ಹೊಸದಿಲ್ಲಿ: ಭಾರತವು ಹೆಚ್ಚುವರಿ ಆಹಾರ ಉತ್ಪಾದಕ ದೇಶವಾಗಿದ್ದು, ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗೆ ಪರಿಹಾರಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ(ಆಗಸ್ಟ್ 3) ಹೇಳಿದ್ದಾರೆ.
65 ವರ್ಷಗಳ ನಂತರ ಭಾರತದಲ್ಲಿ ಆಯೋಜಿಸಲಾಗುತ್ತಿರುವ ಕೃಷಿ ಅರ್ಥಶಾಸ್ತ್ರಜ್ಞರ 32 ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು (ICAE) ಉದ್ಘಾಟಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಕೇಂದ್ರ ಬಜೆಟ್ 2024-25 ಸುಸ್ಥಿರ ಕೃಷಿಯ ಮೇಲೆ ಕೇಂದ್ರೀಕರಿಸಿದೆ’ ಎಂದರು.
“65 ವರ್ಷಗಳ ನಂತರ ಭಾರತದಲ್ಲಿ ಇಂತಹ ಸಮ್ಮೇಳನವನ್ನು ಆಯೋಜಿಸುತ್ತಿರುವುದು ನನಗೆ ಸಂತಸ ತಂದಿದೆ. ನೀವೆಲ್ಲರೂ ಪ್ರಪಂಚದ ವಿವಿಧ ದೇಶಗಳಿಂದ ಬಂದಿದ್ದೀರಿ. ಭಾರತದ 120 ಮಿಲಿಯನ್ ರೈತರು, ಭಾರತದ 30 ಮಿಲಿಯನ್‌ಗಿಂತಲೂ ಹೆಚ್ಚು ರೈತ ಮಹಿಳೆಯರು ಮತ್ತು ದೇಶದ 30 ಮಿಲಿಯನ್ ಮೀನುಗಾರರ ಪರವಾಗಿ ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ನೀವು ಇಂದು 550 ಮಿಲಿಯನ್ ಪ್ರಾಣಿಗಳು ವಾಸಿಸುವ ದೇಶದಲ್ಲಿ ಇದ್ದೀರಿ. ಈ ಕೃಷಿ ಪ್ರಧಾನ ಮತ್ತು ಪ್ರಾಣಿ-ಪ್ರೀತಿಯ ದೇಶಕ್ಕೆ ನಿಮಗೆಲ್ಲರಿಗೂ ಸ್ವಾಗತ” ಎಂದರು.
ಭಾರತವು ಆಹಾರ ಹೆಚ್ಚುವರಿ ದೇಶವಾಗಿದೆ. ನಾವು ಜಾಗತಿಕ ಆಹಾರ ಭದ್ರತೆಗೆ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ಭಾರತದಲ್ಲಿ ಇಂದಿಗೂ ನಾವು ಆರು ಋತುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದೇವೆ. ನಾವು 15 ಕೃಷಿ ಹವಾಮಾನ ವಲಯಗಳನ್ನು ಹೊಂದಿದ್ದು ಎಲ್ಲಾ ವಿಶೇಷತೆಗಳನ್ನು ಹೊಂದಿವೆ. ನೀವು ಇಲ್ಲಿ ಸುಮಾರು 100 ಕಿಲೋಮೀಟರ್ ಪ್ರಯಾಣಿಸಿದರೆ, ಕೃಷಿ ಪದ್ಧತಿ ಬದಲಾಗುತ್ತದೆ. ಈ ವೈವಿಧ್ಯತೆಯು ಭಾರತವನ್ನು ವಿಶ್ವದ ಆಹಾರ ಭದ್ರತೆಯ ಭರವಸೆಯ ಕಿರಣವನ್ನಾಗಿ ಮಾಡುತ್ತದೆ’ ಎಂದರು.
ಭಾರತವು ಹೆಚ್ಚುವರಿ ಆಹಾರ ಉತ್ಪಾದಕ ದೇಶವಾಗಿದ್ದು ಹಾಲು, ಮಸಾಲೆ ಪದಾರ್ಥಗಳ ಅತಿದೊಡ್ಡ ಉತ್ಪಾದಕವಾಗಿದೆ. ಒಂದು ಸಮಯದಲ್ಲಿ, ಭಾರತದ ಆಹಾರ ಭದ್ರತೆಯು ಜಾಗತಿಕ ಕಾಳಜಿಯಾಗಿತ್ತು, ಇಂದು ಭಾರತವು ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ.ಭಾರತದ ಕೃಷಿ ಪರಂಪರೆಯಲ್ಲಿ ವಿಜ್ಞಾನ ಮತ್ತು ತರ್ಕಕ್ಕೆ ಆದ್ಯತೆ ನೀಡಲಾಗಿದೆ. ಆಹಾರ ಮತ್ತು ಕೃಷಿಯ ಬಗ್ಗೆ ನಮ್ಮ ಸಂಪ್ರದಾಯಗಳು ಮತ್ತು ಅನುಭವಗಳು ನಮ್ಮ ದೇಶದಷ್ಟೇ ಪ್ರಾಚೀನವಾಗಿವೆ” ಎಂದರು.