ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ದಿನಗಳ ಪೂರ್ವ ರಾಷ್ಟ್ರಗಳ-ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರ-ಯಾತ್ರೆ ಯನ್ನು ಮುಗಿಸಿಕೊಂಡು ಬಂದಿದ್ದಾರೆ. ಇದೇ ವೇಳೆಯಲ್ಲೇ ಎಂದಿನಂತೆ ಪ್ರತಿಪಕ್ಷಗಳು ಈ ಯಾತ್ರೆಯ ಔಚಿತ್ಯವನ್ನು ಪ್ರಶ್ನಿಸಲಾರಂಭಿಸಿವೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಈ ಯಾತ್ರೆಯನ್ನು “ಅಂತಾರಾಷ್ಟ್ರೀಯ ಮುಸ್ಲಿಂ ಸಮುದಾಯವನ್ನು ಓಲೈಸುವ ಪ್ರಯತ್ನ’ ಎಂದೂ ಕುಟುಕಿದ್ದಾರೆ.
ಆದರೆ ಇಂಥದ್ದೊಂದು ಭೇಟಿ ಭಾರತದ ಮಟ್ಟಿಗಂತೂ ಅಗತ್ಯವಾಗಿತ್ತು. ಮೂರು ರಾಷ್ಟ್ರಗಳ ಈ ಯಾತ್ರೆ ಹಲವಾರು ರೀತಿಯಿಂದ ಮಹತ್ವಪೂರ್ಣವಾದದ್ದು. ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳ ದೃಷ್ಟಿಯಿಂದ ನೋಡುವುದಾದರೆ ಈ ಮೂರೂ ರಾಷ್ಟ್ರಗಳೂ ಭಾರತದ ಪಾಲಿಗೆ ವಿಶೇಷ ಮಹತ್ವ ಪಡೆದಿವೆ. ಭಾರತ ಮತ್ತು ಇಂಡೋನೇಷ್ಯಾ ಬಹಳ ಸಮಯದಿಂದಲೇ ಆತಂಕವಾದವನ್ನು ಎದುರಿಸುತ್ತಿವೆ. ಇಂಥದ್ದರಲ್ಲಿ ಇಂಡೋನೇಷ್ಯಾದ ಜೊತೆಗೆ ಆತಂಕವಾದದ ವಿಚಾರದಲ್ಲಿ ನಡೆದ ಮಾತುಕತೆ ಎರಡೂ ರಾಷ್ಟ್ರಗಳ ನಡುವಿನ ದೂರಗಾಮಿ ರಣನೀತಿಯನ್ನು ಸಾರುತ್ತಿವೆ. ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷರ ನಡುವಿನ ದ್ವಿಪಕ್ಷೀಯ ಮಾತುಕತೆಗಳ ನಂತರ ಹೊರಬಂದ ಜಂಟಿ ಹೇಳಿಕೆಯು ಆತಂಕವಾದದ ವಿರುದ್ಧದ ಹೋರಾಟದ ವಿಷಯದಲ್ಲಿ ಪ್ರಮುಖ ವಿಚಾರಗಳನ್ನು ಒಳಗೊಂಡಿತ್ತು. ಇಬ್ಬರು ನಾಯಕರೂ ಭಯೋತ್ಪಾದನೆಯ ಎಲ್ಲಾ ಸ್ವರೂಪಗಳನ್ನೂ ಕಟುವಾಗಿ ಟೀಕಿಸಿದ್ದಷ್ಟೇ ಅಲ್ಲದೇ, ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ನಡುವೆ ಗುಪ್ತಚರ ಮಾಹಿತಿಗಳ ವಿನಿಮಯವಾಗಬೇಕು ಎನ್ನುವುದಕ್ಕೂ ಸಹಮತಿ ಸೂಚಿಸಿದರು.
ವ್ಯಾಪಾರ ಮತ್ತು ಪರ್ಯಟನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅಂಡಮಾನ್-ನಿಕೋಬಾರ್ ದ್ವೀಪ ಸಮೂಹ ಮತ್ತು ಸುಮಾತ್ರಾ ದ್ವೀಪ ಪ್ರಾಂತ್ಯಗಳ ನಡುವೆ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಮಾತುಕತೆ ನಡೆದಿದೆ. “ಆ್ಯಕ್ಟ್ ಈಸ್ಟ್’ ನೀತಿಯ ದೃಷ್ಟಿಯಿಂದ ನೋಡುವುದಾದರೆ ಇದು ಭಾರತದ ಅತಿದೊಡ್ಡ ಹೆಜ್ಜೆಯೂ ಹೌದು. ಮಲೇಷ್ಯಾ ಮತ್ತು ಸಿಂಗಾಪುರ ಯಾತ್ರೆಗಳೂ ಮಹತ್ವ ಪಡೆದಿದ್ದವು. ಆ್ಯಕ್ಟ್ ಈಸ್ಟ್ ನೀತಿಯಲ್ಲಿ ಭಾರತ ಆದ್ಯತೆ ನೀಡಿರುವುದು ಮಲೇಷ್ಯಾಕ್ಕೆ. 92 ವರ್ಷದ ಮಹಾತಿರ್ ಮೊಹಮ್ಮದ್ ಕಳೆದ ತಿಂಗಳ 10ನೇ ತಾರೀಖು ಮತ್ತೂಮ್ಮೆ ಆ ದೇಶದ ಪ್ರಧಾನಮಂತ್ರಿ ಯಾಗಿ ಅಧಿಕಾರಕ್ಕೆ ಬಂದಿದ್ದಾರೆ. ಆದಾಗ್ಯೂ ಪ್ರಧಾನಿ ಮೋದಿ ಮಲೇಷ್ಯಾದಲ್ಲಿದ್ದದ್ದು ಕೆಲವೇ ಗಂಟೆಗಳಾದರೂ, ಮಹಾತಿರ್ ಮೊಹಮ್ಮದ್‌ರನ್ನು ಭೇಟಿಯಾಗುವ ಮೂಲಕ ಅವರು ಭಾರತವು ಮಲೇಷ್ಯಾದ ಅತಿದೊಡ್ಡ ವ್ಯೂಹಾತ್ಮಕ ಪಾಲುದಾರ ಎನ್ನುವ ಸಂದೇಶ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಭಾರತ ಯುಪಿಎ ಅವಧಿಯಿಂದಲೂ ಆ ದೇಶಕ್ಕೆ ಮಹತ್ವ ನೀಡುತ್ತಲೇ ಬಂದಿದೆ.
