Advertisement

IND V/s WI: ಪರಿವರ್ತನೆಯ ಕಾಲಘಟ್ಟದಲ್ಲಿ ಟೀಮ್‌ ಇಂಡಿಯಾ

10:37 PM Jul 11, 2023 | Team Udayavani |

ರೊಸೇಯೂ (ಡೊಮಿನಿಕಾ): ಸಣ್ಣದೊಂದು ಪರಿವರ್ತನೆಯ ಕಾಲಘಟ್ಟದಲ್ಲಿರುವ ಭಾರತೀಯ ಟೆಸ್ಟ್‌ ತಂಡ ಬುಧವಾರದಿಂದ ತನ್ನ ತೃತೀಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಋತುವಿಗೆ ಚಾಲನೆ ನೀಡಲಿದೆ. ಇಲ್ಲಿನ “ವಿಂಡ್ಸರ್‌ ಪಾರ್ಕ್‌’ನಲ್ಲಿ ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಆಡಲಿಳಿಯಲಿದೆ. ಇದು 2 ಟೆಸ್ಟ್‌ ಗಳ ಸರಣಿಯಾಗಿದ್ದು, ಬಳಿಕ 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Advertisement

ಎರಡೂ ತಂಡಗಳು ಒಂದಿಷ್ಟು ಹತಾಶಭಾವ ದೊಂದಿಗೆ ಈ ಸರಣಿಯನ್ನು ಆರಂಭಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಭಾರತ ಸತತ 2 ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ತಲು ಪಿಯೂ ಸೋಲನ್ನೇ ಸಂಗಾತಿಯಾಗಿಸಿಕೊಂಡಿತ್ತು. ಇನ್ನೊಂದೆಡೆ ವೆಸ್ಟ್‌ ಇಂಡೀಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್‌ ಅವಕಾಶದಿಂದ ವಂಚಿತವಾದ ನೋವಿನಲ್ಲಿದೆ. ಇದನ್ನು ಮರೆತು ಮುಂದಡಿ ಇಡಬೇಕಾದ ಸವಾಲು ಎರಡೂ ತಂಡಗಳ ಮುಂದಿದೆ.

ಪೂಜಾರ ಇಲ್ಲದ ಸರಣಿ
ಭಾರತದ ಪಾಲಿಗೆ ಇದು ಪರಿವರ್ತನೆಯ ಕಾಲಘಟ್ಟ ಏಕೆಂದರೆ, “ಟೆಸ್ಟ್‌ ಸ್ಪೆಷಲಿಸ್ಟ್‌” ಚೇತೇಶ್ವರ್‌ ಪೂಜಾರ ಅವರನ್ನು ಕೈಬಿಟ್ಟಿರುವುದು. ಎಲ್ಲ ಕಡೆಯೂ ರನ್‌ ರಾಶಿ ಪೇರಿಸುವ ಪೂಜಾರ, ಟೆಸ್ಟ್‌ ತಂಡಕ್ಕೆ ಬಂದೊಡನೆ ಬೇಜಾರು ಮೂಡಿಸುವುದು ಇತ್ತೀಚೆಗೆ ಮಾಮೂಲಾಗಿತ್ತು. ಆಸ್ಟ್ರೇಲಿಯ ವಿರುದ್ಧದ “ವಿಶ್ವ ಟೆಸ್ಟ್‌’ ಫೈನಲ್‌ನಲ್ಲಿ ಭಾರತ ಸೋಲಲು ಪೂಜಾರ ಅವರ ವೈಫ‌ಲ್ಯವೂ ಒಂದು. ಹೀಗಾಗಿ ಕೆರಿಬಿಯನ್‌ ಪ್ರವಾಸಕ್ಕೆ ಪೂಜಾರ ಅವರನ್ನು ಕೈಬಿಡಲಾಯಿತು.

