Advertisement

ಫೆ.3ಕ್ಕೆ ಕನಿಷ್ಠ ವೇತನಕ್ಕಾಗಿ ಅನಿರ್ದಿಷ್ಟಾವಧಿ ಧರಣಿ

09:30 PM Jan 27, 2020 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯದ ಬಿಸಿಯೂಟ ನೌಕರರಿಗೆ ತಿಂಗಳ 21 ಸಾವಿರ ರೂ., ಕನಿಷ್ಠ ವೇತನ ನೀಡಬೇಕು, ಸೇವಾ ಭದ್ರತೆ ಜೊತೆಗೆ ನಿವೃತ್ತಿ ವೇತನ ನೀಡುವಂತೆ ಆಗ್ರಹಿಸಿ ಬರುವ ಫೆ.3 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಮಂಜುಳಾ ಹೇಳಿದರು.

Advertisement

ತಾಲೂಕಿನ ಪೆರೇಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬಿಸಿಯೂಟ ನೌಕರರ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ಬಾರಿ ಬಿಸಿಯೂಟ ನೌಕರರು ಕನಿಷ್ಠ ವೇತನ, ನಿವೃತ್ತಿ ಪಿಂಚಣಿಗೆ ಆಗ್ರಹಿಸಿ ಹೋರಾಟ, ಪ್ರತಿಭ ಟನೆಗಳನ್ನು ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲವಾದ್ದರಿಂದ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಟಾವದಿ ಧರಣಿ ನಡೆಸಲಾಗುವುದು ಎಂದರು.

ಕೋಟ್‌ ತೀರ್ಪು ಗಾಳಿಗೆ ತೂರಿದ ಕೇಂದ್ರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸ್ಕಿಂ ವರ್ಕರ್ಸ್‌ರಾದ ಬಿಸಿಯೂಟ ಕೆಲಸಗಾರರನ್ನು ಕಾರ್ಮಿಕರಾಗಿ ಪರಿಗಣಿಸಲು ಸಾಧ್ಯವಿಲ್ಲ. ಅವರನ್ನು ಕನಿಷ್ಠ ವೇತನ ಕಾಯ್ದೆಯಡಿ ತರಲು ತಯಾರಿಲ್ಲ. ಸಮಾನ ಕೆಲಸಕ್ಕಾಗಿ ಸಮಾನ ವೇತನ ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪುನ್ನು ಕೇಂದ್ರ ಸರ್ಕಾರ ಗಾಳಿಗೆ ತೂರಿದೆ ಎಂದು ಹೇಳಿದರು.

ಕೇಂದ್ರದ ವಿರುದ್ಧ ಆಕ್ರೋಶ: 2001-2002ರಲ್ಲಿ ಆರಂಭವಾದ ಮಧ್ಯಾಹ್ನದ ಬಿಸಿಯೂಟ ಯೋಜನೆ ದೇಶದ ಮಹತ್ವದ ಯೋಜನೆ. ಆದರೆ ಮಹಿಳೆಯರಿಗೆ ಕೇವಲ 2600 ರೂ. ಹಾಗೂ 2700 ರೂ., ಬಿಟ್ಟರೆ ಯಾವುದೇ ಸೌಲಭ್ಯಗಳು ಇಲ್ಲ. ಕೇಂದ್ರ ಸರ್ಕಾರ ಬಿಸಿಯೂಟ ನೌಕರರಿಗೆ ವೇತನ, ಪಿಂಚಣಿ ಹಾಗೂ ಇತರೇ ಸೌಲಭ್ಯಗಳನ್ನು ನೀಡದೇ ಮೇಲಿಂದ ಮೇಲೆ ಮೋಸ ಮಾಡುತ್ತಿದೆಯೆಂದು ಕೆ.ಆರ್‌.ಮಂಜುಳಾ ಕಿಡಿಕಾರಿದರು.

ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಲ್ಲ: ಕೇಂದ್ರ ಸರ್ಕಾರ ಬಿಸಿಯೂಟ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕೆಂದು ಹಾಗೂ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದನ್ನು ಖಂಡಿಸಿ ಫೆ.3 ರಂದು ಇಡೀ ರಾಜ್ಯಾದ್ಯಂತ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಅಡುಗೆ ಮಾಡುವುದನ್ನು ಸ್ಥಗಿತಗೊಳಿಸಿ ಹೋರಾಟವನ್ನು ಅನಿರ್ದಿಷ್ಟಾವಧಿ ಕಾಲ ಹಮ್ಮಿಕೊಳ್ಳಲಾಗಿದೆ. ಸರ್ಕಾರ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಸ್ಥಗಿತವಿಲ್ಲ ಎಂದರು.

Advertisement

ಪಿಂಚಣಿ ಸೌಲಭ್ಯ ಕಲ್ಪಿಸಿ: ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ನೌಕರರಿಗೆ ಎಲ್‌ಸಿ ಮಾದರಿಯಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ನೌಕರರನ್ನು ಕಾಯಂ ಸ್ವರೂಪದ ಉದ್ಯೋಗಿಗಳಾಗಿ ಸೃಷ್ಟಿಸಬೇಕು, ಯೋಜನೆ ಖಾಸಗೀಕರಣವನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು.

ಬೆಂಕಿಯಲ್ಲಿ ಆರೇಳು ಗಂಟೆ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಸರ್ಕಾರಗಳು ಕನಿಷ್ಟ ವೇತನ ಕೂಡದೇ ಅಲ್ಪವೇತನಕ್ಕೆ ದುಡಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂದಿನ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಗೊಂಡು ಜನ ಸಾಮಾನ್ಯರ ಬದುಕು ದುಸ್ತರವಾಗಿದೆ.

ಇತಂಹ ಸಂದರ್ಭದಲ್ಲಿ ಸರ್ಕಾರಗಳು ಬಿಸಿಯೂಟ ನೌಕರರಿಗೆ 2600, 2700 ವೇತನ ಕೊಟ್ಟರೆ ಜೀವನ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿ, ಫೆ.3 ರಿಂದ ಆರಂಭಗೊಳ್ಳಲಿರುವ ಅನಿರ್ದಿಷ್ಟಾವಧಿ ಹೋರಾಟ ನಿರ್ಣಾಯಕ ಹಂತ ತಲುಪಲಿದೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳಾದ ಭಾಗ್ಯಮ್ಮ, ನಾರಾಯಣಮ್ಮ, ಶಾಂತಮ್ಮ, ಅಲವೇಲಮ್ಮ, ಪರೀಧಾ, ಶಾರದ, ಕೊರೇನಹಳ್ಳಿ ಭಾಗ್ಯಮ್ಮ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಬಿಸಿಯೂಟ ನೌಕರರ ಬೇಡಿಕೆಗಳೇನು?
* ಬಿಸಿಯೂಟ ನೌಕರರಿಗೆ 21 ಸಾವಿರ ಕನಿಷ್ಠ ವೇತನ ಕೊಡಬೇಕು.
* ಎಲ್‌ಐಸಿ ಆಧಾರಿತ ಪಿಂಚಣಿ ಯೋಜನೆ ರೂಪಿಸಬೇಕು.
* ಬಿಸಿಯೂಟ ಖಾಸಗೀಕರಣ ಕೂಡಲೇ ಕೈ ಬಿಡಬೇಕು.
* ನೌಕರರಿಗೆ ವಿಮಾ ಸೌಲಭ್ಯ, ರಜೆ ಮತ್ತಿತರ ಸೌಲಭ್ಯ ಒದಗಿಸಬೇಕು.
* ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು.
* ಅಡುಗೆ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು.
* ಕೇಂದ್ರೀಕೃತ ಅಡುಗೆ ಯೋಜನೆ ಕೈ ಬಿಡಬೇಕು.
* ಬಿಸಿಯೂಟಕ್ಕೆ ಗುಣಮಟ್ಟದ ಆಹಾರ ಪದಾರ್ಥ ವಿತರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next