ಮೆಲ್ಬರ್ನ್: ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಗುರುವಾರ ಬ್ರಿಸ್ಬೇನ್‌ನಿಂದ ಮೆಲ್ಬರ್ನ್ಗೆ ಆಗಮಿಸಿತು. ಇಲ್ಲಿನ ಐತಿಹಾಸಿಕ “ಎಂಸಿಜಿ’ಯಲ್ಲಿ ರವಿವಾರ ಭಾರತ-ಪಾಕಿಸ್ಥಾನ ನಡುವೆ ಟಿ20 ವಿಶ್ವಕಪ್ ಸೂಪರ್-12 ಹಂತದ ಹೈ ವೋಲ್ಟೇಜ್ ಮುಖಾಮುಖಿ ಸಾಗಲಿದೆ.
ಕ್ರಿಕೆಟಿಗರು ಬ್ರಿಸ್ಬೇನ್ ಹೊಟೇಲ್ ರೂಮ್ ಬಿಡುವ, ಮೆಲ್ಬರ್ನ್ಗೆ ಬಂದಿಳಿಯುವ ದೃಶ್ಯಾವಳಿಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಇದಕ್ಕೆ “ವೀ ಆರ್ ಇನ್ ಮೆಲ್ಬರ್ನ್, ಫಾರ್ ಅವರ್ ಫಸ್ಟ್ ಗೇಮ್’ ಎಂಬ ಶೀರ್ಷಿಕೆ ನೀಡಿದೆ.
ಉಳಿದ ತಂಡಗಳಂತೆ ಭಾರತ ಟಿ20 ವಿಶ್ವಕಪ್ ಸಮೀಪಿಸುವ ವೇಳೆ ದ್ವಿಪಕ್ಷೀಯ ಟಿ20 ಸರಣಿಯನ್ನು ಆಡಲಿಲ್ಲ. ಇದರ ಬದಲು ಪರ್ತ್‌ನಲ್ಲಿ 8 ದಿನಗಳ ಸಿದ್ಧತಾ ಶಿಬಿರಲ್ಲಿ ಪಾಲ್ಗೊಂಡಿತು. ಜತೆಗೆ ಪಶ್ಚಿಮ ಆಸ್ಟ್ರೇಲಿಯ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಿತು. ಒಂದನ್ನು ಗೆದ್ದು, ಇನ್ನೊಂದರಲ್ಲಿ ಸೋಲನುಭವಿಸಿತು. ಇದೇ ವೇಳೆ ಕ್ರಿಕೆಟಿಗರೆಲ್ಲ ರೋಟ್‌ನೆಸ್ಟ್ ಐಲ್ಯಾಂಡ್‌ಗೆ ತೆರಳಿ ಒಂದಿಷ್ಟು ರಿಲ್ಯಾಕ್ಸ್ ಮಾಡಿಕೊಂಡರು.
ಒಂದೇ ಅಭ್ಯಾಸ ಪಂದ್ಯ:
ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯ ವನ್ನು ಗೆದ್ದ ಭಾರತ ಬಹಳಷ್ಟು ಆತ್ಮವಿಶ್ವಾಸ ಗಳಿಸಿಕೊಂಡಿತು. ಆದರೆ ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು. ಇದರಿಂದ ಟೀಮ್ ಇಂಡಿಯಾದ ವಿಶ್ವಕಪ್ ತಯಾರಿಗೆ ಹಿನ್ನಡೆಯಾದದ್ದು ಸುಳ್ಳಲ್ಲ. ಆದರೆ ಭಾರತದ ಆಟಗಾರರು ಒಳಾಂಗಣದಲ್ಲಿ ಅಭ್ಯಾಸ ನಡೆಸುವ ಮೂಲಕ ಈ ಅವಧಿಯನ್ನು ಸದುಪಯೋಗಪಡಿಸಿಕೊಂಡರು.
ಭಾರತ-ಪಾಕಿಸ್ಥಾನ ಮುಖಾಮುಖೀಗೆ ಉಳಿದಿರುವುದು ಎರಡೇ ದಿವಸ. ಶುಕ್ರವಾರ ಎರಡೂ ತಂಡಗಳು ಮೆಲ್ಬರ್ನ್ ನಲ್ಲಿ ಮೊದಲ ಸುತ್ತಿನ ಅಭ್ಯಾಸಕ್ಕೆ ಇಳಿಯಲಿವೆ. ಆದರೆ ಇದೇ ವೇಳೆ ಮಳೆಯ ಮುನ್ಸೂಚನೆಯೂ ಇದೆ. ಇತ್ತಂಡ ಗಳ ಅಭ್ಯಾಸಕ್ಕೆ, ರವಿವಾರದ ಪಂದ್ಯಕ್ಕೆ ಹವಾಮಾನ ಎಷ್ಟರ ಮಟ್ಟಿಗೆ ಸಹಕರಿಸೀತು ಎಂಬುದೇ ಮುಖ್ಯ ಪ್ರಶ್ನೆ.
ರವಿವಾರ ಸಂಜೆ 7 ಗಂಟೆಗೆ (ಭಾರತದ ಕಾಲಮಾನದಂತೆ ಅಪರಾಹ್ನ 1.30) ಭಾರತ-ಪಾಕಿಸ್ಥಾನ ಪಂದ್ಯ ಆರಂಭವಾಗಲಿದೆ.