Advertisement

ಪ್ರಧಾನಿ ಮೋದಿ ಭೇಟಿಯಿಂದ ಭಾರತ – ಯು.ಎ.ಇ. ಸಂಬಂಧಕ್ಕೆ ಹೊಸ ಮೆಟ್ಟಿಲು

09:42 AM Aug 24, 2019 | Team Udayavani |

ಶುಕ್ರವಾರ ಮತ್ತು ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಯು.ಎ.ಇ.ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಬುಧಾಬಿಯ ದೊರೆ ಶೇಖ್ ಮಹಮ್ಮದ್ ಬಿನ್ ಝಯಾದ್ ಅಲ್ ನಹ್ಯಾನ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಭಾರತ ಮತ್ತು ಯು.ಎ.ಇ. ನಡುವಿನ ಸಂಬಂಧದ ಮೇಲೊಂದು ಬೆಳಕು ಚೆಲ್ಲುವ ಬರಹ ಇಲ್ಲಿದೆ.

Advertisement

ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ (ಯು.ಎ.ಇ.) ನಡುವಿನ ಸಂಬಂಧ ಸುದೀರ್ಘವಾದುದು ಮಾತ್ರವಲ್ಲದೇ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಈ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಏಷ್ಯಾದ ಬಲಿಷ್ಠ ಶಕ್ತಿಗಳಲ್ಲಿ ಒಂದಾಗಿರುವ ಭಾರತವು ಮಧ್ಯಪ್ರಾಚ್ಯದ ಪ್ರಮುಖ ಒಕ್ಕೂಟ ರಾಷ್ಟ್ರವಾಗಿರುವ ಯು.ಎ.ಇ. ಜೊತೆ ಹಲವಾರು ರೀತಿಯ ದ್ವಿಪಕ್ಷೀಯ ವ್ಯವಹಾರಗಳಲ್ಲಿ ಭಾಗೀದಾರಿಕೆಯನ್ನು ಹೊಂದುವ ಮೂಲಕ ತಮ್ಮ ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಸಂಬಂಧಗಳನ್ನು ವಿಸ್ತರಿಸಿಕೊಳ್ಳುತ್ತಲೇ ಬಂದಿವೆ.

ಇನ್ನು ಈ ವರ್ಷದ ಪ್ರಾರಂಭದಲ್ಲಿ ಈಗಾಗಲೇ ಚಾಲ್ತಿಯಲ್ಲಿದ್ದ ಕೆಲವೊಂದು ದ್ವಿಪಕ್ಷೀಯ ವ್ಯವಹಾರಗಳಿಗೆ ವೇಗವನ್ನು ನೀಡುವ ಕಾರ್ಯವನ್ನು ಎರಡೂ ದೇಶಗಳು ಮಾಡಿಕೊಂಡು ಬಂದಿವೆ. ಕಳೆದ ಮಾರ್ಚ್ ನಲ್ಲಿ ಮಾಜೀ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರನ್ನು ಯು.ಎ.ಇ. ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ಲಾ ಬಿನ್ ಝಯೇದ್ ಅಲ್ ನಹ್ಯಾನ್ ಅವರು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು ಮಾತ್ರವಲ್ಲದೆ ಇಸ್ಲಾಮಿಕ್ ಕಾರ್ಪೊರೇಷನ್ ನ ಸಂಘದ ವಿದೇಶಾಂಗ ಸಚಿವರ 46ನೇ ಸಮ್ಮೇಳನದಲ್ಲಿ ಮುಖ್ಯ ಅಭ್ಯಾಗತರಾಗಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಮೊನ್ನೆ ಭಾರತದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಯು.ಎ.ಇ.ಯಲ್ಲಿ ಭಾರತದ ರಾಯಭಾರಿಯಾಗಿರುವ ನವದೀಪ್ ಸೂರಿ ಅವರನ್ನು ದುಬಾಯಿ ನಾಸ್ಡಾಕ್ ತನ್ನ ವ್ಯವಹಾರ ಪ್ರಾರಂಭದ ಗಂಟೆ ಬಾರಿಸಲು ಆಹ್ವಾನಿಸಿತ್ತು. ಇದು ಭಾರತ ಮತ್ತು ಯು.ಎ.ಇ. ನಡುವೆ ಕ್ಷಿಪ್ರವಾಗಿ ಬೆಳೆಯುತ್ತಿರುವ ಆರ್ಥಿಕ ಸಹಭಾಗಿತ್ವದ ಸಂಕೇತ ಎಂದು ದುಬಾಯಿ ನಾಸ್ಡಾಕ್ ಬಣ್ಣಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next