Advertisement

ಅಭ್ಯಾಸ ಪಂದ್ಯ: ಅಯ್ಯರ್‌ಗೆ ದಿನದಾಟದ “ಶ್ರೇಯಸ್‌’

03:45 AM Feb 19, 2017 | Team Udayavani |

ಮುಂಬಯಿ: ಕಳೆದೆರಡು ಋತುಗಳಿಂದ ಅಮೋಘ ಪ್ರದರ್ಶನ ನೀಡುತ್ತ ಟೀಮ್‌ ಇಂಡಿಯಾದ ಬಾಗಿಲು ತಟ್ಟುತ್ತಿರುವ ಮುಂಬಯಿಯ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಆಸ್ಟ್ರೇಲಿಯದ ಬೌಲಿಂಗ್‌ ದಾಳಿಯನ್ನು ಪುಡಿಗುಟ್ಟಿದ್ದಾರೆ. ಅಭ್ಯಾಸ ಪಂದ್ಯದ ದ್ವಿತೀಯ ದಿನದ ಶ್ರೇಯಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

5ಕ್ಕೆ 327 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯ 7 ವಿಕೆಟಿಗೆ 469 ರನ್‌ ಪೇರಿಸಿ ಡಿಕ್ಲೇರ್‌ ಮಾಡಿತು. ಜವಾಬಿತ್ತ ಭಾರತ “ಎ’ ದ್ವಿತೀಯ ದಿನದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿದೆ. ಶ್ರೇಯಸ್‌ ಅಯ್ಯರ್‌ 85, ಮತ್ತೂಬ್ಬ ಪ್ರತಿಭಾವಂತ ಆಟಗಾರ ರಿಷಬ್‌ ಪಂತ್‌ 3 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರಿಬ್ಬರು ರವಿವಾರದ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯದ ಪಂಥಾಹ್ವಾನವನ್ನು ಹೇಗೆ ಸ್ವೀಕರಿಸಬಹುದೆಂಬುದೊಂದು ಕುತೂಹಲ.

ಅಯ್ಯರ್‌ ಹೊರತುಪಡಿಸಿದರೆ ಭರವಸೆಯ ಆರಂಭಕಾರ ಪ್ರಿಯಾಂಕ್‌ ಪಾಂಚಾಲ್‌ (36), ಅಂಕಿತ್‌ ಭವೆ° (25) ತಕ್ಕಪಟ್ಟಿಗೆ ಗಮನ ಸೆಳೆದರು. 19 ರನ್‌ ಮಾಡಿದ ನಾಯಕ ಹಾರ್ದಿಕ್‌ ಪಾಂಡ್ಯ ದಿನದಾಟದ ಕೊನೆಯ ಹಂತದಲ್ಲಿ ಔಟಾದರು. ಓಪನರ್‌ ಅಖೀಲ್‌ ಹೆರ್ವಾಡ್ಕರ್‌ ನಾಲ್ಕೇ ರನ್ನಿಗೆ ಆಟ ಮುಗಿಸಿದರು. ಆಸ್ಟ್ರೇಲಿಯದ ಯಶಸ್ವಿ ಬೌಲರ್‌ಗಳೆಂದರೆ ಜಾಕ್ಸನ್‌ ಬರ್ಡ್‌ ಹಾಗೂ ನಥನ್‌ ಲಿಯೋನ್‌. ಇಬ್ಬರೂ 2 ವಿಕೆಟ್‌ ಉರುಳಿಸಿದರು.

ಅಯ್ಯರ್‌ ಸಿಡಿಲಬ್ಬರದ ಆಟ
ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ 22ರ ಹರೆಯದ ಶ್ರೇಯಸ್‌ ಅಯ್ಯರ್‌ ಆಟ ಅತ್ಯಂತ ಬಿರುಸಿನಿಂದ ಕೂಡಿತ್ತು. ಆಸ್ಟ್ರೇಲಿಯದ ಯಾವುದೇ ರೀತಿಯ ದಾಳಿಗೂ ಅಂಜದ ಅಯ್ಯರ್‌ ಫೋರ್‌-ಸಿಕ್ಸ್‌ ಬಾರಿಸುತ್ತ ಹೋದರು. ಅವರ ಅಜೇಯ 85 ರನ್‌ ಕೇವಲ 93 ಎಸೆತಗಳಿಂದ ಬಂದಿದೆ. ಈ ಅಬ್ಬರದ ವೇಳೆ 5 ಸಿಕ್ಸರ್‌, 7 ಬೌಂಡರಿಗಳು ಸಿಡಿದಿವೆ.

