ಕಾಪು: ಕಾಪು ತಾಲೂಕು ಮಟ್ಟದ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ 75ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಿತು.
ಕಾಪು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯನ್ನು ದೇಶದಾದ್ಯಂತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುತ್ತಿದ್ದು ಎಲ್ಲರ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ನೆನಪಿನಲ್ಲಿ ಕಾಪು ಕ್ಷೇತ್ರದಲ್ಲೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಸಾಧಕರಾದ ನಾಟಿ ವೈದ್ಯೆ ಶಾಲಿನಿ, ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ, ನಿವೃತ್ತ ಹಿರಿಯ ಸೈನಿಕ ಜೆರೋಮ್ ಕೊಮೋಡೋರ್ ಕೆಸ್ತಲಿನೋ ಮತ್ತು ಜಾನಪದ ಕಲಾವಿದ ಗುರುಚರಣ್ ಪೊಲಿಪು ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯ ಸಾಧಕರನ್ನು ಗೌರವಿಸಲಾಯಿತು. ಫಲಾನುಭವಿಗಳಿಗೆ ಹಕ್ಕು ಪತ್ರ ಸಹಿತ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಕಾಪು ವೃತ್ತ ನಿರೀಕ್ಷಕ ಕೆ. ಸಿ. ಪೂವಯ್ಯ, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್, ಕಾಪು ಎಸ್ಸೈ ಶ್ರೀಶೈಲ ಮುರಗೋಡ, ಶಿರ್ವ ಎಸ್ಸೈ ರಾಘವೇಂದ್ರ ಸಿ., ಪಡುಬಿದ್ರಿ ಎಸ್ಸೈ ಪುರುಷೋತ್ತಮ್, ಕಾಪು ಪುರಸಭಾ ಸದಸ್ಯರು, ವಿವಿಧ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.