Advertisement

ಸೂಚ್ಯಂಕ ಮಹಾಪತನ: ಅಮೆರಿಕ-ರಷ್ಯಾ ಸಮರಕ್ಕೆ ಸೊರಗಿದ ಷೇರುಪೇಟೆ

01:01 AM Feb 23, 2023 | |

ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಬುಧವಾರ ಸಂವೇದಿ ಸೂಚ್ಯಂಕ ಮಹಾ ಪತನ ಕಂಡಿದೆ. ಅಮೆರಿಕದ ಜತೆಗೆ ಮಾಡಿಕೊಂಡಿರುವ ಅಣ್ವಸ್ತ್ರ ಒಪ್ಪಂದ ರದ್ದು ಮಾಡುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಮಾಡಿದ ಘೋಷಣೆ, ಉಕ್ರೇನ್‌ ಮೇಲಿನ ದಾಳಿ, ಹಲವು ರಾಷ್ಟ್ರಗಳಲ್ಲಿ ನಿಯಂತ್ರಣಕ್ಕೆ ಸಿಗದ ಹಣದುಬ್ಬರದಿಂದಾಗಿ ಸೂಚ್ಯಂಕ 927.74 ಪಾಯಿಂಟ್ಸ್‌ ಇಳಿಕೆಯಾಗಿದೆ. ಇದರಿಂದಾಗಿ ಒಂದೇ ದಿನ ಹೂಡಿಕೆದಾರರಿಗೆ 3.87 ಲಕ್ಷ ಕೋಟಿ ರೂ.ನಷ್ಟವಾಗಿದ್ದರೆ, ಒಟ್ಟು 4 ದಿನಗಳ ಅವಧಿಯಲ್ಲಿ 7 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.

Advertisement

ದಿನದ ಅಂತ್ಯಕ್ಕೆ ಬಿಎಸ್‌ಇನಲ್ಲಿ ಸೂಚ್ಯಂಕ 59,744.98ರಲ್ಲಿ ಮುಕ್ತಾಯವಾಯಿತು. ಮಧ್ಯಾಂತರ­ದಲ್ಲಿ 991.17 ಪಾಯಿಂಟ್ಸ್‌ ವರೆಗೆ ಇಳಿಕೆಯಾಗಿತ್ತು. ಈ ಮೂಲಕ ಫೆ.1ರಂದು ಮುಕ್ತಾಯದ ಕನಿಷ್ಠಕ್ಕೆ ಸೂಚ್ಯಂಕ ಇಳಿಕೆಯಾಗಿತ್ತು. 266 ಸ್ಟಾಕ್‌ಗಳು 52 ವಾರಗಳ ಕನಿಷ್ಠಕ್ಕೆ ತಗ್ಗಿವೆ. ಹೂಡಿಕೆದಾರರಿಗೆ ನಾಲ್ಕು ದಿನಗಳ ಅವಧಿಯಲ್ಲಿ 7 ಲಕ್ಷ ಕೋಟಿ ರೂ. ನಷ್ಟವಾಗಿದ್ದರೆ, ಒಟ್ಟಾರೆ ಮಾರುಕಟ್ಟೆ ಮೌಲ್ಯ 2,61,33,883.55 ಕೋಟಿ ರೂ. ಆಗಿದೆ. ಇನ್ನು ನಿಫ್ಟಿ ಸೂಚ್ಯಂಕ 272.40 ಪಾಯಿಂಟ್ಸ್‌ ಇಳಿಕೆಯಾಗಿ, 17,554.30 ಪಾಯಿಂಟ್ಸ್‌ಗೆ ಮುಕ್ತಾಯವಾಯಿತು. ಹೀಗಾಗಿ ನಾಲ್ಕು ತಿಂಗಳ ಕನಿಷ್ಠಕ್ಕೆ ತಗ್ಗಿದೆ.