ಚೀನಾದ ಸವಾಲುಗಳನ್ನು ಗಮನಿಸಿದಾಗ ಭಾರತಕ್ಕೆ ಈ ದೇಶಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದು ಅನಿವಾರ್ಯ. ಇನ್ನು ಸಿಂಗಾಪುರ ಯಾತ್ರೆಯ ವೇಳೆಯಲ್ಲೂ ಪ್ರಧಾನಮಂತ್ರಿಗಳು ಸೈಬರ್ ಭದ್ರತೆ ಮತ್ತು ಉಗ್ರ ನಿಗ್ರಹ ಕ್ಷೇತ್ರದಲ್ಲಿ ಸಹಭಾಗಿತ್ವವಷ್ಟೇ ಅಲ್ಲದೆ
ವ್ಯಾಪಾರ, ಹೂಡಿಕೆ, ನವೋದ್ಯಮದಂಥ ಕ್ಷೇತ್ರಗಳಲ್ಲಿನ ಸಂಬಂಧ ಸುಧಾರಣೆಯ ವಿಷಯವಾಗಿಯೂ ಚರ್ಚೆ ಮಾಡಿದ್ದಾರೆ. ಇನ್ನು ಇಂಡೋನೇಷ್ಯಾದ ಜೊತೆಗೆ ಮೂಲಸೌಕರ್ಯಾಭಿವೃದ್ಧಿ ಸೇರಿದಂತೆ, ಸಮಗ್ರ ವ್ಯೂಹಾತ್ಮಕ ಒಪ್ಪಂದಕ್ಕೆ ಭಾರತ ಮನಸ್ಸು ಮಾಡಿರುವುದು ವಿಶೇಷ. ಈ ನಡೆ ಪ್ರಪಂಚದ, ಅದರಲ್ಲೂ ಮುಖ್ಯವಾಗಿ ಚೀನಾದ ಹುಬ್ಬೇರುವಂತೆ ಮಾಡಿರು ವುದು ಸುಳ್ಳಲ್ಲ. ಏಕೆಂದರೆ ಇಂಡೋನೇಷ್ಯಾ ಈ ರೀತಿಯ ಒಪ್ಪಂದವನ್ನು ಚೀನಾದೊಂದಿಗೆ ಮಾತ್ರ ಮಾಡಿಕೊಂಡಿತ್ತು. ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಇಂಥ ಒಪ್ಪಂದವನ್ನು ಭಾರತ ಕೇವಲ ಇಂಡೋನೇಷ್ಯಾ ದೊಂದಿಗೆ ಮಾತ್ರ ಮಾಡಿಕೊಂಡಿದೆ ಎನ್ನುವುದನ್ನೂ ಗಮನಿಸಬೇಕು.
ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾದ ಶಕ್ತಿ ವೃದ್ಧಿಯನ್ನು ತಡೆಗಟ್ಟಲು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಬಂದರು ಅಭಿವೃದ್ಧಿಪಡಿಸಲು ಭಾರತ ಮತ್ತು ಇಂಡೋನೇಷ್ಯಾ ಒಪ್ಪಿಗೆ ಸೂಚಿಸಿವೆ. ಇದಲ್ಲದೆ ಸುಮಾತ್ರಾ ದ್ವೀಪ ಮತ್ತು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಸಂಚರಿಸುವ ಮಲಕ್ಕಾ ಸ್ಟ್ರೈಟ್ ನಡುವಿನ ಪ್ರದೇಶ ಸಬಾಂಗ್‌ನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. “ಲುಕ್ ಈಸ್ಟ್ ಪಾಲಿಸಿ’ ಅಂದರೆ ಆಗ್ನೇಯ ಏಷ್ಯಾದ ರಾಷ್ಟ್ರಗಳ ಜೊತೆಗೆ ಸಂಬಂಧ ವೃದ್ಧಿಯ ಹೆಜ್ಜೆಯನ್ನು ಮೊದಲು ಇಟ್ಟದ್ದು ನರಸಿಂಹರಾವ್ ಅವರ ಸರ್ಕಾರ. ಅಂದಿನಿಂದ ಆ ನೀತಿಯು ವ್ಯಾಪಾರಕ್ಕೆ ಹೆಚ್ಚು ಒತ್ತುಕೊಡುತ್ತಾ ಬಂದಿತ್ತು. ವ್ಯೂಹಾತ್ಮಕ ದೃಷ್ಟಿಯಿಂದ ಯಾವ ಕೆಲಸ ಉಳಿದುಹೋಗಿತ್ತೋ ಅದನ್ನು ಎನ್‌ಡಿಎ ಸರ್ಕಾರದ ಆ್ಯಕ್ಟ್ ಈಸ್ಟ್ ಪಾಲಿಸಿಯು ಪೂರ್ಣಗೊಳಿಸಲು ಪ್ರಯತ್ನಿಸುತ್ತಿರುವುದು ಗುಣಾತ್ಮಕ ನಡೆ.