ನಾಟಿಂಗ್‌ಹ್ಯಾಮ್: ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಚಹಾ ವಿರಾಮದ ಬಳಿಕ ಪಂದ್ಯ ಸ್ಥಗಿತಗೊಂಡಾಗ ಭಾರತ 4 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. ಆರಂಭಕಾರ ಕೆ.ಎಲ್. ರಾಹುಲ್ 57 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ರಾಹುಲ್ ಮತ್ತು ರೋಹಿತ್ ಶರ್ಮ 37.3 ಓವರ್‌ಗಳ ಜತೆಯಾಟದಲ್ಲಿ 97 ರನ್ ಪೇರಿಸುವ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದ್ದರು. ಆದರೆ 15 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ ತೀವ್ರ ಕುಸಿತ ಅನುಭವಿಸಿತು. ರೋಹಿತ್ 36, ಪೂಜಾರ 4, ರಹಾನೆ 5 ರನ್ ಮಾಡಿ ನಿರ್ಗಮಿಸಿದರು. ನಾಯಕ ವಿರಾಟ್ ಕೊಹ್ಲಿ ಖಾತೆಯನ್ನೇ ತೆರೆಯಲಿಲ್ಲ. ಅವರು ಮೊದಲ ಎಸೆತದಲ್ಲೇ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಇಂಗ್ಲೆಂಡ್ ಪರ ಆ್ಯಂಡರ್ಸನ್ 2, ರಾಬಿನ್ಸನ್ ಒಂದು ವಿಕೆಟ್ ಉರುಳಿಸಿದರು. ರಹಾನೆ ರನೌಟ್ ಸಂಕಟಕ್ಕೆ ಸಿಲುಕಿದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 183ಕ್ಕೆ ಆಲೌಟ್ ಆಗಿತ್ತು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-183 (ರೂಟ್ 64, ಬೇರ್‌ಸ್ಟೊ 29, ಕ್ರಾಲಿ 27, ಸ್ಯಾಮ್ ಕರನ್ ಔಟಾಗದೆ 27, ಬುಮ್ರಾ 46ಕ್ಕೆ 4, ಶಮಿ 28ಕ್ಕೆ 3, ಠಾಕೂರ್ 41ಕ್ಕೆ 2, ಸಿರಾಜ್ 48ಕ್ಕೆ 1). ಭಾರತ-4 ವಿಕೆಟಿಗೆ 125 (ರಾಹುಲ್ ಬ್ಯಾಟಿಂಗ್ 57, ರೋಹಿತ್ 36, ಆ್ಯಂಡರ್ಸನ್ 15ಕ್ಕೆ 2).