ಭಾರತೀಯ ಕ್ರೀಡಾಪಟುಗಳು ಕಾಮನ್‌ವೆಲ್ತ್ ಗೇಮ್ಸ್‌ನ 9ನೇ ದಿನ ಪದಕ ಮಳೆಯನ್ನು ಸುರಿಸಿದರು. ಶೂಟಿಂಗ್, ಕುಸ್ತಿ, ಬಾಕ್ಸಿಂಗ್ ಹಾಗೂ ಟೇಬಲ್ ಟೆನಿಸ್‌ನಲ್ಲಿ ಭಾರತದ ಸ್ಪರ್ಧಿಗಳು ಭರಪೂರ ಪದಕ ಬಾಚಿ ಬೀಗಿದರು. ಒಟ್ಟು 3 ಚಿನ್ನ, 4 ಬೆಳ್ಳಿ, 4 ಕಂಚು, ಸೇರಿದಂತೆ 9ನೇ ದಿನ 11 ಪದಕ ಭಾರತೀಯರ ದ್ದಾಯಿತು ಎನ್ನುವುದು ವಿಶೇಷ.
ತೇಜಸ್ವಿನಿ, ಅನೀಶ್, ಭಜರಂಗ್‌ಗೆ ಚಿನ್ನ: 50 ಮೀ. ರೈಫಲ್ ಮಹಿಳಾ ತ್ರಿಪೊಸಿಷನ್‌ನಲ್ಲಿ ತೇಜಸ್ವಿನಿ ಸಾವಂತ್ ಚಿನ್ನ, ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಅನೀಶ್ ಭನ್ವಾಲ ಚಿನ್ನ, ಪುರುಷರ 65 ಮೀ. ಫ್ರಿಸ್ಟೈಲ್ ಕುಸ್ತಿನಲ್ಲಿ ಭಜರಂಗ್ ಪೂನಿಯಾ ಚಿನ್ನದ ಪದಕ ಗೆದ್ದರು.
ನಾಲ್ಕು ಬೆಳ್ಳಿ ಪದಕ ಗೆದ್ದ ವೀರರು: ಮಹಿಳಾ 50 ಮೀ. ರೈಫಲ್ 3 ಪೊಸಿಷನ್ ನಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಬೆಳ್ಳಿ ಪದಕ ಪಡೆದುಕೊಂಡರು. ಇನ್ನು ಕುಸ್ತಿ ಮಹಿಳಾ ಫ್ರಿಸ್ಟೈಲ್ 57 ಕೆ.ಜಿ ವಿಭಾಗದಲ್ಲಿ ಪೂಜಾ ಧಾಂಡ ಬೆಳ್ಳಿ ಪದಕ ಗೆದ್ದರು.ಪುರುಷರ 97 ಕೆ.ಜಿ ವಿಭಾಗದಲ್ಲಿ ಮೌಸಮ್ ಖಾತ್ರಿ ಬೆಳ್ಳಿ ಪದಕ ಪಡೆದು ಭಾರತದ ಪದಕ ಸಂಖ್ಯೆಯನ್ನು ಏರಿಸಿದರು. ಇನ್ನು ಟೇಬಲ್ ಟೆನಿಸ್ ಮಹಿಳಾ ಡಬಲ್ಸ್‌ನಲ್ಲಿ ಮನಿಕಾ ಬಾತ್ರಾ- ಮೌಮಾ ದಾಸ್ ಬೆಳ್ಳಿ ಪಡೆದರು.
ಬಾಕ್ಸಿಂಗ್‌ನಲ್ಲಿ 3 ಕಂಚು: ಭಾರತದ ಸ್ಪರ್ಧಿಗಳು 9ನೇ ದಿನ ಒಟ್ಟು 4 ಕಂಚಿನ ಪದಕ ಬಾಚಿದರು. ಇದರಲ್ಲಿ 3 ಕಂಚಿನ ಪದಕಗಳು ಬಾಕ್ಸಿಂಗ್‌ನಲ್ಲಿ ಬಂದವು ಎನ್ನುವುದು ವಿಶೇಷ. ಪುರುಷರ 69 ಕೆ.ಜಿ ವೆಲ್ಟರ್‌ವೆàಟ್ ವಿಭಾಗದಲ್ಲಿ ಮನೋಜ್ ಕುಮಾರ್ ಕಂಚು, 56 ಕೆ.ಜಿ ಬಾಟಮ್‌ವೇಟ್ ವಿಭಾಗದಲ್ಲಿ ಮೊಹಮ್ಮದ್ ಹುಸಾಮುದ್ದಿನ್ ಕಂಚು ಹಾಗೂ ನಮನ್ ತನ್ವರ್ ಪುರುಷರ 91 ಕೆ.ಜಿ ಹೆವಿವೇಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಉಳಿದಂತೆ 68 ಕೆ.ಜಿ ಫ್ರಿಸ್ಟೈಲ್ ಕುಸ್ತಿ ವಿಭಾಗದಲ್ಲಿ ದಿವ್ಯ ಕಕ್ರಾನ್ ಕಂಚಿನ ಪದಕ ಬಾಚಿದರು.
