ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಪುರುಷರ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದುಕೊಳ್ಳುವ ದಾಖಲೆ ಬರೆದಿದ್ದಾರೆ.
ಜಸ್ಪ್ರೀತ್ ಬುಮ್ರಾ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 150 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಆಗಿ ಹೊರಹೊಮ್ಮಿದ್ದರು. ವೈಜಾಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಎರಡು ಇನ್ನಿಂಗ್ಸ್ ನಲ್ಲಿ 91 ರನ್ ಕೊಟ್ಟು 9 ವಿಕೆಟ್ ಗಳನ್ನು ಪಡೆದಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿನ ಅಮೋಘ ಪ್ರದರ್ಶನದ ಪರಿಣಾಮ ಬುಮ್ರಾ ಅವರು ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಕಿಂಗ್ ನಲ್ಲಿ 881 ರೇಟಿಂಗ್ ಪಡೆದು ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಭಾರತದ ಫಾಸ್ಟ್ ಬೌಲರ್ ಒಬ್ಬರು ಟೆಸ್ಟ್ ರ‍್ಯಾಕಿಂಗ್ ನಲ್ಲಿ ನಂ.1 ಸ್ಥಾನದಲ್ಲಿ ಕಾಣಿಸಿಕೊಂಡಿರುವ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ.
ಮೊದಲ ಸ್ಥಾನದಲ್ಲಿದ್ದ ಆರ್. ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡಾ 851 ರೇಟಿಂಗ್ ನೊಂದಿಗೆ ಇದ್ದಾರೆ. ಇನ್ನು ಆಸ್ಟ್ರೇಲಿಯಾದ ಕಪ್ತಾನ ಪ್ಯಾಟ್ ಕಮ್ಮಿನ್ಸ್ 4ನೇ ಸ್ಥಾನದಲ್ಲಿದ್ದಾರೆ. 5ನೇ ಸ್ಥಾನದಲ್ಲಿ ಆಸೀಸ್ ವೇಗಿ ಜೋಶ್ ಹ್ಯಾಝಲ್ ವುಡ್ ಇದ್ದಾರೆ.
ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ 5 ವಿಕೆಟ್ ಕಬಳಿಸಿದ ಬಳಿಕ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.