ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಜತೆ ಮೈತ್ರಿ ಮುಂದುವರಿಸಲು ಬಯಸಿರುವ ಕಾಂಗ್ರೆಸ್, ಮೈತ್ರಿ ಸರ್ಕಾರದ ಬಗ್ಗೆ ತುಟಿ ಬಿಚ್ಚದಂತೆ ಎಚ್ಚರಿಕೆ ನೀಡಿದ ಮಾರನೇ ದಿನವೇ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರಿಸುವ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಜೆಡಿಎಸ್ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ಸದ್ಯ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಸಂಸದರಾಗಿದ್ದಾರೆ. ಅವರನ್ನು ಬದಲಿಸಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಟ್ಟರೆ ಯಾವುದಾದರೂ ಪಕ್ಷದಿಂದ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದರು.
ಜೆಡಿಎಸ್ ಸರಿಯಾಗಿ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ. ಕಾಂಗ್ರೆಸ್‌ನವರ ಗಮನಕ್ಕೆ ತಾರದೆ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಆಯಸ್ಸು ಕಡಿಮೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿಯಾದರೂ, ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಕಾಂಗ್ರೆಸ್ ನಾಯಕರನ್ನು ಕೋರಿಕೊಂಡರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಕಣ್ಣೀರು ಒರೆಸಬೇಕು. ಅವರೇ ಕಣ್ಣೀರು ಹಾಕುತ್ತಾ ಕುಳಿತರೆ ಜನರ ಕತೆ ಏನಾಗಬಹುದು? ಈ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದಲ್ಲ. ಕರ್ನಾಟಕದ ಮುಖ್ಯಮಂತ್ರಿ ಅಳುತ್ತಾರೆ ಎಂದು ಸಂಸತ್ತಿನಲ್ಲಿ ಚರ್ಚೆಯಾಗುತ್ತದೆ. ದೇಶಾದ್ಯಂತ ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಅಳುವುದರಿಂದ ಕಾಂಗ್ರೆಸ್ ಅವರಿಗೆ ತೊಂದರೆ ಕೊಡುತ್ತಿದೆ ಎಂಬ ಭಾವನೆ ರಾಜ್ಯದ ಜನತೆಯಲ್ಲಿ ಬರುತ್ತಿದೆ. ಆದರೆ, ತಮಗೆ ಕಾಂಗ್ರೆಸ್ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಅವರೇ ಹೇಳಿ¨ªಾರೆ. ಹೀಗಿರುವಾಗ ಜನರಲ್ಲಿ ಗೊಂದಲ ಸೃಷ್ಟಿಮಾಡುವುದು ಸರಿಯಲ್ಲ ಎಂದರು.