Advertisement

ಪಕ್ಷಗಳಿಗೆ ಪಕ್ಷೇತರರೇ ಸವಾಲ್‌!

03:31 PM Aug 30, 2018 | |

ವಿಜಯಪುರ: ಕಳೆದ ಚುನಾವಣೆಯಲ್ಲಿ ಪಕ್ಷೇತರರದ್ದೇ ಪಾರುಪತ್ಯವಾಗಿದ್ದ ಜಿಲ್ಲೆಯ ಮುದ್ದೇಬಿಹಾಳ ಪುರಸಭೆಗೆ ಚುನಾವಣೆ ನಡೆಯುತ್ತಿದ್ದು ಮತದಾನಕ್ಕೆ ಕ್ಷಣ ಗಣನೆ ಆರಂಭಗೊಂಡಿದೆ. ಪಕ್ಷೇತರ ಅಬ್ಬರಕ್ಕೆ ತತ್ತರಿಸಿರುವ ರಾಜಕೀಯ ಪಕ್ಷಗಳು-ನಾಯಕರು ಬದಲಾಗಿರುವ ರಾಜಕೀಯದ ಹಿನ್ನೆಲೆಯಲ್ಲಿ ಈ ಬಾರಿ ತಮ್ಮ ರಾಜಕೀಯ ಅಗ್ನಿ ಪರೀಕ್ಷೆಗೆ ಮುಂದಾಗಿದ್ದಾರೆ.

Advertisement

ಆ. 31ರಂದು ಮತದಾನ ನಡೆಯುತ್ತಿರುವ ಮುದ್ದೇಬಿಹಾಳ ಪುರಸಭೆ 23 ಸದಸ್ಯ ಬಲ ಹೊಂದಿದೆ. ಈ ಹಿಂದಿನ ಅವಧಿಯಲ್ಲಿ ರಾಜಕೀಯ ಪಕ್ಷಗಳ ಪರಿಸ್ಥಿತಿ ಗೌಣವಾಗಿತ್ತು. ಕಾಂಗ್ರೆಸ್‌, ಬಿಜೆಪಿ, ಜೆಡಿಸ್‌ ಪಕ್ಷಗಳು ಸೇರಿ 13 ಸ್ಥಾನ ಗಿಟ್ಟಿಸಿದ್ದರೆ, ಪಕ್ಷೇತರರು 12 ಸ್ಥಾನ ಗೆಲ್ಲುವ ಮೂಲಕ ರಾಜಕೀಯ ಪಕ್ಷಗಳ ನಾಯಕರ ವರ್ಚಸ್ಸಿಗೆ ಸೆಡ್ಡು ಹೊಡೆದಿದ್ದರು. ಈ ಬಾರಿ ಕೂಡ ಯಾವುದೇ ರಾಜಕೀಯ ಪಕ್ಷಗಳಿಗೆ ಎಲ್ಲ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಗಮನೀಯ. ಇದರ ಹೊರತಾಗಿಯೂ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬದಲಾಗಿರುವ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಬಾರಿ ಪಕ್ಷೇತರರ ಅಬ್ಬರಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಕುತೂಹಲ ಮೂಡಿಸಿದೆ.

ಬಿಜೆಪಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸೇರಿ ಹಲವು ನಾಯಕರನ್ನು ಕರೆಸಿ ಪ್ರಚಾರ ಮಾಡಿಸಿದ್ದರೆ, ಕಾಂಗ್ರೆಸ್‌ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿ ಹಲವರಿಂದ ಮನೆ ಮನೆ ಪ್ರಚಾರ ಮಾಡಿಸಿದೆ. ಜೆಡಿಎಸ್‌ ಪರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಖುದ್ದು ಪ್ರಚಾರ ನಡೆಸಿದ್ದಾರೆ. 

ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಎರಡು ಬಾರಿ ಗೆದ್ದಿದ್ದ ಎ.ಎಸ್‌. ಪಾಟೀಲ ನಡಹಳ್ಳಿ ಹಾಗೂ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದಲೇ ಐದು ಬಾರಿ ಗೆದ್ದಿದ್ದ ಸಿ.ಎಸ್‌. ನಾಡಗೌಡ ಇಬ್ಬರ ಮಧ್ಯೆ ರಾಜಕೀಯ ವೈಮನಸ್ಸು ಸೃಷ್ಟಿಯಾಗಿತ್ತು. ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದ್ದ ಎ.ಎಸ್‌. ಪಾಟೀಲ ನಡಹಳ್ಳಿ, ಪಕ್ಷದ ವರಿಷ್ಠರ
ವಿರುದ್ಧವೇ ಕಿಡಿ ಕಾರಿ, ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಡಹಳ್ಳಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ನಂತರ ಮುದ್ದೇಬಿಹಾಳ ಕ್ಷೇತ್ರದಲ್ಲಿ ಸಿ.ಎಸ್‌. ನಾಡಗೌಡ ಅವರನ್ನು ಸೋಲಿಸಿ ವಿಜಯ ಸಾಧಿಸುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಕೊಂಡಿದ್ದರು.

ಇತ್ತ ಕಳೆದ ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಸಿ.ಎಸ್‌. ನಾಡಗೌಡ ಪುರಸಭೆ ಚುನಾವಣೆಯನ್ನು ಅಸ್ತ್ರವಾಗಿಸಿಕೊಳ್ಳಲು ಮುಂದಾಗಿದ್ದಾರೆ. ಪರಿಣಾಮ ಕಾಂಗ್ರೆಸ್‌ ಸ್ಪರ್ಧಿಸಿದ್ದ 20 ಸ್ಥಾನಗಳಲ್ಲಿ 1 ಸ್ಥಾನದಲ್ಲಿ ಅವಿರೋಧ ಮಾಡಿಸಿ, ತಮ್ಮ ರಾಜಕೀಯ ಪ್ರಭಾವ ತೋರಿಸಿದ್ದಾರೆ. ಅಲ್ಲದೇ ಈ ಬಾರಿ ಪುರಸಭೆ ಅಧಿಕಾರವನ್ನು ಕಾಂಗ್ರೆಸ್‌ ತೆಕ್ಕೆಗೆ ಪಡೆಯಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆ ಇಲ್ಲದ ಸಂದರ್ಭದಲ್ಲೇ ಪಕ್ಷೇತರರ ಅಬ್ಬರ ನಡುವೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳಿಗಿಂತ ಅದ್ಬುತ ಸಾಧನೆ ಮಾಡಿದ್ದ ಜೆಡಿಎಸ್‌, ತನ್ನದೇ ಪಕ್ಷ ರಾಜ್ಯದ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರಿಂದ ಹುಮ್ಮಸ್ಸಿನಲ್ಲಿದೆ. 

Advertisement

ಬಿಜೆಪಿ ಪಾಳೆಯದಲಿದ್ದ ಮಂಗಳಾದೇವಿ ಬಿರಾದಾರ ಜೆಡಿಎಸ್‌ ಸೇರಿದ್ದು, ಜಿಲ್ಲೆಯಲ್ಲಿ ಇಬ್ಬರು ಜೆಡಿಎಸ್‌
ಶಾಸಕರಲ್ಲಿ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಅವರೇ ಪ್ರಚಾರ ನಡೆಸಿದ್ದು ಹುಮ್ಮಸ್ಸು ತುಂಬಿದ್ದಾರೆ.

ಇದರ ಹೊರತಾಗಿಯೂ ಪ್ರಚಾರದಲ್ಲಿ ಈ ಹಿಂದಿನಂತೆಯೇ ಪಕ್ಷೇತರರು ಪ್ರಚಾರದ ಅಬ್ಬರ ತೋರುತ್ತಿದ್ದಾರೆ. ಈ ಚುನಾವಣೆಯಲ್ಲೂ ತಮ್ಮ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಂಡು ರಾಜಕೀಯ ಪಕ್ಷಗಳಿಗೆ ಮತ್ತೆ ತಮ್ಮ ಶಕ್ತಿ ಪ್ರದರ್ಶಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next