ಅಮೆರಿಕ ಮತ್ತು ರಷ್ಯಾ ನಡುವೆ ಉಕ್ರೇನ್‌ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಾಕ್ಸಮರವೇ ಬುಧವಾರದ ಮಹಾ ಪತನಕ್ಕೆ ಕಾರಣವಾಗಿದೆ. ಶುಕ್ರವಾರಕ್ಕೆ ಉಕ್ರೇನ್‌ ಮೇಲಿನ ರಷ್ಯಾ ದಾಳಿ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಅಮೆರಿಕ ಸರಕಾರ ಮತ್ತಷ್ಟು ಕಠಿನವಾಗಿರುವ ಆರ್ಥಿಕ ದಿಗ್ಬಂಧನ ಕ್ರಮಗಳನ್ನು ಘೋಷಣೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸೂಚ್ಯಂಕ ಪತನವಾಗಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಕೊರಿಯಾ, ಜಪಾನ್‌, ಚೀನ, ಹಾಂಕಾಂಗ್‌, ಐರೋಪ್ಯ ಒಕ್ಕೂಟಗಳಲ್ಲಿನ ಷೇರು ಪೇಟೆಗಳಲ್ಲಿ ಕೂಡ ತೇಜಿಯ ವಹಿವಾಟು ನಡೆದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 82.11 ಡಾಲರ್‌ಗೆ ಇಳಿಕೆಯಾಗಿದೆ.

ರೂಪಾಯಿ ಇಳಿಕೆ: ಅಮೆರಿಕದ ಡಾಲರ್‌ ಎದುರು ರೂಪಾಯಿ 10 ಪೈಸೆ ಇಳಿಕೆಯಾಗಿದೆ. ದಿನಾಂತ್ಯಕ್ಕೆ ಡಾಲರ್‌ ಎದುರು 82.89 ರೂ.ಗೆ ಮುಕ್ತಾಯವಾಗಿದೆ. ಆದರೆ ಕಚ್ಚಾ ತೈಲದ ಬೆಲೆ ಕುಸಿತವಾದದ್ದು ರೂಪಾಯಿಗೆ ಕೊಂಚ ಅನುಕೂಲವಾಗಿದೆ.

ಪ್ರಧಾನ ಕಾರಣಗಳು
1 ವಾಲ್‌ ಸ್ಟ್ರೀಟ್‌ ಕುಸಿತ
ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿ ಮಂಗಳವಾರಕ್ಕೆ ಸಂಬಂಧಿಸಿದಂತೆ ಭಾರೀ ಪತನ ಕಂಡಿದೆ. ಅಲ್ಲಿಯ ಸೂಚ್ಯಂಕ ಶೇ.2 ಇಳಿಕೆ ಯಾ­ದದ್ದು ಬಿಎಸ್‌ಇ ಸಹಿತ ಜಗತ್ತಿನ ಹಲವು ಷೇರು ಪೇಟೆಗಳಿಗೆ ಪ್ರತಿಕೂಲವಾಯಿತು. ಡಿಸೆಂಬರ್‌ಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಗರಿಷ್ಠ ಇಳಿಕೆ. ಡೋ ಜಾನ್ಸ್‌ ಇಂಡಸ್ಟ್ರಿಯಲ್‌ ಆ್ಯವರೇಜ್‌ ಕೂಡ 697 ಪಾಯಿಂಟ್ಸ್‌ ಇಳಿಕೆಯಾಗಿದೆ.

Advertisement

2ರಾಜಕೀಯ ತಲ್ಲಣಗಳು
ಶುಕ್ರವಾರಕ್ಕೆ (ಫೆ.24) ರಷ್ಯಾ ಉಕ್ರೇನ್‌ನ ಮೇಲೆ ದಾಳಿ ನಡೆಸಲು ಆರಂಭಿಸಿ ಸರಿಯಾಗಿ ಒಂದು ವರ್ಷ ಪೂರ್ತಿಯಾಗುತ್ತದೆ. ಅದಕ್ಕೆ ಪೂರಕವಾಗಿ ಅಮೆರಿಕದ ಜತೆಗೆ 2010ರಲ್ಲಿ ಮಾಡಿಕೊಂಡ ಅಣ್ವಸ್ತ್ರ ಒಪ್ಪಂದ ರದ್ದು ಮಾಡುವ ಸವಾಲನ್ನು ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಹಾಕಿದ್ದರು. ಜತೆಗೆ ಪಾಶ್ಚಾತ್ಯ ರಾಷ್ಟ್ರಗಳ ಕಪಿಮುಷ್ಟಿಯಲ್ಲಿ ಉಕ್ರೇನ್‌ ಇದೆ ಎಂದು ಹೇಳಿದ್ದೂ ಬಿಕ್ಕಟ್ಟಿಗೆ ಕಾರಣ. ಇದರಿಂದಾಗಿ ಶೀತಲ ಸಮರದ ವರ್ಷಗಳೇ ಜಗತ್ತಿಗೆ ಮರುಕಳಿಸಿದೆ ಎಂಬ ಭಾವನೆ ಹೂಡಿಕೆದಾರರಲ್ಲಿ ಉಂಟಾಯಿತು. ಅದು ಮಾರುಕಟ್ಟೆಗಳಲ್ಲಿ ಋಣಾತ್ಮಕ ಪರಿಣಾಮಗಳನ್ನು ಬೀರಿದೆ.

