ಹೊಸದಿಲ್ಲಿ: ಜಾಗತಿಕ ರಕ್ಷಣ ಸರಕುಗಳ ಉತ್ಪಾದನೆ ವಲಯದಲ್ಲಿ ಭಾರತವು ವಿಶಿಷ್ಟವಾದ ಛಾಪು ಮೂಡಿಸಿದ್ದು, 10 ವರ್ಷಗಳಲ್ಲಿ ಭಾರತದ ರಕ್ಷಣ ರಫ್ತು ಪ್ರಮಾಣ ಸಾರ್ವಕಾಲಿಕ ದಾಖಲೆ ಮಾಡಿದೆ.
2013-14ರಲ್ಲಿ 686 ಕೋಟಿ ರೂ. ಮೌಲ್ಯದ ಸರಕುಗಳು ಭಾರತದಿಂದ ರಫ್ತಾದರೆ, 2022-23ರಲ್ಲಿ ಈ ಪ್ರಮಾಣ 16 ಸಾವಿರ ಕೋಟಿ ರೂ.ಗೇರಿದೆ. ಮಂಗಳವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದೆ.
ಭಾರತದ ರಕ್ಷಣ ರಫ್ತು ಪ್ರಮಾಣ 2013-14ಕ್ಕೆ ಹೋಲಿಸಿದರೆ ಈಗ 23 ಪಟ್ಟು ಹೆಚ್ಚಳವಾಗಿದೆ. ಪ್ರಸ್ತುತ 100ರಷ್ಟು ಕಂಪೆನಿಗಳು ಭಾರತದಲ್ಲಿ ರಕ್ಷಣ ಸರಕುಗಳನ್ನು ಉತ್ಪಾದಿಸಿ, 85ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿವೆ. ಹಿಂದೆ ಭಾರತವು ರಕ್ಷಣ ಸಾಮಗ್ರಿಗಳ ಆಮದುದಾರನಾಗಿತ್ತು. ಈಗ ರಫ್ತುದಾರ ರಾಷ್ಟ್ರವಾಗಿ ಬೆಳೆದಿದೆ ಎಂದೂ ಸಚಿವಾಲಯ ಹೇಳಿದೆ.
ಪ್ರಮುಖ ರಫ್ತು
ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಕೇಂದ್ರ ಸರಕಾರವು ವಿದೇಶಿ ರಕ್ಷಣ ಸರಕುಗಳ ಆಮದು ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಜತೆಗೆ ಭಾರತದಲ್ಲೇ ಎಲ್ಲ ರೀತಿಯ ಸರಕುಗಳನ್ನು ವಿನ್ಯಾಸಗೊಳಿಸಲು ಮತ್ತು ಉತ್ಪಾದಿಸಲು ಉತ್ತೇಜನ ನೀಡಿದೆ. ಪರಿಣಾಮವಾಗಿ ಪ್ರಸ್ತುತ ದೇಶದಿಂದ ಪ್ರಮುಖವಾಗಿ ಡಾರ್ನಿಯರ್-228, ಆರ್ಟಿಲರಿ ಗನ್‌ಗಳು, ಬ್ರಹ್ಮೋಸ್ ಕ್ಷಿಪಣಿಗಳು, ಪಿನಾಕಾ ರಾಕೆಟ್‌ಗಳು ಮತ್ತು ಲಾಂಚರ್‌ಗಳು, ರೇಡಾರ್‌ಗಳು, ಸಿಮ್ಯುಲೇಟರ್‌ಗಳು ಮತ್ತು ಸಶಸ್ತ್ರ ವಾಹನಗಳು ರಫ್ತಾಗುತ್ತಿವೆ. ಅಲ್ಲದೆ ಎಲ್‌ಸಿಎ-ತೇಜಸ್, ಲಘು ಯುದ್ಧ ಹೆಲಿಕಾಪ್ಟರ್‌ಗಳು, ವಿಮಾನ ವಾಹಕಗಳಿಗೆ ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ಒಟ್ಟು ರಫ್ತಿನ ಮೊತ್ತವನ್ನು 2025ರ ವೇಳೆಗೆ 35 ಸಾವಿರ ಕೋಟಿ ರೂ.ಗಳಿಗೆ ಏರಿಸುವ ಗುರಿಯನ್ನು ಸರಕಾರ ಹಾಕಿಕೊಂಡಿದೆ.
ಇದೇ ವೇಳೆ ವಿದೇಶಗಳಿಂದ ರಕ್ಷಣ ಸಾಮಗ್ರಿಗಳ ಆಮದು 2018-18ರಲ್ಲಿ ಒಟ್ಟು ವೆಚ್ಚದ ಶೇ.46ರಷ್ಟು ಇದ್ದದ್ದು, 2022ರ ಡಿಸೆಂಬರ್ ವೇಳೆಗೆ ಶೇ. 36.7ಕ್ಕೆ ಇಳಿಕೆಯಾಗಿದೆ ಎಂದೂ ರಕ್ಷಣ ಸಚಿವಾಲಯದ ವರದಿ ಹೇಳಿದೆ.