(ಇಂಡಿ)ವಿಜಯಪುರ : ಲಚ್ಯಾಣ ಸಿದ್ಧಲಿಂಗೇಶ್ವರ ಮಹಾರಥೋತ್ಸವದ ಸಂಧರ್ಭದಲ್ಲಿ ರಥದ ಗಾಲಿ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ದುರಂತ ಭಾನುವಾರ ಸಂಜೆ ನಡೆದಿದೆ.
ಮೃತ ದುರ್ದೈವಿಗಳು ಸಾಬು ಶಿಂಧೆ (55) ಹಾಗೂ ಅಭಿಷೇಕ ಮುಜುಗೊಂಡ (16) ಎಂಬವರಾಗಿದ್ದು, ಬಂಡು ಕಟಕದೋಂಡ (32) ಗಂಭೀರವಾಗಿ ಗಾಯಗೊಂಡಿದ್ದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಸಹ ಲಚ್ಯಾಣ ಗ್ರಾಮದವರಾಗಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ದಲಿಂಗ ಮಹಾರಾಜರ ಕಮರಿಮಠದ ಜಾತ್ರೆಯಲ್ಲಿ ದುರ್ಘಟನೆ ನಡೆದಿರುವುದು ಸಹಸ್ರಾರು ಭಕ್ತರನ್ನು ದಿಗ್ಭ್ರಾಂತರನ್ನಾಗಿಸಿದೆ.
ಭಾನುವಾರ ಲಚ್ಯಾಣದ ಶ್ರೀಸಿದ್ದಲಿಂಗ ಮಹರಾಜರ ಜಾತ್ರೆಯ ಹಿನ್ನೆಲೆಯಲ್ಲಿ ಮಹಾರಥೋತ್ಸವಕ್ಕಾಗಿ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಜಾತ್ರೆಯಲ್ಲಿ ರಥ ಸಾಗುವ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಲೇ ಇಂಡಿ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಬೀಡು ಬಿಟ್ಟಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.