Advertisement
ರಷ್ಯಾ ಯಾವ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ದಾಳಿ ನಡೆಸುವ ಸಾಧ್ಯತೆಯಿದ್ದು, ಅನಿಶ್ಚಿತತೆ ಮನೆ ಮಾಡಿದೆ. ಹೀಗಾಗಿ ಅತ್ಯಗತ್ಯ ಕೆಲಸ ಇಲ್ಲದವರು ಮತ್ತು ವಿದ್ಯಾರ್ಥಿಗಳು ಕೂಡಲೇ ಉಕ್ರೇನ್ ತೊರೆಯುವುದು ಉತ್ತಮ ಎಂದು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ಸೂಚಿಸಿದೆ.
Related Articles
Advertisement
ಈಗಾಗಲೇ ಅಮೆರಿಕ, ಫ್ರಾನ್ಸ್, ಜರ್ಮನಿ ಕೂಡ ತಮ್ಮ ನಾಗರಿಕರಿಗೆ ಉಕ್ರೇನ್ ತೊರೆಯುವಂತೆ ಸೂಚಿಸಿವೆ.
ಸಮರಾಭ್ಯಾಸ ಮುಂದುವರಿಕೆರವಿವಾರವೂ ಬೆಲಾರೂಸ್‌ನಲ್ಲಿ ರಷ್ಯಾದ ಸಮರಾಭ್ಯಾಸ ಮುಂದುವರಿದಿದೆ. ಕಪ್ಪು ಸಮುದ್ರದ ಕರಾವಳಿಯಾಚೆ ನೌಕಾಪಡೆಗಳ ಕವಾಯತು ಕೂಡ ನಡೆದಿದೆ. ಆಕ್ರಮಣದ ಭೀತಿಯ ನಡುವೆ ರವಿವಾರವೂ ಉಕ್ರೇನ್ ಸೈನಿಕರು ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕತವಾದಿಗಳು ಸಂಪರ್ಕಿಸುವ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಶೆಲ್‌ಗಳು ಸ್ಫೋಟಗೊಂಡಿವೆ. ಮಾತುಕತೆಗೆ ಆಹ್ವಾನ
ಈ ಎಲ್ಲ ಬೆಳವಣಿಗೆಗಳ ನಡುವೆ ಉಕ್ರೇನ್ ಅಧ್ಯಕ್ಷ ವೋಲ್ಡಿಮಿರ್ ಝೆಲೆನ್‌ಸ್ಕಿ ಅವರು ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಈ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ನೀವೇ ಒಂದು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಮನವಿ ಮಾಡಿದ್ದಾರೆ. ಶಾಂತಿಯುತ ಪರಿಹಾರಕ್ಕಾಗಿ ಉಕ್ರೇನ್ ಯಾವತ್ತೂ ರಾಜತಾಂತ್ರಿಕ ಮಾರ್ಗವನ್ನೇ ಬಳಸುತ್ತದೆ ಎಂದಿದ್ದಾರೆ. 1945ರ ಬಳಿಕದ ಭೀಕರ ಯುದ್ಧ?
ರಷ್ಯಾವು ಯುರೋಪ್‌ನಲ್ಲಿ 1945ರ ಬಳಿಕದ ಅತ್ಯಂತ ಭೀಕರ ಯುದ್ಧ ನಡೆಸಲು ಸಜ್ಜಾಗಿದೆ ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ರವಿವಾರ ಹೇಳಿದ್ದಾರೆ. 2ನೇ ವಿಶ್ವಯುದ್ಧದ ಅನಂತರ ಯುರೋಪ್ ಬೀಭತ್ಸ ಸಂಘರ್ಷಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿದರೆ ರಷ್ಯಾಗೆ ಜಾಗತಿಕ ಹಣಕಾಸು ನೆರವು ಸಿಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಜಾನ್ಸನ್ ಎಚ್ಚರಿಸಿದ್ದಾರೆ. ಇನ್ನೊಂದೆಡೆ ಉಕ್ರೇನ್ ಗಡಿಯಲ್ಲಿ ರಷ್ಯಾ ಪಡೆಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದ್ದು, ರಷ್ಯಾ ದಾಳಿಗೆ ಸನ್ನದ್ಧವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅಮೆರಿಕ ಪುನರುಚ್ಚರಿಸಿದೆ. ಉಕ್ರೇನ್‌ನ ಮೂರೂ ದಿಕ್ಕುಗಳಲ್ಲಿ ಸುಮಾರು 1.50 ಲಕ್ಷ ರಷ್ಯಾ ಸೈನಿಕರು ಸುತ್ತುವರಿದಿದ್ದು, ಯುದ್ಧವಿಮಾನಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ ಎಂದಿದೆ. ಪ್ರತ್ಯೇಕತವಾದಿಗಳ ನಿಯಂತ್ರಣದಲ್ಲಿ ಇರುವ ಪ್ರದೇಶಗಳ ಮೇಲೆ ಉಕ್ರೇನ್ ಶೆಲ್ ದಾಳಿ ನಡೆಸುತ್ತಿದೆ ಎನ್ನುವುದು ಶುದ್ಧ ಸುಳ್ಳು. ರಷ್ಯಾದ ಪ್ರಚೋದನೆಗೆ ನಾವು ಪ್ರತಿಕ್ರಿಯಿಸುವುದಿಲ್ಲ. ರಷ್ಯಾ ವಿರುದ್ಧ ಪಾಶ್ಚಾತ್ಯ ದೇಶಗಳು ಆದಷ್ಟು ಬೇಗ ನಿರ್ಬಂಧ ಹೇರಲಿ.
– ವೋಲ್ಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