3 ಫೆಡರಲ್‌ ರಿಸರ್ವ್‌
ಬಡ್ಡಿ ಏರಿಕೆ ಆತಂಕ
ಅಮೆರಿಕದ ಫೆಡರಲ್‌ ರಿಸರ್ವ್‌ ಮತ್ತೆ ಬಡ್ಡಿ ದರ ಏರಿಕೆ ಮಾಡಲಿದೆ ಎಂಬ ಆತಂಕ ಕೂಡ ಷೇರು ಪೇಟೆ ಇಳಿಕೆಗೆ ಕಾರಣ. ಹಣದುಬ್ಬರ ಪ್ರಮಾಣ ಇನ್ನು ಕಠಿನ ಸ್ಥಿತಿಯಲ್ಲಿಯೇ ಇರುವುದರಿಂದ ಫೆಡರಲ್‌ ರಿಸರ್ವ್‌ ಮತ್ತೆ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿನ ಆರ್ಥಿಕ ಬೆಳವಣಿಗೆ ದೇಶಕ್ಕೆ ಅತ್ಯಂತ ಪ್ರಮುಖವೇ ಆಗಿದೆ.

4 ಅದಾನಿ ಗ್ರೂಪ್‌ ವಿರುದ್ಧದ ಆರೋಪಗಳು
ಇನ್ನು ದೇಶೀಯ ವಿಚಾರಕ್ಕೆ ಬಂದರೆ ಅದಾನಿ ಗ್ರೂಪ್‌ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ಮಾಡಿರುವ ಆರೋಪಗಳು ಷೇರುಗಳ ಮೇಲೆ ಪ್ರತಿಫ‌ಲನವನ್ನು ಮುಂದುವರಿಸಿವೆ. ಬುಧವಾರಕ್ಕೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ ಹೊಂದಿರುವ ಷೇರುಗಳು ನಷ್ಟ ಹೊಂದಿವೆ. ಕಂಪೆನಿಗೆ 51, 294 ಕೋಟಿ ರೂ. ಒಂದೇ ದಿನ ನಷ್ಟವಾಗಿದೆ. ಅದಾನಿ ಎಂಟರ್‌ ಪ್ರೈಸಸ್‌ನ ಶೇ.10.4 ಷೇರುಗಳು ನಷ್ಟ ಅನುಭವಿಸಿದ್ದು ಪ್ರಧಾನ ಅಂಶ.

5 ಎಫ್ಐಐಗಳ ಕಳವಳ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು
(ಎಫ್ಐಐ) ಇತರ ಸುರಕ್ಷಿತ ಮಾರುಕಟ್ಟೆಗಳತ್ತ ಚಿತ್ತ ಹರಿಸಿದ್ದಾರೆ. 2022ರಲ್ಲಿ ಅವರು ಒಟ್ಟು 31 ಸಾವಿರ ಕೋಟಿ ರೂ. ನಷ್ಟವಾಗಿದೆ.

ಜಗತ್ತಿನ ಸಮಸ್ಯೆಯೇ ತಡೆ
ಜಗತ್ತಿನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಹಣದುಬ್ಬರ ವಿರುದ್ಧದ ಹೋರಾಟಕ್ಕೆ ತಡೆಯಾಗಿದೆ ಎಂದು ಆರ್‌ಬಿಐ ಹೇಳಿದೆ. ಫೆ.8ರಂದು ನಡೆದಿದ್ದ ಆರ್‌ಬಿಐ ಸಭೆಯಲ್ಲಿ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಅದರ ವಿವರಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ವಿಶೇಷವಾಗಿ ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ತೈಲ ಹೊರತಾಗಿರುವ ವಸ್ತುಗಳ ದರದಲ್ಲಿ ಭಾರೀ ಏರಿಕೆಯಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next