Advertisement

ಪುರಸಭೆಗೆಸವಾಲಾಗಿದೆಬೀದಿನಾಯಿಗಳ ನಿಯಂತ್ರಣ;ಸಾರ್ವಜನಿಕರಲ್ಲಿ ಭಯದಭೀತಿ!

03:20 PM Nov 15, 2018 | Team Udayavani |

ಕಾಪು : ಕಾಪು ಪೇಟೆಯೂ ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಶಾಲಾ ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರಲ್ಲಿ ಭಯದ ಭೀತಿ ಎದುರಾಗಿದೆ. ದಿನದಿಂದ ದಿನಕ್ಕೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೀದಿ ನಾಯಿಗಳನ್ನು ನಿಯಂತ್ರಿಸುವುದೇ ಪುರಸಭೆಗೆ ದೊಡ್ಡ ಸವಾಲಾಗಿ ಬಿಟ್ಟಿದೆ.

Advertisement

ಸ್ವಚ್ಚ ಕಾಪು – ಸುಂದರ ಕಾಪು ನಿರ್ಮಾಣ ಗುರಿ ಹೊಂದಿರುವ ಪುರಸಭೆಗೆ ಬೀದಿ ನಾಯಿಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿ ಬಿಟ್ಟಿದೆ. ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗದಂತೆ ತಡೆಯಲು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನಡೆಸುವುದಾಗಿ ಪುರಸಭೆ ಹೇಳುತ್ತಾ ಬರುತ್ತಿದೆಯಾದರೂ, ಅದು ಇನ್ನೂ ಕೂಡಾ ಕಾರ್ಯರೂಪಕ್ಕೆ ಬರುತ್ತಿಲ್ಲ.

ಹುಚ್ಚು ನಾಯಿ ಭೀತಿ
ಕಾಪು ಪೇಟೆಯಲ್ಲಿ ಬೀದಿ ನಾಯಿಗಳ ಜೊತೆಗೆ ಹುಚ್ಚು ನಾಯಿಗಳ ಹಾವಳಿಯೂ ಹೆಚ್ಚಾಗಿದ್ದು, ಹಲವು ಮಂದಿ ಹುಚ್ಚು ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ. ಕೆಲವು ಸಮಯದ ಹಿಂದೆ ಒಂದೇ ದಿನ ಆರೇಳು ಜನರಿಗೆ ಹುಚ್ಚು ನಾಯಿ ಕಡಿದಿದ್ದು, ಸಾರ್ವಜನಿಕರೇ ಆ ನಾಯಿಯನ್ನು ಕೊಂದು ಹೂತು ಹಾಕಿದ ಪ್ರಸಂಗವೂ ಕಾಪು ಮಾರ್ಕೆಟ್‌ ಬಳಿ ನಡೆದಿತ್ತು.

ಸಾಮಾನ್ಯ ಸಭೆಯಲ್ಲಿ ಸಾಮಾನ್ಯ ವಿಷಯ
ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ಪುರಸಭೆಯ ಪ್ರತೀ ತಿಂಗಳ ಸಾಮಾನ್ಯ ಸಭೆಯಲ್ಲೂ ಭಾರೀ ಚರ್ಚೆ ನಡೆಯುತ್ತಿದ್ದು, ಆ ಚರ್ಚೆ ಮತ್ತು ಅದರ ಕುರಿತಾದ ಪರಿಹಾರದ ಕ್ರಮಗಳು ಕೇವಲ ನಿರ್ಣಯ ಪುಸ್ತಕಕ್ಕೆ ಮಾತ್ರಾ ಸೀಮಿತವಾಗಿ ಬಿಟ್ಟಿದೆ. ಬೀದಿ ನಾಯಿಗಳ ಬಗ್ಗೆ ಭಾರೀ ಚರ್ಚೆಗಳು ನಡೆದರೂ ಈ ಕುರಿತಾದ ಪರಿಹಾರ ಕ್ರಮ ಮಾತ್ರಾ ಶೂನ್ಯ ಎಂಬಂತಾಗಿದೆ.

