Advertisement

IND vs MAL; ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಇಂದು ಫೈನಲ್‌ ಹಣಾಹಣಿ

11:47 PM Aug 11, 2023 | Team Udayavani |

ಚೆನ್ನೈ: ಅಜೇಯ ಭಾರತ ತಂಡವು ಶುಕ್ರವಾರ ನಡೆದ ಸೆಮಿ ಫೈನಲ್‌ ಹೋರಾಟದಲ್ಲಿ ಜಪಾನ್‌ ತಂಡವನ್ನು 5-0 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದ ಫೈನಲ್‌ ಹಂತಕ್ಕೇರಿದೆ. ಭಾರತ ಫೈನಲ್‌ ಹಂತಕ್ಕೇರಿರುವುದು ಇದು ನಾಲ್ಕನೇ ಬಾರಿಯಾಗಿದೆ.

Advertisement

ಮೂರು ಬಾರಿಯ ಚಾಂಪಿಯನ್‌ ಆಗಿರುವ ಭಾರತವು ಶನಿವಾರ ನಡೆಯುವ ಫೈನಲ್‌ ಹೋರಾಟದಲ್ಲಿ ಮಲೇಷ್ಯಾ ತಂಡವನ್ನು ಎದುರಿಸಲಿದೆ. ಮಲೇಷ್ಯಾ ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯವನ್ನು 6-2 ಗೋಲುಗಳಿಂದ ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ ಸೋತಿರುವ ದಕ್ಷಿಣ ಕೊರಿಯ ಮತ್ತು ಜಪಾನ್‌ ತಂಡಗಳು ಶನಿವಾರ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಹೋರಾಡಲಿವೆ.

ಇಡೀ ಕೂಟದಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿರುವ ಭಾರತಕ್ಕೆ ಜಪಾನ್‌ ಎಲ್ಲಿಯೂ ಸರಿಸಾಟಿಯಂತೆ ಕಾಣಲೇ ಇಲ್ಲ. ಪಂದ್ಯದ ಆರಂಭದಿಂದಲೇ ಭಾರತ ಅದ್ಭುತ ಹಿಡಿತ ಸಾಧಿಸಿತು. ಪಂದ್ಯದ 19ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್‌ ಫೀಲ್ಡ್‌ ಗೋಲ್‌ ಮೂಲಕ ಭಾರತದ ಖಾತೆ ತೆರೆದರು. 23ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಪೆನಾಲ್ಟಿ ಕಾರ್ನರ್‌ ಮೂಲಕ ಎರಡನೇ ಗೋಲು ಬಾರಿಸಿದರು.

30ನೇ ನಿಮಿಷದಲ್ಲಿ ಜಪಾನ್‌ಗೆ ಮತ್ತೆ ಆಘಾತವಿಕ್ಕಿದ್ದು ಮನ್‌ದೀಪ್‌ ಸಿಂಗ್‌. ಇವರು ಫೀಲ್ಡ್‌ ಗೋಲ್‌ ಮೂಲಕ ಭಾರತಕ್ಕೆ ಮೂರನೇ ಗೋಲಿನ ಕಾಣಿಕೆ ನೀಡಿದರು. ಹೀಗಾಗಿ, ಮೊದಲ ಕ್ವಾರ್ಟರ್‌ನಲ್ಲಿಯೇ ಭಾರತ ಭರ್ಜರಿ ಮುನ್ನಡೆ ಸಾಧಿಸಿತು.

ದ್ವಿತೀಯ ಕ್ವಾರ್ಟರ್‌ನಲ್ಲಿ ಸುಮಿತ್‌ ಅವರು ಫೀಲ್ಡ್‌ ಗೋಲು ಮೂಲಕ ನಾಲ್ಕನೇ ಯಶ ತಂದುಕೊಟ್ಟರು. ಇದು 39ನೇ ನಿಮಿಷದಲ್ಲಿ ಬಂದಿತು. ಈ ಮೂಲಕ ಭಾರತ 4-0 ಗೋಲುಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳೂ ಗೋಲು ಬಾರಿಸುವಲ್ಲಿ ವಿಫ‌ಲವಾದವು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಕಾರ್ತಿ ಸೆಲ್ವಂ ಫೀಲ್ಡ್‌ ಗೋಲು ಮೂಲಕ ಐದನೇ ಗೋಲು ಬಾರಿಸಿದರು. 51 ನಿಮಿಷದಲ್ಲಿ ಈ ಗೋಲು ಬಂದಿತು. ಒಂದು ರೀತಿಯಲ್ಲಿ ಇಡೀ ಪಂದ್ಯ ಏಕಮುಖವಾಗಿ ಸಾಗಿತು ಎಂದರೆ ತಪ್ಪಾಗಲಾರದು.

