Advertisement

ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

10:10 PM Sep 08, 2021 | Team Udayavani |

ಮುಂಬೈ: ಅ.17ರಿಂದ ಬಿಸಿಸಿಐ ಆತಿಥ್ಯದಲ್ಲಿ ಯುಎಇ, ಒಮಾನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟವಾಗಿದೆ.

Advertisement

ಇದರಲ್ಲಿ ಎರಡು ಅತ್ಯಂತ ಅಚ್ಚರಿಯ ಆಯ್ಕೆಗಳು ನಡೆದಿವೆ. ಹಲವು ವರ್ಷಗಳಿಂದ ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯಲು ವಿಫ‌ಲವಾಗಿದ್ದ ರವಿಚಂದ್ರನ್‌ ಅಶ್ವಿ‌ನ್‌ ದಿಢೀರನೆ, ನೇರವಾಗಿ ವಿಶ್ವಕಪ್‌ ತಂಡಕ್ಕೆ ಕರೆ ಪಡೆದಿದ್ದಾರೆ!

ಹಾಗೆಯೇ ಯಾರೂ ಊಹಿಸದ ರೀತಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿಯನ್ನು ತಂಡಕ್ಕೆ ಮೆಂಟರ್‌ ಆಗಿ ನಿಯೋಜಿಸಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿಯ ಈ ನಡೆಯಿಂದ ತಂಡದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಯ ಪಾತ್ರವೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಟಿ20 ವಿಶ್ವಕಪ್‌ ಅ.17ಕ್ಕೆ ಆರಂಭವಾಗಿ, ನ.14ಕ್ಕೆ ಮುಗಿಯಲಿದೆ. ವಿಶೇಷವೆಂದರೆ ವಿಶ್ವಕಪ್‌ ಮುಗಿದ ನಂತರ ರವಿಶಾಸ್ತ್ರಿ ಮತ್ತವರ ಬಳಗದ ಅವಧಿಯೂ ಮುಗಿಯಲಿದೆ. ಈ ಸ್ಥಾನಕ್ಕೆ ಶಾಸ್ತ್ರಿ ಮತ್ತೆ ಅರ್ಜಿ ಸಲ್ಲಿಸುವುದಿಲ್ಲ ಎಂಬ ಮಾತೂ ಇದೆ. ಅಲ್ಲಿಗೆ ಧೋನಿ ಈ ಸ್ಥಾನ ಪಡೆದುಕೊಳ್ಳುವುದಕ್ಕೆ ವೇದಿಕೆ ಸಿದ್ಧವಾಗಿರಬಹುದಾ ಎನ್ನುವುದು ಇಲ್ಲಿನ ಮುಖ್ಯಪ್ರಶ್ನೆ.

ಇದನ್ನೂ ಓದಿ:ಮುಂದಿನ ವರ್ಷ ಇಂಗ್ಲೆಂಡ್‌ನ‌ಲ್ಲಿ ಟಿ20, ಏಕದಿನ ಆಡಲಿದೆ ಭಾರತ

Advertisement

ಅಶ್ವಿ‌ನ್‌ಗೆ ಸ್ಥಾನ: ಸಮಕಾಲೀನ ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳ ಸಾಲಿನಲ್ಲಿ ಆರ್‌.ಅಶ್ವಿ‌ನ್‌ ಸ್ಥಾನ ಪಡೆದುಕೊಳ್ಳುತ್ತಾರೆ. ಬೇಸರದ ಸಂಗತಿಯೆಂದರೆ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಹಾಗೆಯೇ ಅವರು ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ಕಡೆಯ ಬಾರಿಗೆ ಆಡಿದ್ದು 2017 ಜುಲೈನಲ್ಲಿ. ಇನ್ನು ಮುಂದೆ ಅವರು ಈ ತಂಡಗಳಿಗೆ ಮರಳುವುದೇ ಇಲ್ಲ ಎಂಬ ಭಾವನೆ ಮೂಡಿತ್ತು. ಅಂತಹದ್ದರಲ್ಲಿ ದಿಢೀರನೆ ಅಶ್ವಿ‌ನ್‌ರನ್ನು ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅವರೊಬ್ಬ ಅದ್ಭುತ ಆಟಗಾರನಾಗಿದ್ದರೂ ಇಲ್ಲಿಯವರೆಗೆ ಕೈಬಿಟ್ಟಿದ್ದೇಕೆ? ಈಗ ದಿಢೀರ್‌ ಸೇರಿಸಿಕೊಂಡಿದ್ದೇಕೆ? ಎನ್ನುವುದು ಇಲ್ಲಿನ ಪ್ರಶ್ನೆ. ಇನ್ನುಳಿದಂತೆ ಬಹುತೇಕ ನಿರೀಕ್ಷಿತ ಆಟಗಾರರೇ ಸ್ಥಾನ ಪಡೆದಿದ್ದಾರೆ.

ಕರ್ನಾಟಕದವರ ಪೈಕಿ ಕೆ.ಎಲ್‌.ರಾಹುಲ್‌ ನಿರೀಕ್ಷೆಯಂತೆ ತಂಡದಲ್ಲಿದ್ದಾರೆ. ಆದರೆ ಮನೀಷ್‌ ಪಾಂಡೆ ಸ್ಥಾನ ಕಳೆದುಕೊಂಡಿದ್ದಾರೆ. ಪ್ರತಿಭಾವಂತರಾಗಿದ್ದರೂ ಅವಕಾಶ ಸಿಗದ ದುರದೃಷ್ಟವಂತ ಮನೀಷ್‌ ಎನ್ನಬೇಕಾಗಿದೆ.

ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್‌ ಚಹರ್‌, ಆರ್‌.ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ವರುಣ್‌ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.
ಮೆಂಟರ್‌: ಎಂ.ಎಸ್‌.ಧೋನಿ
ಹೆಚ್ಚುವರಿ ಆಟಗಾರರು:  ಶಾರ್ದೂಲ್ ಠಾಕೂರ್‌, ಶ್ರೇಯಸ್‌ ಐಯ್ಯರ್‌, ದೀಪಕ್‌ ಚಹರ್‌.
ಸ್ಥಾನ ಕಳೆದುಕೊಂಡವರು: ಶಿಖರ್‌ ಧವನ್‌, ಪೃಥ್ವಿ ಶಾ, ಯಜುವೇಂದ್ರ ಚಹಲ್‌.

Advertisement

Udayavani is now on Telegram. Click here to join our channel and stay updated with the latest news.

Next