Advertisement
ಉದ್ಯೋಗ ನಿಮಿತ್ತ ಜನರು ವಲಸೆ ಹೋಗುವುದು ಮಾಮೂಲು ಪ್ರಕ್ರಿಯೆ. ಹೀಗೆ ವಲಸೆ ಹೋದವರ ಮತ ಚಲಾವಣೆಯಾಗಬೇಕಾದರೆ ಅವರು ಮತದಾನದ ದಿನದಂದು ತಮ್ಮ ಮತಕ್ಷೇತ್ರಗಳಲ್ಲಿ ಇರಬೇಕಾಗುತ್ತದೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ತಮಿಳುನಾಡಿನ ಯಾವುದೋ ಒಂದು ನಗರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವ ಬಿಹಾರದ ಒಬ್ಬ ವ್ಯಕ್ತಿಗೆ ಮತದಾನ ಮಾಡಬೇಕಾದರೆ ಹೋಗಲು ಮೂರು ದಿನ, ವಾಪಾಸು ಬರಲು ಮೂರು ದಿನ, ಊರಿನಲ್ಲಿ ಉಳಿಯಲು ಮೂರು ದಿನ ಹೀಗೆ ಕನಿಷ್ಠ 10 ದಿನದ ರಜೆ ಸಿಗಬೇಕು. ಜೊತೆಗೆ ಹೋಗಿ ಬರುವ ಪ್ರಯಾಣದ ಖರ್ಚುವೆಚ್ಚಗಳನ್ನು ಭರಿಸಬೇಕು. ಎಲ್ಲರೂ ಇಷ್ಟು ಅನುಕೂಲವಂತರಾಗಿರುವುದಿಲ್ಲ. ಈ ಕಾರಣಕ್ಕೆ ಯಾವ ಚುನಾವಣೆಯಲ್ಲೂ ಶೇ. 100ರಷ್ಟು ಮತ ಚಲಾವಣೆಯಾಗುವುದಿಲ್ಲ. ಆದರೆ ಈ ವಾಸ್ತವ ಸ್ಥಿತಿಯ ಬಗ್ಗೆ ಹೆಚ್ಚಿನವರು ಗಂಭೀರವಾದ ಚಿಂತನೆ ನಡೆಸಿದಂತೆ ಕಾಣುವುದಿಲ್ಲ.
ಇದೀಗ ಚುನಾವಣಾ ಆಯೋಗ ಮತದಾರ ಇರುವ ಪ್ರದೇಶದಲ್ಲೇ ಮತ ಚಲಾಯಿಸಲು ಅವಕಾಶ ಕೊಡುವ ಸೌಲಭ್ಯವನ್ನು ಒದಗಿಸುವ ಪ್ರಯತ್ನ ಪ್ರಾರಂಭಿಸಿರುವುದು ಈ ಹಿನ್ನೆಲೆಯಲ್ಲಿ ಒಂದು ಉತ್ತಮ ನಡೆ ಎನ್ನಬಹುದು. ಶೇ. 100 ಮತದಾನದ ಗುರಿಯನ್ನು ಈಡೇರಿಸಿಕೊಳ್ಳಲು ಈ ನಡೆ ಸಹಕಾರಿಯಾಗಬಹುದು. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ದೂರದ ಊರುಗಳಲ್ಲಿ ಇರುವ ಮತದಾರರನ್ನು ರಾಜಕೀಯ ಪಕ್ಷಗಳು ಅವರವರ ಮತಕ್ಷೇತ್ರಗಳಿಗೆ ತಮ್ಮ ಖರ್ಚಿನಲ್ಲಿ ಸಾಗಿಸಿ ಪರೋಕ್ಷವಾಗಿ ಅವರ ಮತ ಖರೀದಿಸುವಂಥ ಅಕ್ರಮಗಳಿಗೂ ಕಡಿವಾಣ ಬೀಳಬಹುದು. ಕೇರಳದಲ್ಲಿ ಪ್ರತಿಸಲ ಚುನಾವಣೆ ನಡೆದಾಗಲೂ ಗಲ್ಫ್ ದೇಶಗಳಲ್ಲಿರುವ ಮತದಾರರಿಗೆ ವಿಮಾನ ಟಿಕೆಟನ್ನು ರಾಜಕೀಯ ಪಕ್ಷಗಳು ಪ್ರಾಯೋಜಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಂತೆಯೇ ಮುಂಬಯಿಯಂಥ ನಗರಗಳಲ್ಲಿ ದುಡಿಯುವ ಕರಾವಳಿಯ ಜನರನ್ನು ಬಸ್, ರೈಲಿನ ಟಿಕೆಟ್ ಕೊಟ್ಟು ಚುನಾವಣೆ ದಿನಕ್ಕಾಗುವಾಗ ಕರೆಸಿಕೊಳ್ಳಲಾಗುತ್ತದೆ.ಕರಾವಳಿ ಭಾಗಗಳಲ್ಲಿ ದುಡಿಯುವ ಬಿಜಾಪುರ ಮತ್ತಿತರ ಕಡೆಗಳ ಜನರನ್ನು ಮತದಾನದ ದಿನಕ್ಕಾಗುವಾಗ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಿ ಸಾಗಿಸುವ ಪದ್ಧತಿಯೂ ಇದೆ. ಇದೆಲ್ಲ ಮತದಾರರನ್ನು ಹಂಗಿನಲ್ಲಿ ಕೆಡವಿ ಮತಗಳಿಸುವ ತಂತ್ರಗಳು.ಇದು ಕೂಡ ಚುನಾವಣಾ ಅಕ್ರಮವೇ ಆಗುತ್ತದೆ. ಇಂಥ ಅಕ್ರಮಗಳನ್ನು ತಡೆಯಲು ವಲಸೆ ಕಾರ್ಮಿಕರು ಇದ್ದಲ್ಲೇ ಮತದಾನಕ್ಕೆ ಅವಕಾಶ ಕೊಡುವ ಸೌಲಭ್ಯ ಸಹಕಾರಿ.