ಪೂಜಾರ ಸ್ಥಾನಕ್ಕೆ ಮುಂಬಯಿಯ ಯುವ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಬರುವುದು ಬಹುತೇಕ ಖಚಿತ. 21 ವರ್ಷದ ಜೈಸ್ವಾಲ್‌ ಮೂಲತಃ ಓಪನರ್‌. ಹೊಡಿಬಡಿ ಶೈಲಿಯ ಆಟಗಾರ. ಆದರೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ನಿಂತು ಆಡಿದ ಹೆಗ್ಗಳಿಕೆ ಇದೆ. ತ್ರಿಶತಕವನ್ನೂ ಬಾರಿಸಿ ಮೆರೆದಿದ್ದಾರೆ. ಈಗಿನ ಸಾಧ್ಯತೆ ಪ್ರಕಾರ ಜೈಸ್ವಾಲ್‌ ನಾಯಕ ರೋಹಿತ್‌ ಜರೆಗೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಆಗ ಶುಭಮನ್‌ ಗಿಲ್‌ ವನ್‌ಡೌನ್‌ಗೆ ಬರ ಬೇಕಾಗುತ್ತದೆ. ಈ ಮೂಲಕ ಪೂಜಾರ ಸ್ಥಾನವನ್ನು ಭರ್ತಿಗೊಳಿಸುವುದು ತಂಡದ ಪ್ಲ್ರಾನ್‌.

ವೆಸ್ಟ್‌ ಇಂಡೀಸ್‌ನ ವೇಗದ ಬೌಲಿಂಗ್‌ ದಾಳಿಯನ್ನು ನಿಭಾಯಿಸಿ ನಿಲ್ಲಲು ಗಿಲ್‌ ಅವರನ್ನೇ ಆರಂಭಿಕನನ್ನಾಗಿ ಉಳಿಸಿಕೊಂಡು, ವನ್‌ಡೌನ್‌ಗೆ ಜೈಸ್ವಾಲ್‌ ಅವರನ್ನು ಕಳುಹಿಸುವ ಸಾಧ್ಯತೆಯೂ ಇದೆ. ಕೆಮರ್‌ ರೋಚ್‌, ಶಾನನ್‌ ಗ್ಯಾಬ್ರಿಯಲ್‌, ಅಲ್ಜಾರಿ ಜೋಸೆಫ್ ಅವರ ಆರಂಭಿಕ ಸ್ಪೆಲ್‌ ಅಪಾಯ ತಂದೊಡ್ಡಬಹುದೆಂಬ ಮುನ್ನೆಚ್ಚರಿಕೆ ತಂಡದ ಆಡಳಿತ ಮಂಡಳಿಯದ್ದು. ಆಗ ಜೈಸ್ವಾಲ್‌ ಅವರನ್ನು ಅಪಾಯಕ್ಕೆ ತಳ್ಳುವುದು ಬೇಡ ಎಂಬ ಲೆಕ್ಕಾಚಾರವೂ ಇದೆ. ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ಎದುರಿನ ಟೆಸ್ಟ್‌ ಸರಣಿಗೆ ಜೈಸ್ವಾಲ್‌ ಅವರನ್ನು ಸಜ್ಜುಗೊಳಿಸುವುದು ಇಲ್ಲಿನ ಉದ್ದೇಶ.

Advertisement

ಉಳಿದಂತೆ ವಿರಾಟ್‌ ಕೊಹ್ಲಿ, ಕಮ್‌ಬ್ಯಾಕ್‌ ಕ್ರಿಕೆಟರ್‌-ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಸರದಿಯನ್ನು ಬೆಳೆಸಬೇಕಿದೆ. ಕೀಪಿಂಗ್‌ ಸ್ಥಾನಕ್ಕೆ ಇಶಾನ್‌ ಕಿಶನ್‌ ಆಯ್ಕೆಯಾಗುವ ಸುದ್ದಿಯೊಂದು ನಂಬಲರ್ಹ ಮೂಲದಿಂದ ತಿಳಿದು ಬಂದಿದೆ. ಆಗ ಅಷ್ಟೇನೂ ಪ್ರಭಾವ ಬೀರದ ಕೆ.ಎಸ್‌. ಭರತ್‌ ಹೊರಗುಳಿಯಬೇಕಾಗುತ್ತದೆ.

