ಟೋಕಿಯೊ: ನಿರೀಕ್ಷೆಯಂತೆ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ “ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್’ ಬ್ಯಾಡ್ಮಿಂಟನ್ ಕೂಟದಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ. ವನಿತೆಯರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲೂ ಭಾರತಕ್ಕೆ ಗೆಲುವು ಒಲಿದಿದೆ. ಆದರೆ ಸಿಂಗಲ್ಸ್ ನಲ್ಲಿ ಬಿ. ಸಾಯಿ ಪ್ರಣೀತ್, ಮಾಳವಿಕಾ ಬನ್ಸೋಡ್ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿದರು.
ಕಳೆದ ವರ್ಷದ ಸ್ಪೇನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಲಕ್ಷ್ಯ ಸೇನ್, ಸೋಮವಾರದ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಹಾನ್ಸ್-ಕ್ರಿಸ್ಟಿಯನ್ ಸೋಲ್‌ಬರ್ಗ್ ವಿಟ್ಟಿಂಗಸ್ ಅವರನ್ನು 21-12, 21-11 ಅಂತರದಿಂದ ಸೋಲಿಸಿದರು. ವಿಟ್ಟಿಂಗಸ್ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಲಕ್ಷ್ಯ ಸೇನ್ ಸಾಧಿಸಿದ 2ನೇ ಜಯ ಇದಾಗಿದೆ.
2019ರಲ್ಲಿ ಕಂಚಿನ ಪದಕ ಜಯಿಸಿದ್ದ ಬಿ. ಸಾಯಿ ಪ್ರಣೀತ್ ವಿಶ್ವದ ನಂ.4 ಆಟಗಾರ, ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ 3 ಗೇಮ್‌ಗಳ ಕಾದಾಟದ ಬಳಿಕ ಶರಣಾದರು. ಅಂತರ 15-21, 21-15, 15-21. ಒಂದು ಗಂಟೆ ಕಾಲ ಇವರ ಹೋರಾಟ ಸಾಗಿತು.
ಇದರೊಂದಿಗೆ ಪ್ರಣೀತ್ ಅವರಿಗೆ ಟೋಕಿಯೊ ಮತ್ತೂಮ್ಮೆ ದುಃಸ್ವಪ್ನ ವಾಗಿ ಕಾಡಿತು. ಕಳೆದ ವರ್ಷದ ಒಲಿಂಪಿಕ್ಸ್‌ನಲ್ಲೂ ಅವರು ಬೇಗನೇ ನಿರ್ಗಮಿಸಿದ್ದರು. ಮಿಶ್ರ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ- ಇಶಾನ್ ಭಟ್ನಾಗರ್ ಜರ್ಮನಿಯ ಪ್ಯಾಟ್ರಿಕ್ ಶೀಲ್-ಫ್ರಾಂಝಿಸ್ಕಾ ವೋಲ್ಕ್ ಮನ್ ವಿರುದ್ಧ 21-13, 21-13 ಅಂತರದಿಂದ ಗೆದ್ದರು. ವನಿತಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋಡ್ ಡೆನ್ಮಾರ್ಕ್‌ನ ಲಿನ್ ಕ್ರಿಸ್ಟೋಫರ್ಸನ್ ವಿರುದ್ಧ 14-21, 12-21 ಅಂತರದಿಂದ ಸೋತರು.
ಡಬಲ್ಸ್‌ನಲ್ಲಿ ಮುನ್ನಡೆ
ವನಿತಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಮಾಲ್ಡೀವ್ಸ್‌ನ ಅಮಿನತ್ ನಬೀಹಾ ಅಬ್ದುಲ್ ರಜಾಕ್-ಫಾತಿಮಾ ನಬಾಹ್ ಅಬ್ದುಲ್ ರಜಾಕ್ ಅವರನ್ನು 21-7, 21-9 ಅಂತರದಿಂದ ಸೋಲಿಸಿ ದ್ವಿತೀಯ ಸುತ್ತಿಗೆ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಇವರಿಗೆ ಚೀನದ ಚೆನ್ ಕ್ವಿಂಗ್ ಚೆನ್-ಜಿಯ ಯಿ ಫಾನ್ ಅವರ ಕಠಿನ ಸವಾಲು ಎದುರಾಗಲಿದೆ.