ಮಂಗಳೂರು: ಈ ಬಾರಿಯಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಿಸುವ ಉದ್ದೇಶದಿಂದ ಅದರ ಪೂರ್ವಭಾವಿಯಾಗಿ ಎಲ್ಲರ ಸಹಯೋಗದಲ್ಲಿ ಆ.14ರಂದು “ತಿರಂಗಾ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಜೆ 3.30ಕ್ಕೆ ಕರಾವಳಿ ಉತ್ಸವ ಮೈದಾನದಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು, ಯಾತ್ರೆಯು ಮಂಜೇಶ್ವರ ಗೋವಿಂದ ಪೈ ವೃತ್ತದ ವರೆಗೂ ಬಂದು ಸಮಾಪನಗೊಳ್ಳಲಿದೆ ಎಂದರು.
ಕೇವಲ ಕಚೇರಿಗೆ ಸೀಮಿತವಾಗಿದ್ದ ರಾಷ್ಟ್ರೀಯ ಹಬ್ಬಗಳನ್ನು ಪ್ರಧಾನಿ ಮೋದಿಯವರು ಜನಸಾಮಾನ್ಯರ ಮಧ್ಯೆ ತಂದಿದ್ದಾರೆ, ಅದರಿಂದಾಗಿ ಜನಸಾಮಾನ್ಯರೂ ಕೂಡ ರಾಷ್ಟ್ರದ ಹಬ್ಬಗಳನ್ನು ಉತ್ಸವ ರೀತಿಯಲ್ಲಿ ಆಚರಿಸುವಂತಾಗಿದೆ, ಈ ಸಂಭ್ರಮಕ್ಕೆ ಹಾಗೂ ದೇಶದ ಏಕತೆ ಮತ್ತು ಒಗ್ಗಟ್ಟಿನ ಪ್ರತೀಕವಾಗಿ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದರು.
ಆಸಕ್ತಿ ಇರುವವರೆಲ್ಲರೂ ಆಗಮಿಸಬಹುದು, ಪ್ಲಾಸ್ಟಿಕ್ ಧ್ವಜ ಬೇಡ, ಬಟ್ಟೆಯ ಧ್ವಜಗಳನ್ನು ತರಬಹುದು, ಅಗತ್ಯವಿರುವವರಿಗೆ ತ್ರಿವರ್ಣ ಧ್ವಜಗಳನ್ನೂ ಒದಗಿಸಲಾಗುವುದು. ಈಗಾಗಲೇ ಹಲವು ಶಿಕ್ಷಣ ಸಂಸ್ಥೆಗಳ ಆಡಳಿತಕ್ಕೂ ವಿನಂತಿ ಮಾಡಲಾಗಿದ್ದು ವಿದ್ಯಾರ್ಥಿಗಳೂ ಪಾಲ್ಗೊಳ್ಳುವ ನಿರೀಕ್ಷೆ ಇದೆ, ಎಲ್ಲ ಆಸಕ್ತರು ಭಾಗವಹಿಸಬೇಕು ಎಂದರು.
ಇದಕ್ಕೆ ಪೂರಕವಾಗಿ ದೇಶ ವಿಭಜನೆ ಯ ಕರಾಳ ದಿನಗಳನ್ನು ನಾವು ತಿಳಿದು ಕೊಳ್ಳಬೇಕು ಎಂಬ ಕಾರಣಕ್ಕಾಗಿ ಕೆನರಾ
ಡೊಂಗರಕೇರಿ ಶಾಲೆಯ ಭುವನೇಂದ್ರಸಭಾಂಗಣದಲ್ಲಿ ಸಂಜೆ ಪ್ರದರ್ಶಿನಿ ಯನ್ನೂ ಏರ್ಪಡಿಸಲಾಗಿದೆ ಎಂದರು.
ಹರ್ ಘರ್ ತಿರಂಗ ಯೋಜನೆ
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಎಲ್ಲ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಎಲ್ಲ ಫಲಾನುಭವಿಗಳ ಮನೆಗೆ ನಮ್ಮ ಜನಪ್ರತಿನಿಧಿಗಳು ತೆರಳಿ ಅವರಿಗೆ ಸಿಹಿತಿಂಡಿ ನೀಡಿ, ರಾಷ್ಟ್ರಧ್ವಜ ಹಾರಿಸಿ ಪ್ರಧಾನಿ ಮೋದಿಯವರ ಪುಸ್ತಕ ನೀಡುವ ಕಾರ್ಯಕ್ರಮವಿದೆ. ಇದನ್ನು ಸಾಂಕೇತಿಕವಾಗಿ ಎಲ್ಲ ಕ್ಷೇತ್ರದ ತಲಾ 9 ಮನೆಗಳಲ್ಲಿ ಮೂರು ದಿನ ಕಾಲ ನಡೆಸಲಾಗುವುದು ಎಂದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು.