ಲಕ್ನೊ: ಪ್ರವಾಸಿ ಫ್ರಾನ್ಸ್ “ಎ’ ತಂಡವನ್ನು 4ನೇ ಹಾಕಿ ಪಂದ್ಯದಲ್ಲೂ ಮಣಿಸಿದ ಭಾರತದ ವನಿತಾ “ಎ’ ತಂಡ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲ ಮುಖಾಮುಖೀಯನ್ನು ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಆತಿಥೇಯ ವನಿತೆಯರು ಗೆಲುವಿನ ಹ್ಯಾಟ್ರಿಕ್‌ನೊಂದಿಗೆ ಸರಣಿ ಮೇಲೆ ಹಕ್ಕು ಚಲಾಯಿಸಿದರು.
ಭಾರತದ ಪರ 19ರ ಯುವ ಆಟಗಾರ್ತಿ ಜ್ಯೋತಿ 26ನೇ ನಿಮಿಷದಲ್ಲಿ ಹಾಗೂ ಗಗನ್‌ದೀಪ್ ಕೌರ್ 32ನೇ ನಿಮಿಷದಲ್ಲಿ ಗೋಲು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೂಟದ ಮೊದಲ ಪಂದ್ಯವನ್ನು 0-1 ಅಂತರದಿಂದ ಕಳೆದುಕೊಂಡಿದ್ದ ಭಾರತ, ಅನಂತರದ ಎಲ್ಲ ಪಂದ್ಯಗಳಲ್ಲೂ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ಮೇಲೆ ಸವಾರಿ ಮಾಡಿತು. ದ್ವಿತೀಯ ಪಂದ್ಯವನ್ನು 3-2 ಗೋಲುಗಳಿಂದ ಗೆದ್ದರೆ, ತೃತೀಯ ಮುಖಾಮುಖೀಯಲ್ಲಿ 2-0 ಜಯ ಸಾಧಿಸಿತು.
ಭಾರತದ ಆಕ್ರಮಣಕಾರಿ ಆಟ ಅಂತಿಮ ಪಂದ್ಯದ ಮೊದಲ ಕ್ವಾರ್ಟರ್ ಗೋಲ್ ಲೆಸ್ ಆಗಿ ಮುಗಿದ ಬಳಿಕ ಫ್ರಾನ್ಸ್ ವನಿತೆಯರು ಭಾರತದ ಮೇಲೆ ಸತತವಾಗಿ ಒತ್ತಡ ಹೇರಲು ಪ್ರಯತ್ನಿಸಿದರು. ಆದರೆ ಆತಿಥೇಯರ ಆಕ್ರಮಣಕಾರಿ
ಆಟದ ಮುಂದೆ ಫ್ರೆಂಚ್ ವನಿತೆಯರಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಅಲ್ಲದೇ 26ನೇ ನಿಮಿಷದ ಗೋಲು ಭಾರತದ ಪಾಳೆಯಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿತು.
ವಿರಾಮದ ವೇಳೆ ಕೋಚ್ ಬಲ್ಜೀತ್ ಸಿಂಗ್ ನೀಡಿದ ಸಲಹೆಯನ್ನು ತಪ್ಪದೇ ಪಾಲಿಸಿದವನಿತೆಯರು, ಎರಡೇ ನಿಮಿಷದಲ್ಲಿ ಫ್ರೆಂಚರ ಮೇಲೇರಿ ಹೋದರು. ಕೌರ್ ಸಿಡಿಸಿದ ಗೋಲಿನ ಸ್ಫೂರ್ತಿಯಿಂದ ಭಾರತ ಇನ್ನಷ್ಟು ಬಿರುಸಿನ ಆಟಕ್ಕಿಳಿಯಿತು. ಎದುರಾಳಿಯ ಆಕ್ರಮಣಕ್ಕೆ ಭಾರತದ ರಕ್ಷಣಾ ವಿಭಾಗ ತಡೆಯೊಡ್ಡಿತು. ಭಾರತ “ಎ’ 2-0 ಮುನ್ನಡೆ ಕಾಯ್ದುಕೊಂಡಿತು.