Advertisement

IND V/s NZ: ಹೊಸ ವರ್ಷದ ಪಂದ್ಯದಲ್ಲಿ ಸಮಬಲದ ಚಿಂತೆ

11:13 PM Jan 02, 2024 | Team Udayavani |

ಕೇಪ್‌ಟೌನ್‌: ಬುಧವಾರ ಕೇಪ್‌ಟೌನ್‌ನ “ನ್ಯೂ ಲ್ಯಾಂಡ್ಸ್‌”ನಲ್ಲಿ ಮೊದಲ್ಗೊಳ್ಳುವ ವರ್ಷಾರಂಭದ ಟೆಸ್ಟ್‌ ಪಂದ್ಯವನ್ನು ಅತ್ಯಂತ ಸಂಕಟ ಹಾಗೂ ಒತ್ತಡದಲ್ಲಿ ಆರಂಭಿಸಬೇಕಾದ ಚಿಂತೆಯಲ್ಲಿ ಮುಳುಗಿದೆ ಟೀಮ್‌ ಇಂಡಿಯಾ. ಕಾರಣ, ಸೆಂಚುರಿಯನ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಕೈಯಲ್ಲಿ ಅನುಭವಿಸಿದ ಇನ್ನಿಂಗ್ಸ್‌ ಸೋಲು. ಇದಕ್ಕೆ ಕೇಪ್‌ಟೌನ್‌ನಲ್ಲಿ ಸೇಡು ತೀರಿಸಬೇಕಿದೆ. ಇಲ್ಲವಾದರೆ ಕಾಮನಬಿಲ್ಲಿನ ನಾಡಿನಲ್ಲಿ ಭಾರತ ಮತ್ತೂಂದು ಸರಣಿ ಸೋಲನ್ನು ಹೊತ್ತುಕೊಳ್ಳಬೇಕಾಗುತ್ತದೆ.

Advertisement

ಅತ್ತ ಬೌಲಿಂಗೂ ಇಲ್ಲ, ಇತ್ತ ಬ್ಯಾಟಿಂಗ್‌ ಕೂಡ ಇಲ್ಲ ಎಂಬಂಥ ಸ್ಥಿತಿ ರೋಹಿತ್‌ ಶರ್ಮ ಪಡೆಯದ್ದು. ಇದೀಗ ಒಮ್ಮಿಂದೊಮ್ಮೆಲೆ ಎಲ್ಲ ವಿಭಾಗಗಳಲ್ಲಿ ಸುಧಾರಣೆ ಸಾಧಿಸಿ ಆತಿಥೇಯರ ಮೇಲೆ ಸವಾರಿಗೈದು ಸರಣಿಯನ್ನು ಸಮಬಲಕ್ಕೆ ತರಲು ಸಾಧ್ಯವೇ ಎಂಬುದೊಂದು ದೈತ್ಯ ಪ್ರಶ್ನೆ. ಫಾಸ್ಟ್‌ ಟ್ರ್ಯಾಕ್‌ ಮೇಲೆ ವೇಗಿಗಳಿಗೆ ಎದೆಯೊಡ್ಡಿ ನಿಂತರಷ್ಟೇ ಇಲ್ಲಿ ಯಶಸ್ಸು ಸಾಧ್ಯ ಎಂಬುದು ರಹಸ್ಯವೇನೂ ಆಗಿರಲಿಲ್ಲ. ಆದರೆ ಸೆಂಚುರಿಯನ್‌ನಲ್ಲಿ ನಮ್ಮವರಿಗೆ ಇದು ಅರಿವಾಗಲಿಲ್ಲ.

