Advertisement

ನಿಲ್ಲದ ಪಾಕ್‌ ಕಳ್ಳಾಟ

12:30 AM Mar 06, 2019 | Team Udayavani |

ಇಸ್ಲಾಮಾಬಾದ್‌/ಹೊಸದಿಲ್ಲಿ: ಪುಲ್ವಾಮಾ ದಾಳಿಯ ಬಗ್ಗೆ ಭಾರತ ಕೊಟ್ಟ ಸಾಕ್ಷ್ಯವನ್ನು ತಿರಸ್ಕರಿಸಿರುವ ಪಾಕಿಸ್ಥಾನವು ಮಂಗಳವಾರ ಮತ್ತೂಂದು ಕಳ್ಳಾಟ ಶುರು ಮಾಡಿದೆ. ಉಗ್ರ ಸಂಘಟನೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಭಾರತ, ಅಮೆರಿಕ ಸಹಿತ ವಿಶ್ವದ ಪ್ರಮುಖ ರಾಷ್ಟ್ರಗಳಿಂದ ಒತ್ತಡ ತೀವ್ರಗೊಳ್ಳುತ್ತಿರುವಂತೆಯೇ ಜೈಶ್‌- ಎ- ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನ ಪುತ್ರ, ಸಹೋದರ ಸಹಿತ 44 ಮಂದಿ ಉಗ್ರರನ್ನು “ಬಂಧಿಸಿದೆ’ ಎಂದು ಹೇಳಿಕೊಂಡಿದೆ. ಮತ್ತೂಂದೆಡೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಾಂಬಾ ಮಾತನಾಡಿ, ಸಾಗರದ ಮೂಲಕ ಪಾಕ್‌ ಉಗ್ರರು ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಮತ್ತೂಂದು ಕಳ್ಳಾಟ
ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನ ಸಹೋದರ ರವೂಫ್ ಅಸ್ಗರ್‌, ಅಜರ್‌ನ ಪುತ್ರ ಹಮ್ಮದ್‌ ಅಜರ್‌ ಸೇರಿ 44 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ “ಬಂಧಿಸಲಾಗಿದೆ’ ಎಂದು ಹೇಳಿಕೊಂಡಿದೆ. ಆದರೆ ಇದು ಕಳ್ಳಾಟದಂತೆ ಕಾಣಿಸುತ್ತಿದೆ. ಜೈಶ್‌ ಉಗ್ರ ಸಂಘಟನೆಯ ಕೃತ್ಯದ ಕುರಿತ ಪುರಾವೆಗಳನ್ನು ಭಾರತವು 2 ದಿನಗಳ ಹಿಂದೆ ಪಾಕಿಸ್ಥಾನಕ್ಕೆ ಸಲ್ಲಿಸಿದ್ದು, ಪಾಕ್‌ನಲ್ಲಿ ಜೆಇಎಂ ಉಗ್ರರ ಶಿಬಿರಗಳು ಅಸ್ತಿತ್ವ ದಲ್ಲಿರುವ ಬಗ್ಗೆ, ಮಸೂದ್‌ ಅಜರ್‌ ಮತ್ತು ಆತನ ಕುಟುಂಬವು ಪಾಕ್‌ನಲ್ಲಿ ಪಡೆಯುತ್ತಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗಿತ್ತು. ಈ ದಾಖಲೆಯಲ್ಲಿ ಉಗ್ರರಾದ ಮುಫ್ತಿ ರವೂಫ್ ಮತ್ತು ಹಮ್ಮದ್‌ ಅಜರ್‌ನ ಹೆಸರನ್ನೂ ಸೇರಿಸಲಾಗಿತ್ತು.

ಸಾಗರ ಮಾರ್ಗದಿಂದಲೂ ದಾಳಿ?
ಪಾಕಿಸ್ಥಾನವು ಮತ್ತೂಂದೆಡೆ ಸದ್ದಿಲ್ಲದೆ ಭಾರತದ ಮೇಲೆ ದಾಳಿ ಮಾಡಲು ಉಗ್ರರಿಗೆ ಅವಕಾಶ ಕಲ್ಪಿಸುತ್ತಿರುವ ಮಾಹಿತಿಯೂ ಹೊರಬಿದ್ದಿದೆ. ಪುಲ್ವಾಮಾ ದಾಳಿಯ ಅನಂತರ ಸಮುದ್ರ ಮಾರ್ಗದಿಂದಲೂ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದಾರೆ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಾಂಬಾ ಮಾಹಿತಿ ನೀಡಿದ್ದಾರೆ. ಇಂಡೋ-ಪೆಸಿಫಿಕ್‌ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ನೆರೆ ರಾಷ್ಟ್ರದ ಕೃಪಾಪೋಷಣೆಯಲ್ಲಿ ಬೆಳೆದು ನಿಂತಿರುವ ಉಗ್ರವಾದಿಗಳು ಭಾರತವನ್ನು ಅಸ್ಥಿರಗೊಳಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇಂತಹ ಸವಾಲುಗಳನ್ನು ಎದುರಿಸಲು ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಹೇಳಿದರು. ಇದೇ ವೇಳೆ, ಭಯೋತ್ಪಾದನೆ ಎಂಬ ಅನಿಷ್ಟವು ಕ್ಷಿಪ್ರವಾಗಿ ಜಗತ್ತನ್ನು ಹರಡಿಕೊಳ್ಳುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದ ಲಾಂಬಾ, ಒಂದು ನಿರ್ದಿಷ್ಟ ಭಯೋತ್ಪಾದಕ ಸಂಘಟನೆಯು ಮುಂಬರುವ ದಿನಗಳಲ್ಲಿ ಜಗತ್ತಿಗೇ ಕಂಟಕಪ್ರಾಯವಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದರು.