ಅನನುಭವಿ ಫಾಸ್ಟ್‌ ಬೌಲಿಂಗ್‌
ಭಾರತದ ವೇಗದ ಬೌಲಿಂಗ್‌ ವಿಭಾಗ ಅನನು ಭವಿಗಳಿಂದ ಕೂಡಿರುವುದೂ ಪರಿವರ್ತನೆಯ ಸೂಚನೆಯಾಗಿದೆ. ತ್ರಿವಳಿ ವೇಗಿಗಳ ಜಾಗಕ್ಕೆ ಐವರ ಸ್ಪರ್ಧೆ ಇದೆ. ಮೊಹಮ್ಮದ್‌ ಸಿರಾಜ್‌, ಶಾರ್ದೂಲ್‌ ಠಾಕೂರ್‌, ಸೈನಿ, ಜೈದೇವ್‌ ಉನಾದ್ಕತ್‌ ರೇಸ್‌ನ ಮುಂಚೂಣಿಯಲ್ಲಿದ್ದಾರೆ. ಮುಕೇಶ್‌ ಕುಮಾರ್‌ ಟೆಸ್ಟ್‌ ಕ್ಯಾಪ್‌ ಧರಿಸಿದರೂ ಅಚ್ಚರಿ ಇಲ್ಲ.
ವೆಸ್ಟ್‌ ಇಂಡೀಸ್‌ನ ವೇಗದ ಬೌಲಿಂಗ್‌ ಸಾಮರ್ಥ್ಯಕ್ಕೆ ಹೋಲಿಸಿದರೆ ಭಾರತದ ಅನುಭವ ಕಡಿಮೆ ಎಂಬುದನ್ನು ಒಪ್ಪಲೇಬೇಕು. ಕೆಮರ್‌ ರೋಚ್‌ 77 ಟೆಸ್ಟ್‌ಗಳಿಂದ 261 ವಿಕೆಟ್‌ ಉಡಾಯಿಸಿದ್ದಾರೆ. ಶಾನನ್‌ ಗ್ಯಾಬ್ರಿಯಲ್‌ ಸಾಧನೆ 58 ಟೆಸ್ಟ್‌ಗಳಿಂದ 164 ವಿಕೆಟ್‌. ನಮ್ಮಲ್ಲಿ 19 ಟೆಸ್ಟ್‌ಗಳಿಂದ 52 ವಿಕೆಟ್‌ ಕೆಡವಿರುವ ಸಿರಾಜ್‌ ಅವರೇ ಹೆಚ್ಚಿನ ಅನುಭವಿ.

ಸ್ಪಿನ್ನರ್‌ಗಳ ಆಯ್ಕೆ ವೇಳೆ ರವೀಂದ್ರ ಜಡೇಜ ಜತೆಗೆ ಆರ್‌. ಅಶ್ವಿ‌ನ್‌ ಅವರನ್ನೂ ಪರಿಗಣಿಸುವುದರಲ್ಲಿ ಅನುಮಾನವಿಲ್ಲ. ಆಸ್ಟ್ರೇಲಿಯ ಎದುರಿನ ವಿಶ್ವಕಪ್‌ ಟೆಸ್ಟ್‌ ಸೋಲಿಗೆ ಅಶ್ವಿ‌ನ್‌ ಅವರನ್ನು ಕೈಬಿಟ್ಟದ್ದೂ ಒಂದು ಕಾರಣ ಎಂದು ವಿಶ್ಲೇಷಿಸಲಾಗಿದೆ.

ಗಂಭೀರ ಆಟ ಅಗತ್ಯ
ನಾಯಕ ಕ್ರೆಗ್‌ ಬ್ರಾತ್‌ವೇಟ್‌, ಮಾಜಿ ಆಟಗಾರ ಶಿವನಾರಾಯಣ್‌ ಚಂದರ್‌ಪಾಲ್‌ ಅವರ ಪುತ್ರ ತೇಜ್‌ನಾರಾಯಣ್‌ ಚಂದರ್‌ಪಾಲ್‌, ಜರ್ಮೈನ್‌ ಬ್ಲ್ಯಾಕ್‌ವುಡ್‌ ವಿಂಡೀಸ್‌ ಬ್ಯಾಟಿಂಗ್‌ ಸರದಿಯ ಪ್ರಮುಖರು. ದಢೂತಿ ಆಫ್ಸ್ಪಿನ್‌ ಬೌಲರ್‌ ರಖೀಮ್‌ ಕಾರ್ನ್ವಾಲ್‌ ಮೇಲೆ ವಿಂಡೀಸ್‌ ಹೆಚ್ಚಿನ ನಂಬಿಕೆ ಇರಿಸಿದೆ. ಆದರೆ ಬದ್ಧತೆ ಹಾಗೂ ಸೀರಿಯಸ್‌ನೆಸ್‌ ಎರಡನ್ನೂ ತೋರಿಸದೆ ಹೋದರೆ ವೆಸ್ಟ್‌ ಇಂಡೀಸ್‌ನಿಂದ ಪ್ರತಿರೋಧ ನಿರೀಕ್ಷಿಸುವುದು ತಪ್ಪಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next