ಸ್ಪೆಷಲಿಸ್ಟ್‌ಗಳ ಕೊರತೆ
ಟೀಮ್‌ ಇಂಡಿಯಾದ ಮುಖ್ಯ ಸಮಸ್ಯೆಯೆಂದರೆ, ಟೆಸ್ಟ್‌ ಸ್ಪೆಷಲಿಸ್ಟ್‌ಗಳ ಕೊರತೆ. ಟಿ20 ಆಟಗಾರ ಯಶಸ್ವಿ ಜೈಸ್ವಾಲ್‌, ಲೆಕ್ಕದ ಭರ್ತಿಗೆಂಬಂತಿರುವ ಶಾರ್ದೂಲ್‌ ಠಾಕೂರ್‌, ದುಬಾರಿ ಬೌಲರ್‌ ಪ್ರಸಿದ್ಧ್ ಕೃಷ್ಣ ಅವರಿಂದ ತಂಡಕ್ಕೆ ಯಾವ ಪ್ರಯೋಜನವೂ ಆಗಿಲ್ಲ. ದುರಂತವೆಂದರೆ, ಸೂಕ್ತ ಹಾಗೂ ಸಮರ್ಥ ಬದಲಿ ಆಟಗಾರರ ಆಯ್ಕೆ ಕೂಡ ನಮ್ಮ ಬಳಿ ಇಲ್ಲ. ಜೈಸ್ವಾಲ್‌ ಬದಲು ಅಭಿಮನ್ಯು ಈಶ್ವರನ್‌ ಅವರನ್ನು ಆಡಿಸಿದರೆ ಲಾಭವಾದೀತು. ಈಶ್ವರನ್‌ ರಣಜಿ ಕ್ರಿಕೆಟ್‌ನಲ್ಲಿ ಸತತವಾಗಿ ಯಶಸ್ಸು ಕಾಣುತ್ತಲೇ ಬಂದ ಆಟಗಾರ. ನಿಂತು ಆಡುವ ಛಾತಿ ಹೊಂದಿದ್ದಾರೆ.

ಆಲ್‌ರೌಂಡರ್‌ ರವೀಂದ್ರ ಜಡೇಜ ಅವರ ಪುನರಾಗಮನ ಫ‌ಲಪ್ರದವಾಗಬೇಕಿದೆ. ಅವರೋರ್ವ ಮ್ಯಾಚ್‌ ವಿನ್ನರ್‌. ಜಡೇಜ ಆಗಮನದಿಂದ ಆರ್‌. ಅಶ್ವಿ‌ನ್‌ ಸ್ಥಾನಕ್ಕೆ ಸಂಚಕಾರ ಬಹುತೇಕ ಖಚಿತ. ಇಲ್ಲವೇ ಶಾರ್ದೂಲ್‌ ಠಾಕೂರ್‌ಗೆ ಖೋ ಕೊಟ್ಟು ಅಶ್ವಿ‌ನ್‌ ಅವರನ್ನು ಉಳಿಸಿಕೊಳ್ಳಲೂಬಹುದು. ಆದರೆ ಕೇಪ್‌ಟೌನ್‌ ಟ್ರ್ಯಾಕ್‌ ಮೇಲೆ ಸ್ಪಿನ್‌ ಮ್ಯಾಜಿಕ್‌ ನಡೆದೀತೇ ಎಂಬುದಷ್ಟೇ ಪ್ರಶ್ನೆ. ಪ್ರಸಿದ್ಧ್ ಕೃಷ್ಣ ಬದಲು ಇರುವ ಆಯ್ಕೆಯೆಂದರೆ ಮುಕೇಶ್‌ ಕುಮಾರ್‌ ಅವರದು. ಆದರೂ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ ವಿಭಾಗಕ್ಕೆ ಹೋಲಿಸುವಾಗ ನಮ್ಮವರ ಫಾಸ್ಟ್‌ ಬೌಲಿಂಗ್‌ ಡಿಪಾರ್ಟ್‌ಮೆಂಟ್‌ ಬಹಳ ದುರ್ಬಲ. ಮೊಹಮ್ಮದ್‌ ಶಮಿ ಗೈರು ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.

