ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಆಚರಣೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಪ್ರಾರಂಭವಾಗಿದ್ದು, ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುತ್ತಿದ್ದರೆ, ಬಿಜೆಪಿ ರಥಯಾತ್ರೆ ನಡೆಸಲು ಸಿದ್ಧತೆ ನಡೆಸಿದೆ.
ಈ ಸಂಬಂಧ ಸಚಿವ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ, ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಸಿದ್ಧತಾ ಸಭೆ ನಡೆಸಲಾಗಿದೆ. ರಾಜ್ಯದ ನಾಲ್ಕು ಕಂದಾಯ ಜಿಲ್ಲೆ ವ್ಯಾಪ್ತಿಯಿಂದ ಬೆಂಗಳೂರಿನವರೆಗೆ ಅದ್ಧೂರಿ ರಥಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ.
ಆಗಸ್ಟ್ 9 ರಿಂದ 18ರವರೆಗೆ ರಥಯಾತ್ರೆ ನಡೆಯಲಿದ್ದು, ಸಮಾರೋಪ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಹಾಗೂ ಸ್ವಾತಂತ್ರ್ಯ ಬಳಿಕ ದೇಶದಲ್ಲಿ ಕಾಂಗ್ರೆಸ್ ಮಾಡಿದ ತಪ್ಪುಗಳ ಬಗ್ಗೆ ಈ ರಥಯಾತ್ರೆ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲದಕ್ಕಿಂತ ಮಿಗಿಲಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕ ನೀಡಿದ ಕೊಡುಗೆ ಬಗ್ಗೆ ಯುವಜನರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ.
ನಾಲ್ಕು ಕೇಂದ್ರ: ಬೀದರ್‌ನ ಗೊರಟದಿಂದ ರಾಜಾ ವೆಂಕಟಪ್ಪ ನಾಯಕ ರಥಯಾತ್ರೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹಾಯ್ದು ಬೆಂಗಳೂರು ತಲುಪುತ್ತದೆ. ರಾಣಿ ಕಿತ್ತೂರು ಚನ್ನಮ್ಮ ರಥಯಾತ್ರೆ ಧಾರವಾಡದ ಕಿತ್ತೂರಿನಿಂದ ಹೊರಡುತ್ತದೆ. ಇದು ಕಿತ್ತೂರು ಕರ್ನಾಟಕದ ಎಲ್ಲ ಜಿಲ್ಲೆ ಹಾಯ್ದು ಬೆಂಗಳೂರು ತಲುಪಿದರೆ, ಒನಕೆ ಓಬವ್ವ ರಥ ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕದಲ್ಲಿ ಸಂಚರಿಸುತ್ತದೆ. ‰ರಾಣಿ ಅಬ್ಬಕ್ಕ ರಥ ಕರಾವಳಿ ಹಾಗೂ ಮೈಸೂರು ಮಾರ್ಗವಾಗಿ ಸಂಚರಿಸಿ ಬೆಂಗಳೂರಿಗೆ ಆಗಮಿಸುತ್ತದೆ.
ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ ಹತ್ತು ಸಾವಿರ ಹಾಗೂ ತಾಲೂಕು ಕೇಂದ್ರದಲ್ಲಿ ಐದು ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಖರ ವಾಗ್ಮಿಗಳನ್ನು ಭಾಷಣಕ್ಕೆ ಕಳುಹಿಸಲಾಗುತ್ತದೆ.
ಕೋಟಿ ಧ್ವಜ :
ಕಾರ್ಯಕ್ರಮದ ಭಾಗವಾಗಿ “ಹರ್ ಘರ್ ತಿರಂಗಾ’ ಎಂಬ ಘೋಷ ವಾಕ್ಯದೊಂದಿಗೆ 1 ಕೋಟಿ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಜೆಪಿ ನಿರ್ಧರಿಸಿದೆ.