ಹೊಸದಿಲ್ಲಿ : ಭಾರತ ಮತ್ತು ಪಾಕಿಸ್ಥಾನ ಹೊಸ ವರ್ಷದ ಮೊದಲ ದಿನವಾದ ಇಂದು ಉಭಯತರೊಳಗಿನ ಒಪ್ಪಂದ ಪ್ರಕಾರ ನಿರಂತರ 27ನೇ ವರ್ಷದಲ್ಲಿ ತಮ್ಮ ಪರಮಾಣು ಘಟಕಗಳ ಪಟ್ಟಿಯನ್ನು ವಿನಿಮಯಿಸಿಕೊಂಡಿವೆ.
ಪರಸ್ಪರರ ಪರಮಾಣು ಘಟಕಗಳ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದನ್ನು ತಪ್ಪಿಸುವ ಸಲುವಾಗಿ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ತಮ್ಮಲ್ಲಿನ ಪರಮಾಣು ಘಟಕಗಳ ಪಟ್ಟಿಯನ್ನು ವರ್ಷಂಪ್ರತಿ ಉಭಯ ದೇಶಗಳು ವಿನಿಮಯಿಸಿಕೊಳ್ಳುತ್ತವೆ.
ಈ ಬಗ್ಗೆ ಭಾರತದ ವಿದೇಶ ವ್ಯವಹಾರಗಳ ಸಚಿವಾಲಯವು ಅಧಿಕೃತ ಹೇಳಿಕೆ ಹೊರಡಿಸಿದ್ದು “ಭಾರತ ಮತ್ತು ಪಾಕಿಸ್ಥಾನ ಇಂದು ದಿಲ್ಲಿ ಮತ್ತು ಇಸ್ಲಾಮಾಬಾದ್‌ನಲ್ಲಿನ ತಮ್ಮ ರಾಜತಾಂತ್ರಿಕ ವ್ಯವಸ್ಥೆಯ ಮೂಲಕ ಏಕಕಾಲದಲ್ಲಿ ತಮ್ಮ ಅಣು ಘಟಕಗಳ ಪಟ್ಟಿಯನ್ನು ಅಧಿಕೃತವಾಗಿ ವಿನಿಮಯಿಸಿಕೊಂಡಿವೆ’ ಎಂದು ಹೇಳಿದೆ.
ಉಭಯ ದೇಶಗಳು ವಿನಿಮಯಿಸಿಕೊಳ್ಳುತ್ತಿರುವ 27ನೇ ಪಟ್ಟಿ ಇದಾಗಿದೆ. ಉಭಯ ದೇಶಗಳು ಮೊದಲ ಬಾರಿಗೆ ತಮ್ಮಲ್ಲಿನ ಅಣು ಘಟಕಗಳ ಪಟ್ಟಿಯನ್ನು ವಿನಿಮಯಿಸಿಕೊಂಡದ್ದು 1992ರ ಜನವರಿ 1ರಂದು ಎಂದು ಪ್ರಕಟನೆ ತಿಳಿಸಿದೆ.
1988ರಲ್ಲಿ ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಪಾಕ್ ಪ್ರಧಾನಿ ಬೇನಜೀರ್ ಭುಟ್ಟೋ ಅವರು ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗ ಉಭಯ ದೇಶಗಳ ಬಳಿ ಯಾವುದೇ ಅಣ್ವಸ್ತ್ರಗಳಿರಲಿಲ್ಲ. ಆದರೆ ಎರಡೂ ದೇಶಗಳಲ್ಲಿ ಪರಮಾಣು ವಿದ್ಯುತ್ ಘಟಕಗಳಿದ್ದವು; ತತ್‌ಸಂಬಂಧಿ ಸಂಶೋಧನ ಸೌಕರ್ಯಗಳೂ ಇದ್ದವು; ಇವುಗಳು ಎರಡೂ ದೇಶಗಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನಿರ್ಣಾಯಕವೆಂದು ಪರಿಗಣಿಸಲ್ಪಟ್ಟಿದ್ದವು.