ಸೈನಾ, ಸಿಂಧು, ಶ್ರೀಕಾಂತ್, ಪ್ರಣಯ್ ಸೆಮೀಸ್‌ಗೆ: ಕಾಮನ್‌ವೆಲ್ತ್‌ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಭಾರತೀಯ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.12ನೇ ಶ್ರೇಯಾಂಕಿತ ಆಟಗಾರ್ತಿ ಸೈನಾ ನೆಹ್ವಾಲ್ 21-8, 21-13 ರಿಂದ ಕೆನಡಾದ ರಚೆಲ್ ಹೊಡೆರಿಕ್ ವಿರುದ್ಧ ಗೆಲುವು ಪಡೆದರು. ಮಹಿಳೆಯರ ಸಿಂಗಲ್ಸ್ ಮತ್ತೂಂದು ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ.ಸಿಂಧು 21-14, 21-7 ರಿಂದ ಕೆನಡಾದ ಬ್ರಿಟ್ನಿ ಟಾಮ್ ವಿರುದ್ಧ ಗೆದ್ದು, ಸೆಮೀಸ್ ತಲುಪಿದ್ದಾರೆ. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ 21-15, 21-12 ರಿಂದ ಸಿಂಗಾಪುರದ ಜಿನ್ ರೇ ರಯಾನ್ ವಿರುದ್ಧ ಗೆಲುವು ಸಾಧಿಸಿದರು.
ಹಾಕಿ: ಭಾರತ ಪುರುಷರಿಗೆ ಸೆಮಿ ಸೋಲು: ಗೇಮ್ಸ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಎಡವಿದೆ. ಇದರೊಂದಿಗೆ ಕಂಚಿನ ಪದಕದ ಭರವಸೆಯೊಂದೇ ಉಳಿದುಕೊಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ 3-2 ಗೋಲುಗಳ ಅಂತರದಿಂದ ಭಾರತವನ್ನು ಮಣಿಸಿತು.
ಅನೀಶ್‌ಗೆ ಗಣಿತ ಪರೀಕ್ಷೆ ಭಯ!
2002ರ ಸೆ. 26ರಂದು ಜನಿಸಿದ ಅನೀಶ್ ಭನ್ವಾಲಾ, ಶುಕ್ರವಾರದ ಸಾಧನೆಯೊಂದಿಗೆ ಇದೇ ವಾರ ಮನು ಭಾಕರ್ ನಿರ್ಮಿಸಿದ ದಾಖಲೆಯನ್ನು ಮುರಿದರು. 16ರ ಹರೆಯದ ಮನು ಭಾಕರ್ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ಗೇಮ್ಸ್‌ನಲ್ಲಿ ಈ ಸಾಧನೆಗೈದ ಅತೀ ಕಿರಿಯ ಭಾರತೀಯ ಕ್ರೀಡಾಪಟು ಎನಿಸಿದ್ದರು. 10ನೇ ತರಗತಿಯ (ಸಿಬಿಎಸ್‌ಸಿ) ವಿದ್ಯಾರ್ಥಿಯಾಗಿರುವ ಅನೀಶ್, ಗೇಮ್ಸ್‌ಗೊಸ್ಕರ 3 ಪರೀಕ್ಷೆಗಳನ್ನು ಬರೆಯದೆ ಗೋಲ್ಡ್‌ಕೋಸ್ಟ್‌ಗೆ ಆಗಮಿಸಿದ್ದರು. ಈ 3 ಪರೀಕ್ಷೆಗಳನ್ನು ಬರೆಯಲು ಅನೀಶ್‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ನಡುವೆ ಊರಿಗೆ ಹೋದ ಕೂಡಲೇ ಗಣಿತ ಪರೀಕ್ಷೆ ಎದುರಿಸುವುದು ಹೆಚ್ಚು ಭಯದ ವಿಚಾರ ಎಂದು ಅನೀಶ್ ಪ್ರತಿಕ್ರಿಯಿಸಿದ್ದಾರೆ. ಕಳೆದ ವರ್ಷ ನಡೆದ ಐಎಸ್‌ಎಸ್ ಎಫ್ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ 579 ಅಂಕಗಳೊಂದಿಗೆ 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ಇದೇ ಕೂಟದ 25 ಮೀ. ನ್ಪೋರ್ಟ್ ಪಿಸ್ತೂಲ್‌ನಲ್ಲಿ ಬೆಳ್ಳಿ ಪದಕ, ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಇದೇ ಸ್ಪರ್ಧಾ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ ಸಾಧನೆ ಅನೀಶ್ ಆವರದು.