ರೋಹಿತ್‌ ವೈಫ‌ಲ್ಯ
ನಾಯಕ ರೋಹಿತ್‌ ಶರ್ಮ ಇನ್ನೂ ವಿಶ್ವಕಪ್‌ ಫೈನಲ್‌ ಸೋಲಿನ ಆಘಾತದಿಂದ ಹೊರಬಂದಂತಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಐದೇ ರನ್ನಿಗೆ ಆಟ ಮುಗಿಸಿದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಖಾತೆಯನ್ನೇ ತೆರೆಯಲಿಲ್ಲ. ನಾಯಕತ್ವದ ಅದೃಷ್ಟದ ವಿಷಯದಲ್ಲೂ ಅವರು ಬಹಳ ಹಿಂದೆ.

Advertisement

ಚೇತೇಶ್ವರ್‌ ಪೂಜಾರ ಅವರ ವನ್‌ಡೌನ್‌ ಸ್ಥಾನಕ್ಕೆ ಸೂಕ್ತ ಆಟಗಾರನ ಆಯ್ಕೆ ಈವರೆಗೆ ಸಾಧ್ಯವಾಗಿಲ್ಲ. ಗಿಲ್‌ ಕೇವಲ 2 ಮತ್ತು 26 ರನ್‌ ಮಾಡಿ ವೈಫ‌ಲ್ಯವನ್ನು ತೆರೆದಿರಿಸಿದ್ದಾರೆ. ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಅವರ ಬ್ಯಾಟಿಂಗ್‌ ಹೋರಾಟದ ಬಗ್ಗೆ ಎರಡು ಮಾತಿಲ್ಲ. ಇಬ್ಬರೂ ಹರಿಣಗಳ ದಾಳಿಯನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ. ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 38 ರನ್‌ ಮಾಡಿದರೆ, ದ್ವಿತೀಯ ಸರದಿಯಲ್ಲಿ ಇದರ ಎರಡರಷ್ಟು ಮೊತ್ತ ದಾಖಲಿಸಿದರು.

ಕೆ.ಎಲ್‌. ರಾಹುಲ್‌ ಈಗ ಆಪತ್ಬಾಂಧವನ ಪಾತ್ರದ ಮೂಲಕ ಆಪ್ತರಾಗುತ್ತಿದ್ದಾರೆ. ಮೊದಲ ಸರದಿಯಲ್ಲಿ ಶತಕ ಬಾರಿಸುವ ಮೂಲಕ ಭಾರತದ ಸರದಿಯನ್ನು ಆಧರಿಸಿ ನಿಂತಿದ್ದರು. ಇಂಥದೇ ಆಟವನ್ನು ಅಯ್ಯರ್‌, ಗಿಲ್‌ ಕೂಡ ಪ್ರದರ್ಶಿಸಬೇಕಿದೆ.

ಎಲ್ಗರ್‌ ಕೊನೆಯ ಪಂದ್ಯ
ದಕ್ಷಿಣ ಆಫ್ರಿಕಾದ ಮೊದಲ ಪಂದ್ಯದ ಬಹುತೇಕ ಯಶಸ್ಸು ಸಂದದ್ದು ಆರಂಭಕಾರ ಡೀನ್‌ ಎಲ್ಗರ್‌ ಅವರಿಗೆ. ಉಸ್ತುವಾರಿ ನಾಯಕರೂ ಆಗಿದ್ದ ಎಲ್ಗರ್‌ 185 ರನ್‌ ಬಾರಿಸಿ ಬೃಹತ್‌ ಮುನ್ನಡೆ ತಂದಿತ್ತಿದ್ದರು. ದ್ವಿತೀಯ ಸರದಿಯಲ್ಲಿ ಎಲ್ಗರ್‌ ಗಳಿಸಿದ ಮೊತ್ತವನ್ನು ಟೀಮ್‌ ಇಂಡಿಯಾದಿಂದ ಗಳಿಸಲಾಗಲಿಲ್ಲ ಎಂಬುದೊಂದು ವಿಪರ್ಯಾಸ.
ಇದು ಡೀನ್‌ ಎಲ್ಗರ್‌ ಅವರ ಕೊನೆಯ ಟೆಸ್ಟ್‌ ಪಂದ್ಯ. ಸಹಜವಾಗಿಯೇ ಸ್ಮರಣೀಯ ವಿದಾಯವೊಂದರ ಕನಸು ಕಾಣುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next