ಅಂತೂ ಇಂತೂ ಭಾರತ ಮತ್ತು ಚೀನ ನಡುವಿನ ಸಂಘರ್ಷಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳು ಗೋಚರವಾಗಿವೆ. ಗಾಲ್ವಾನ್ ಘರ್ಷಣೆ ಅನಂತರ ಏರ್ಪಟ್ಟಿದ್ದ ಉಭಯ ದೇಶಗಳ ನಡುವಿನ ಸಂಘರ್ಷ ಸದ್ಯಕ್ಕೆ ತಣ್ಣಗಾಗಿದೆ. ಈ ಸಂಬಂಧ ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರೇ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದು, ಒಂದಷ್ಟು ಮಟ್ಟಿಗೆ ಸ್ವಾಗತಾರ್ಹ ವಿಚಾರವೂ ಆಗಿದೆ.
ಈಗಾಗಲೇ ಒಂಬತ್ತು ಸುತ್ತಿನ ಮಾತುಕತೆಗಳು ನಡೆದಿದ್ದು, ಕಡೆಯ ಸುತ್ತಿನಲ್ಲಿ ಸೇನೆ ವಾಪಸ್ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆಯೂ ರಾಜನಾಥ್ ಹೇಳಿದ್ದಾರೆ. ಆದರೆ ಪಾಕಿಸ್ಥಾನ ದಂತೆಯೇ ಚೀನ ಕೂಡ ನಂಬಿಕಸ್ತ ದೇಶವಲ್ಲ ಎಂಬುದನ್ನು ಸರಕಾರ ಮನದಲ್ಲಿ ಇರಿಸಿಕೊಳ್ಳಬೇಕು. ಪಾಕಿಸ್ಥಾನವೂ ಶಾಂತಿ ಮಾತುಕತೆಯ ಬಗ್ಗೆ ಹೇಳುತ್ತಲೇ ಉಗ್ರರನ್ನು ಛೂ ಬಿಟ್ಟು ದೇಶದಲ್ಲಿ ಆಗಾಗ್ಗೆ ಭಯೋತ್ಪಾದನ ಘಟನೆಗಳಿಗೂ ಕಾರಣವಾಗಿತ್ತು. ಸದ್ಯಕ್ಕಂತೂ ಪಾಕಿಸ್ಥಾನದ ಜತೆಗಿನ ಮಾತುಕತೆ ಬಾಗಿಲು ಸಂಪೂರ್ಣ ಬಂದ್ ಆಗಿದೆ. ಉಗ್ರವಾದದಿಂದ ಸಂಪೂರ್ಣವಾಗಿ ಪಾಕಿಸ್ಥಾನ ಹಿಂದೆ ಸರಿಯದ ಹೊರತು, ಆ ದೇಶದ ಜತೆಗೆ ಮಾತುಕತೆ ಸಾಧ್ಯವೇ ಇಲ್ಲ ಎಂಬುದು ಭಾರತದ ಖಡಕ್ ನಿಲುವಾಗಿದೆ. ಇದೂ ಕೂಡ ಉತ್ತಮ ಸಂಗತಿಯೇ. ಇನ್ನು ಚೀನದ ವಿಚಾರಕ್ಕೆ ಬಂದರೆ ಇದುವರೆಗೆ ಆ ದೇಶ ಮೋಸ ಮಾಡಿದ್ದೇ ಹೆಚ್ಚು. 1962ರಲ್ಲೂ ಅಷ್ಟೇ. ಭಾರತದ ಜತೆಗೆ ಮಾತುಕತೆಯ ಪ್ರಸ್ತಾವ ಮಾಡುತ್ತಲೇ ಯುದ್ಧಕ್ಕೂ ಬಂದಿತ್ತು. ಈಗಲೂ ಅಷ್ಟೇ, ಚೀನ ಸೇನೆಯನ್ನು ವಾಪಸ್ ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾದರೂ ಅದು ತನ್ನ ಹಿಂದಿನ ಕಪಟ ಬುದ್ಧಿಯಿಂದ ಸಂಪೂರ್ಣ ಹಿಂದಕ್ಕೆ ಸರಿದಿದೆಯೇ ಎಂಬುದನ್ನು ಗಮನಿಸಬೇಕು.
ಏಕೆಂದರೆ ಚೀನ ಎಂದೆಂದಿಗೂ ಪಾಕಿಸ್ಥಾನವನ್ನು ಬಿಟ್ಟುಕೊಡುವುದಿಲ್ಲ. ಭಾರತ ಮತ್ತು ಚೀನ ಚೆನ್ನಾಗಿರುವುದು ಪಾಕಿಸ್ಥಾನಕ್ಕೆ ಇಷ್ಟವೂ ಆಗುವುದಿಲ್ಲ. ಹೀಗಾಗಿ ಯಾವುದೋ ಒಂದು ಕಾರಣದಿಂದ ಪಾಕಿಸ್ಥಾನವೇ ಚೀನವನ್ನು ಎತ್ತಿಕಟ್ಟಬಹುದು. ಇದರಿಂದಾಗಿ ಈ ಎರಡೂ ದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಸದ್ಯದ ಮಟ್ಟಿಗೆ ಸೇನೆ ವಾಪಸ್ ಕರೆಯಿಸಿಕೊಳ್ಳುವುದು ಚೀನದ ಪಾಲಿಗೆ ಅನಿವಾರ್ಯವೂ ಆಗಿತ್ತು. ಹಿಂದಿನ ದಿನಗಳ ಹಾಗೆ ಶಸ್ತ್ರ ಹಿಡಿದೇ ಯುದ್ಧ ಮಾಡುವ ಪರಿಸ್ಥಿತಿ ಈಗಿಲ್ಲ.
ಈಗ ಏನಿದ್ದರೂ ಆರ್ಥಿಕ ವ್ಯಾಪಾರದ ವಿಚಾರದಲ್ಲಿ ನಡೆಯುವ ಸಮರವೇ ಸಾಕು. ಭಾರತ ಚೀನದ ಆ್ಯಪ್‌ಗಳನ್ನು ನಿಷೇಧ ಮಾಡಿದ್ದು, ಆ ದೇಶದಿಂದ ಬಂಡವಾಳ ಬರದಂತೆ ಮಾಡಿರುವುದು ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಇದರ ಜತೆಗೆ ಅತ್ತ ಅಮೆರಿಕದಲ್ಲಿ ಟ್ರಂಪ್ ಬದಲಿಗೆ ಬೈಡೆನ್ ಬಂದರೂ ಆ ಎರಡು ದೇಶಗಳ ಸಂಬಂಧದಲ್ಲಿ ಸುಧಾರಣೆಯಾಗುವ ಸ್ಥಿತಿ ಸದ್ಯಕ್ಕೆ ಗೋಚರಿಸುತ್ತಿಲ್ಲ. ಹೀಗಾಗಿಯೇ ಚೀನ ಮೊಂಡಾಟ ಬಿಟ್ಟು, ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುತ್ತಿರಬಹುದು.