Advertisement

ಹಾಲಿ ಚಾಂಪಿಯನ್‌ಗೆ ಸೋಲು
ಈ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅಮೋಘ ಆಟದ ಪ್ರದ ರ್ಶನ ನೀಡಿದ ಮಲೇಷ್ಯಾ ತಂಡವು ಹಾಲಿ ಚಾಂಪಿಯನ್‌ ದಕ್ಷಿಣ ಕೊರಿಯ ತಂಡವನ್ನು 6-2 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿ ಇದೇ ಮೊದಲ ಬಾರಿ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿತು..

ಫೈಜಲ್‌ ಸಾರಿ, ಶೆಲ್ಲೊ ಸಿಲ್ವೆರಿಯೋಸ್‌, ಅಬು ಕಮಲ್‌ ಅಜ್ರಾಯಿ ಮತ್ತು ನಜ್ಮಿ ಜಾಝಾÉನ್‌ ಮಲೇಷ್ಯಾ ಪರ ಗೋಲು ಹೊಡೆದರೆ ವೂ ಚಿಯೋನ್‌ ಜೀ ಮತ್ತು ನಾಯಕ ಜಾಂಗ್‌ಹ್ಯುನ್‌ ಜಾಂಗ್‌ ದಕ್ಷಿಣ ಕೊರಿಯ ಪರ ಗೋಲು ಹೊಡೆದರು.

ಪಂದ್ಯದ ಮೊದಲ ಅವಧಿಯಲ್ಲಿ ಎರಡೂ ತಂಡಗಳು ಸಮಬಲವಾಗಿ ಹೋರಾಡಿದವು. ಮೂರನೇ ನಿಮಿಷ ದಲ್ಲಿ ಚಿಯೋನ್‌ ಜೀ ಫೀಲ್ಡ್‌ ಗೋಲು ಮೂಲಕ ಖಾತೆ ತೆರೆದರು. ಮುಂದಿನ ನಿಮಿಷದಲ್ಲಿ ಮಲೇಷ್ಯಾದ ಅಜ್ರಾಯಿ ಏಕಾಂಗಿಯಾಗಿ ಹೋರಾಡಿ ಫೀಲ್ಡ್‌ ಗೋಲು ಹೊಡೆದು ಸಮಬಲ ಸ್ಥಾಪಿಸಿದರು.

9ನೇ ನಿಮಿಷದಲ್ಲಿ ಮಲೇಷ್ಯಾ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಹೊಡೆದು ಮುನ್ನಡೆ ಸಾಧಿ ಸಿತು. ಈ ಗೋಲನ್ನು ಜಾಝಾÉನ್‌ ಹೊಡೆದರು. ಮುಂದಿನ ನಿಮಿಷದಲ್ಲಿ ತಂಡದ ಅಮಿರುಲ್‌ ಅಜಾಹರ್‌ ಗ್ರೀನ್‌ ಕಾರ್ಡ್‌ ಪಡೆದರು. 14ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ಮೂಲಕ ಜಾಂಗ್‌ ಗೋಲನ್ನು ಹೊಡೆದು ಮತ್ತೆ ಸಮಬಲ ಸ್ಥಾಪಿಸಿ ದರು. ಆಬಳಿಕ ಮೇಲುಗೈ ಸಾಧಿಸಿದ ಮಲೇಷ್ಯಾ ಮತ್ತೆ ನಾಲ್ಕು ಗೋಲು ಹೊಡೆದು ಭರ್ಜರಿಯಾಗಿ ಜಯ ಸಾಧಿಸಿ ಫೈನಲಿಗೇರಿತು.

ಪಾಕ್‌ಗೆ ಐದನೇ ಸ್ಥಾನ
ಈ ಮೊದಲು ಐದು ಮತ್ತು ಆರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ಥಾನವು ಚೀನಾ ತಂಡವನ್ನು 6-1 ಗೋಲುಗಳಿಂದ ಸೋಲಿಸಿ ಐದನೇ ಸ್ಥಾನ ಪಡೆಯಿತು. ಮುಹಮ್ಮದ್‌ ಖಾನ್‌ ಮತ್ತು ಮುಹಮ್ಮದ್‌ ಅಹ್ಮದ್‌ ಅವರ ಅವಳಿ ಗೋಲುಗಳಿಂದ ಪಾಕಿಸ್ಥಾನ ಸುಲಭವಾಗಿ ಗೆಲುವು ಕಾಣುವಂತಾಯಿತು. ಅಬ್ದುಲ್‌ ಶಾಹಿದ್‌ ಮತ್ತು ಅಬ್ದುಲ್‌ ರಾಣ ಇನ್ನೆರಡು ಗೋಲು ಹೊಡೆದಿದ್ದರು. ಚೀನ ಪರ ಹೊಡೆದ ಏಕೈಕ ಗೋಲನ್ನು ಬೆನ್‌ಹಾಯಿ ಚೆನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next