ಮತ್ತೆ ಸುಳ್ಳಿನ ಮೊರೆ ಹೋದ ಪಾಕ್‌
ಪದೇ ಪದೆ ತಿರುಚಿದ ವೀಡಿಯೋ, ಹಳೆಯ ಘಟನೆಗಳ ಫೋಟೋಗಳನ್ನು ಹಾಕಿ “ಸಾಹಸ’ ಪ್ರದರ್ಶನ ಮಾಡುತ್ತಿರುವ ಪಾಕಿಸ್ಥಾನ ಮತ್ತೆ ಸುಳ್ಳಿನ ಮೊರೆ ಹೋಗಿದೆ. ಆದರೆ ಈ ಸುಳ್ಳಿನ ಮುಖವಾಡವನ್ನೂ ಭಾರತ ಯಶಸ್ವಿಯಾಗಿ ಕಳಚಿದೆ. ನಮ್ಮ ಜಲಗಡಿಯನ್ನು ಉಲ್ಲಂ ಸಿ ಒಳಬರಲು ಯತ್ನಿಸಿದ ಭಾರತದ ಜಲಾಂತರ್ಗಾಮಿಯನ್ನು ನೌಕಾಪಡೆ ಹಿಮ್ಮೆಟ್ಟಿಸಿದೆ ಎಂದು ಪಾಕ್‌ ಘೋಷಿಸಿತ್ತು. ಅಲ್ಲದೆ, ಇದಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿತ್ತು. ಭಾರತದ ಜಲಾಂತರ್ಗಾಮಿ ಪಾಕ್‌ ಪ್ರವೇಶಿಸದಂತೆ ನಾವು ತಡೆದಿದ್ದೇವೆ. ಅದನ್ನು ನಾವು ಟಾರ್ಗೆಟ್‌ ಮಾಡಿ ನಾಶ ಮಾಡಬಹುದಿತ್ತು. ಆದರೆ ಪಾಕಿಸ್ಥಾನದ ಶಾಂತಿಯ ನೀತಿಗೆ ತಲೆಬಾಗಿ ನಾವು ಹಾಗೆ ಮಾಡಲಿಲ್ಲ  ಎಂದೂ ನೌಕಾಪಡೆ ತಿಳಿಸಿತ್ತು. ಇದಾದ ಸ್ವಲ್ಪ ಸಮಯದಲ್ಲೇ ಆ ವೀಡಿಯೋದ ಸತ್ಯಾಸತ್ಯತೆಯನ್ನು ಭಾರತ ಹೊರಗೆಳೆದಿದೆ. ಇದು 2016ರ ನ.18ರಂದು ಚಿತ್ರೀಕರಿಸಲಾದ ದೃಶ್ಯವಾಗಿದ್ದು, ಅದನ್ನು ತಿರುಚಿ, ದಿನಾಂಕವನ್ನು ಬದಲಿಸಿ ಪಾಕಿಸ್ಥಾನವು ಈಗಿನ ದೃಶ್ಯವೆಂದು ಬಿಡುಗಡೆ ಮಾಡಿದೆ ಎಂಬುದನ್ನು ಭಾರತ ಬಹಿರಂಗಪಡಿಸಿದೆ.

ಸೇನಾ ದಾಳಿ ಆಗಿರಲಿಲ್ಲ: ರಕ್ಷಣಾ ಸಚಿವೆ ನಿರ್ಮಲಾ
ಬಾಲಾಕೋಟ್‌ ದಾಳಿ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, “ಜೈಶ್‌ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತದ ವಾಯುಪಡೆ ನಡೆಸಿದ ದಾಳಿಯು ಸೇನಾ ದಾಳಿಯಾಗಿರಲಿಲ್ಲ. ಹೀಗಾಗಿ ನಾಗರಿಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಸಾವು-ನೋವಿನ ಸಂಖ್ಯೆ ಬಹಿರಂಗ ಪಡಿಸಲು ಅದು ನಮ್ಮಲ್ಲಿಲ್ಲ. ವಿದೇಶಾಂಗ ಕಾರ್ಯದರ್ಶಿ ಗೋಖಲೆ ಅವರೂ ಸಾವಿನ ಅಂಕಿ ಸಂಖ್ಯೆಯನ್ನು ನೀಡಿಲ್ಲ’ ಎಂದು ಹೇಳಿದ್ದಾರೆ.

Advertisement

ವಾಯುಪಡೆಯ ದಾಳಿಗೆ ಸಾ  ಕೇಳುತ್ತಿರುವ ವಿಪಕ್ಷಗಳು ಪಾಕಿಸ್ಥಾನದ ಪೋಸ್ಟರ್‌ ಬಾಯ್‌ಗಳಾಗಿದ್ದಾರೆ. ಅವರ ಹೇಳಿಕೆಗಳು ಪಾಕ್‌ ಪತ್ರಿಕೆಗಳಲ್ಲಿ ಹೆಡ್‌ಲೈನ್‌ಗಳಾಗಿ ಮಿಂಚುತ್ತಿವೆ. ಅವರೆಲ್ಲರೂ ಪಾಕಿಸ್ಥಾನವನ್ನು ಶಾಂತಿಯ ದೇವತೆಯಂತೆ ನೋಡುತ್ತಿದ್ದಾರೆ. ದೇಶವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next