದರೆ ಮಹೇಂದ್ರ ಸಿಂಗ್‌ ಧೋನಿ ಮತ್ತು ಸೌರವ್‌ ಗಂಗೂಲಿ. ಧೋನಿ 2010ರಲ್ಲಿ 12 ಟಾಸ್‌ ಸೋತರೆ, ಗಂಗೂಲಿ 2002ರಲ್ಲಿ 11 ಟಾಸ್‌ ಕಳೆದುಕೊಂಡಿದ್ದರು.

ವಿರಾಟ್‌ ಕೊಹ್ಲಿ 2018ರ ವಿದೇಶಿ ಟೆಸ್ಟ್‌ ಪಂದ್ಯಗಳ ವೇಳೆ 8ನೇ ಸಲ ಟಾಸ್‌ ಸೋತರು. ಇದು ಕ್ಯಾಲೆಂಡರ್‌ ವರ್ಷವೊಂದರಲ್ಲಿ ನಾಯಕನೋರ್ವನಿಗೆ ವಿದೇಶದಲ್ಲಿ ಎದುರಾದ ಅತ್ಯಧಿಕ ಸಂಖ್ಯೆಯ ಟಾಸ್‌ ಸೋಲಾಗಿದೆ. 2002ರಲ್ಲಿ ಸೌರವ್‌ ಗಂಗೂಲಿ ಮತ್ತು 1980ರಲ್ಲಿ ಕ್ಲೈವ್‌ ಲಾಯ್ಡ ಕೂಡ ವಿದೇಶದಲ್ಲಿ 8 ಸಲ ಟಾಸ್‌ ಸೋತಿದ್ದರು.

ವಿಹಾರಿ, ಉಮೇಶ್‌ ಯಾದವ್‌ ಒಳಕ್ಕೆ
ರೋಹಿತ್‌ ಶರ್ಮ ಮತ್ತು ಆರ್‌. ಅಶ್ವಿ‌ನ್‌ ಗಾಯಾಳಾಗಿ ಹೊರಗುಳಿದುದರಿಂದ ಭಾರತದ ಆಡುವ ಬಳಗದಲ್ಲಿ 2 ಬದಲಾವಣೆ ಸಂಭವಿಸಲೇಬೇಕಿತ್ತು. ಇವರಿಬ್ಬರ ಸ್ಥಾನವನ್ನು ಹನುಮ ವಿಹಾರಿ ಮತ್ತು ಉಮೇಶ್‌ ಯಾದವ್‌ ತುಂಬಿದರು. ಇದರೊಂದಿಗೆ ಪರ್ತ್‌ ಅಂಗಳದ ವೇಗದ ಪಿಚ್‌ನ ಲಾಭವೆತ್ತಲು ಭಾರತ 4 ಮಂದಿ ಸ್ಪೆಷಲಿಸ್ಟ್‌ ವೇಗಿಗಳಿಗೆ ಅವಕಾಶ ನೀಡಿದಂತಾಯಿತು.
ಆಸ್ಟ್ರೇಲಿಯ ತಂಡದಲ್ಲಿ ಯಾವುದೇ ಪರಿವರ್ತನೆ ಆಗಲಿಲ್ಲ. ಅಡಿಲೇಡ್‌ನ‌ಲ್ಲಿ ಎಡವಿದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಿತು.

ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಮಾರ್ಕಸ್‌ ಹ್ಯಾರಿಸ್‌    ಸಿ ರಹಾನೆ ಬಿ ವಿಹಾರಿ    70
ಆರನ್‌ ಫಿಂಚ್‌    ಎಲ್‌ಬಿಡಬ್ಲ್ಯು ಬುಮ್ರಾ    50
ಉಸ್ಮಾನ್‌ ಖ್ವಾಜಾ    ಸಿ ಪಂತ್‌ ಬಿ ಯಾದವ್‌    5
ಶಾನ್‌ ಮಾರ್ಷ್‌    ಸಿ ರಹಾನೆ ಬಿ ವಿಹಾರಿ    45
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಕೊಹ್ಲಿ ಬಿ ಇಶಾಂತ್‌    7
ಟ್ರ್ಯಾವಿಸ್‌ ಹೆಡ್‌    ಸಿ ಶಮಿ ಬಿ ಇಶಾಂತ್‌    58
ಟಿಮ್‌ ಪೇನ್‌    ಎಲ್‌ಬಿ ಬುಮ್ರಾ     38
ಪ್ಯಾಟ್‌ ಕಮಿನ್ಸ್‌    ಬಿ ಉಮೇಶ್‌ ಯಾದವ್‌    19
ಮಿಚೆಲ್‌ ಸ್ಟಾರ್ಕ್‌             ಸಿ ಪಂತ್‌ ಬಿ ಇಶಾಂತ್‌  6
ನಥನ್‌ ಲಯನ್‌      ಔಟಾಗದೆ 9 
ಹ್ಯಾಜಲ್‌ವುಡ್‌       ಸಿ ಪಂತ್‌  ಬಿ ಇಶಾಂತ್‌ 0 
ಇತರ        19
ಒಟ್ಟು      326

ವಿಕೆಟ್‌ ಪತನ: 1-112, 2-130, 3-134, 4-148, 5-232, 6-251.7 -310 8-310 , 9-326, 10-326
ಬೌಲಿಂಗ್‌: ಇಶಾಂತ್‌ ಶರ್ಮ    20.3-7-41-4
ಜಸ್‌ಪ್ರೀತ್‌ ಬುಮ್ರಾ        26-8-53-2
ಉಮೇಶ್‌ ಯಾದವ್‌        23-3-78-2
ಮೊಹಮ್ಮದ್‌ ಶಮಿ        24-3-80-0
ಹನುಮ ವಿಹಾರಿ        14-1-53-2
ಮುರಳಿ ವಿಜಯ್‌        1-0-10-0

Advertisement

Udayavani is now on Telegram. Click here to join our channel and stay updated with the latest news.

Next