ಸ್ಪಿನ್ನರ್‌ ನಥನ್‌ ಲಿಯೋನ್‌ ಅವರಿಂದ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಅಯ್ಯರ್‌ ಅವರ ಬ್ಯಾಟಿಂಗ್‌ ಅಬ್ಬರ ಮೊದಲ್ಗೊಂಡಿತ್ತು. ಅವರ ಎಲ್ಲ ಸಿಕ್ಸರ್‌ಗಳೂ ಲಾಂಗ್‌-ಆನ್‌ ಮೂಲಕವೇ ಹಾದುಹೋದವು. ಇದು ಅಯ್ಯರ್‌ ಅವರ 38ನೇ ಪ್ರಥಮ ದರ್ಜೆ ಪಂದ್ಯವಾಗಿದ್ದು, 9ನೇ ಶತಕದಿಂದ ಕೇವಲ 15 ರನ್‌ ದೂರದಲ್ಲಿ ನಿಂತಿದ್ದಾರೆ.
ಈ ಬಾರಿಯ ರಣಜಿ ಹೀರೋ ಪಾಂಚಾಲ್‌ 62 ಎಸೆತ ನಿಭಾಯಿಸಿ 36 ರನ್‌ ಮಾಡಿದರು (5 ಬೌಂಡರಿ). ಭವೆ° ಅವರ 25 ರನ್‌ 48 ಎಸೆತಗಳಿಂದ ಬಂತು (4 ಬೌಂಡರಿ). ಯಾವತ್ತೂ ಬಿರುಸಿನ ಆಟವಾಡುವ ಪಾಂಡ್ಯ ಇಲ್ಲಿ 19 ರನ್ನಿಗೆ 57 ಎಸೆತ ತೆಗೆದುಕೊಂಡರು.

Advertisement

ದ್ವಿತೀಯ ದಿನದ ಬ್ಯಾಟಿಂಗ್‌ ಮುಂದುವರಿಸಿದ ಆಸ್ಟ್ರೇಲಿಯ, ನಾಟೌಟ್‌ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್‌ ಮಾರ್ಷ್‌ ಹಾಗೂ ಮ್ಯಾಥ್ಯೂ ವೇಡ್‌ ಅವರ ಅರ್ಧ ಶತಕದಿಂದ ದೊಡ್ಡ ಮೊತ್ತ ಪೇರಿಸಿತು. ಮಾರ್ಷ್‌ 159 ಎಸೆತ ಎದುರಿಸಿ 75 ರನ್‌ ಮಾಡಿದರೆ (11 ಬೌಂಡರಿ, 1 ಸಿಕ್ಸರ್‌), ಕೀಪರ್‌ ವೇಡ್‌ 89 ಎಸೆತಗಳಿಂದ 64 ರನ್‌ ಹೊಡೆದರು (9 ಬೌಂಡರಿ). ಇವರಿಬ್ಬರ ವಿಕೆಟ್‌ ಹೆರ್ವಾಡ್ಕರ್‌ ಮತ್ತು ನದೀಂ ಪಾಲಾಯಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-7 ವಿಕೆಟಿಗೆ 469 ಡಿಕ್ಲೇರ್‌ (ಸ್ಮಿತ್‌ 107, ಶಾನ್‌ ಮಾರ್ಷ್‌ 104, ಮಿಚೆಲ್‌ ಮಾರ್ಷ್‌ 75, ವೇಡ್‌ 64, ಹ್ಯಾಂಡ್ಸ್‌ಕಾಂಬ್‌ 45, ಸೈನಿ 42ಕ್ಕೆ 2). ಭಾರತ “ಎ’-4 ವಿಕೆಟಿಗೆ 176 (ಅಯ್ಯರ್‌ ಬ್ಯಾಟಿಂಗ್‌ 85, ಪಾಂಚಾಲ್‌ 36, ಭವೆ° 25, ಬರ್ಡ್‌ 15ಕ್ಕೆ 2, ಲಿಯೋನ್‌ 72ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next