Advertisement

IND vs SL ODI Cricket: ಶ್ರೀಲಂಕಾದ ಸ್ಪಿನ್ ದಾಳಿಗೆ ನಲುಗಿದ ಭಾರತ ತಂಡ

11:22 PM Aug 07, 2024 | Team Udayavani |

ಕೊಲಂಬೊ: ಶ್ರೀಲಂಕಾ ತಂಡದ ಸ್ಪಿನ್‌ ದಾಳಿ ನಿಭಾಯಿಸುವಲ್ಲಿ ಏಷ್ಯಾದ ಹೊರಗಿನ ಕ್ರಿಕೆಟ್‌ ದೇಶಗಳಂತೆ ಪರದಾಡಿದ ಭಾರತ ಕ್ರಿಕೆಟ್‌ ತಂಡವು ಮಾಡು ಇಲ್ಲವೇ ಮಡಿ ಅಂತಿಮ ಪಂದ್ಯದಲ್ಲಿ ಸೋಲುವ ಮೂಲಕ ಏಕದಿನ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ.  ಏಕದಿನ ಸರಣಿಯ 3ನೇ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷ ಬಳಿಕ ಭಾರತದ ವಿರುದ್ಧ ಏಕದಿನ ಸರಣಿ ಗೆದ್ದು ದಾಖಲೆ ಬರೆಯಿತು.

Advertisement

ಸ್ಪಿನ್‌ ದಾಳಿಗೆ ಪರದಾಡಿದ ಭಾರತದ ಬ್ಯಾಟ್ಸ್‌ಮನ್‌ಗಳು:
ಕೊಲೊಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ ತಂಡ  ನೀಡಿದ 249 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್‌ ಶರ್ಮಾ (35) ಗರಿಷ್ಠ ರನ್‌ ಗಳಿಸಿದರೆ,  ವಾಷಿಂಗ್ಟನ್‌ ಸುಂದರ್‌ (30) ಉಳಿದ ಯಾವ ಬ್ಯಾಟರ್‌ಗಳೂ ರನ್‌ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ವಿರಾಟ್‌ ಕೊಹ್ಲಿಕೂಡ 20 ರನ್‌ಗಳಿಸಿ ಮತ್ತೆ ನಿರಾಸೆ ಮೂಡಿಸಿದರು. ರಿಷಭ್‌ ಪಂತ್‌ , ಶ್ರೇಯಸ್‌ ಅಯ್ಯರ್‌, ರಿಯಾನ್‌ ಪರಾಗ್‌, ದುಬೆ ಕೂಡ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಿಲ್ಲ. ಶುಭಮನ್‌ ಗಿಲ್‌ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು.

ಲಂಕಾ ತಂಡದಿಂದ ಬಿಗುದಾಳಿ:
ಸತತ ಮೂರು  ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್‌ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.  ಅಂತಿಮ ಪಂದ್ಯದಲ್ಲಿ ದುನಿತ್‌ ವೆಲ್ಲಲಾಗೆ ಭಾರತದ 5 ವಿಕೆಟ್‌ ಕಿತ್ತು ಆಘಾತ ನೀಡಿದರೆ, ಜೆಫ್ರಿ ವಾಂಡರ್ಸೆ 2 ವಿಕೆಟ್‌ ಕಿತ್ತರು. ಎರಡನೇ ಏಕದಿನ ಪಂದ್ಯದಲ್ಲಿ ಜೆಫ್ರಿ ವಾಂಡರ್ಸೆ 6 ವಿಕೆಟ್‌ ಕಬಳಿಸಿ ಮಿಂಚಿದ್ದರು.

ಆವಿಷ್ಕ ಫರ್ನಾಂಡೋ ಭರ್ಜರಿ ಬ್ಯಾಟಿಂಗ್
ಮೊದಲು ಬ್ಯಾಟಿಂಗ್‌ ಮಾಡಿದ  ಶ್ರೀಲಂಕಾ, ಭರ್ಜರಿ ಆರಂಭ ಪಡೆಯಿತು. ಪಥುಮ್‌ ನಿಸಂಕಾ (45), ಆವಿಷ್ಕ ಫರ್ನಾಂಡೋ (96) ಹಾಗೂ ಕುಶಾಲ್‌ ಮೆಂಡಿಸ್‌ (59) ರನ್‌ಗಳ ನೆರವಿನಿಂದ ಒಂದು ಹಂತದಲ್ಲಿ ಶ್ರೀಲಂಕಾ 3 ವಿಕೆಟ್‌ಗೆ 183 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯೂ ಇತ್ತು. ಆದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ ವಿಕೆಟ್‌ ಒಪ್ಪಿಸಿದ ಕಾರಣ ಶ್ರೀಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭಾರತದ ಪರ ರಿಯಾನ್‌ ಪರಾಗ್‌ 3 ವಿಕೆಟ್‌ ಕಬಳಿಸಿದರೆ, ಅಕ್ಷರ್‌ ಪಟೇಲ್‌, ಮೊಹಮ್ಮದ್‌ ಸಿರಾಜ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಕುಲದೀಪ್‌ ಯಾದವ್‌  ತಲಾ ಒಂದು ವಿಕೆಟ್‌ ಪಡೆದರು. ಮೊದಲ ಪಂದ್ಯ ರೋಚಕ ಟೈ ಆದರೆ, ಎರಡನೇ ಪಂದ್ಯದಲ್ಲಿ ಭಾರತವು 32 ರನ್‌ಗಳಿಂದ ಸೋಲನುಭವಿಸಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌
ಶ್ರೀಲಂಕಾ 50 ಓವರ್‌ಗಳಲ್ಲಿ 248/7

(ಆವಿಷ್ಕ ಫರ್ನಾಂಡೋ 96, ಕುಶಾಲ್‌ ಮೆಂಡಿಸ್‌ 59, ರಿಯಾನ್‌ ಪರಾಗ್‌ 54/3)

ಭಾರತ 26.1 ಓವರ್‌ಗಳಲ್ಲಿ 138ಕ್ಕೆ ಆಲೌಟ್‌

(ರೋಹಿತ್‌ ಶರ್ಮಾ 35, ವಾಷಿಂಗ್ಟನ್‌ ಸುಂದರ್‌ 30,  ದುನಿತ್‌ ವೆಲ್ಲಲಾಗೆ 27/5)\

ಪಂದ್ಯಶ್ರೇಷ್ಠ: ಆವಿಷ್ಕ ಫರ್ನಾಂಡೋ

 ಸರಣಿ ಶ್ರೇಷ್ಠ:  ದುನಿತ್‌ ವೆಲ್ಲಲಾಗೆ

Advertisement

Udayavani is now on Telegram. Click here to join our channel and stay updated with the latest news.

Next