ಕಾಪು ಪೇಟೆಯಲ್ಲಿ ಬೀದಿ ನಾಯಿಗಳಿಂದಾಗಿ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಪುರಸಭೆಯ ಗಮನಕ್ಕೆ ತರಲಾಗುತ್ತಿದೆಯಾದರೂ, ಪುರಸಭೆ ಮಾತ್ರಾ ಈ ಬಗ್ಗೆ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಬೀದಿ ನಾಯಿಗಳ ನಿಯಂತ್ರಣದಲ್ಲಿ ಪುರಸಭೆ ಆಡಳಿತವು ಸಂಪೂರ್ಣ ವಿಫಲವಾಗಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 500ಕ್ಕೂ ಅಧಿಕ ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು, ಅವುಗಳ ನಿಯಂತ್ರಣದ ಬಗ್ಗೆ ವಿವಿಧ ರೀತಿಯ ಕ್ರಮಕ್ಕೆ ಪುರಸಭೆ ಕಾರ್ಯೋನ್ಮುಖವಾಗಿದೆ. ಬೀದಿ ನಾಯಿಗಳ ಜೊತೆಗೆ ಸಾಕು ನಾಯಿಗಳ ನಿಯಂತ್ರಣಕ್ಕೂ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

ಕಾಪು ಪುರಸಭೆ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ನಡೆಸುವ ಉದ್ದೇಶದೊಂದಿಗೆ ಟೆಂಡರ್‌ ಕರೆಯಲಾಗಿದ್ದು, ಟೆಂಡರ್‌ ಮೂಲಕ ಬಿಡ್‌ ಸಲ್ಲಿಸಿರುವ ಬೆಂಗಳೂರು ಮೂಲದ ಎನ್‌ಜಿಒಗೆ ಕಾರ್ಯಾದೇಶ ನೀಡಲಾಗಿದೆ. ಒಂದು ಜೋಡಿ ನಾಯಿಯ ಸಂತಾನ ಹರಣ ಚಿಕಿತ್ಸೆಗೆ 2,700ರೂ. ವೆಚ್ಚ ತಗುಲಲಿದ್ದು, ಅದನ್ನು ಬೆಂಗಳೂರಿನ ಎನ್‌ಜಿಒ ಒಂದಕ್ಕೆ ಆದೇಶ ಪತ್ರ ನೀಡಲಾಗಿದೆ. ಅದರೊಂದಿಗೆ ಪುರಸಭಾ ವ್ಯಾಪ್ತಿಯಲ್ಲಿರುವ ಸಾಕು ನಾಯಿಗಳ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನವೂ ನಡೆಯುತ್ತಿದೆ.
ರಾಯಪ್ಪ , ಮುಖ್ಯಾಧಿಕಾರಿ, ಕಾಪು ಪುರಸಭೆ 

ಕಾಪು ಪೇಟೆಯೂ ಸೇರಿದಂತೆ, ಪುರಸಭೆ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳನ್ನು ನಿಯಂತ್ರಿಸಲು ಪುರಸಭೆ ಶೀಘ್ರದಲ್ಲಿ ಕ್ರಮ ಕೈಗೊಳ್ಳ ಬೇಕಿದೆ. ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗುವವರನ್ನು ಮತ್ತು ಶಾಲಾ ವಿದ್ಯಾರ್ಥಿಗಳನ್ನು ಬೀದಿ ನಾಯಿಗಳು ಬಹುವಾಗಿ ಕಾಡುತ್ತಿದ್ದು, ಕಾಪು ಪೇಟೆಯಲ್ಲಿ ನಡೆದಾಡುವ ನಾಗರಿಕರಿಗೂ ಬೀದಿ ನಾಯಿಗಳ ಬಗ್ಗೆ ಭಯ ಆವರಿಸಲಾರಂಭಿಸಿದೆ. ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಪುರಸಭೆ ಕ್ರಮ ಕೈಗೊಳ್ಳಬೇಕಿದ್ದು, ಅದರೊಂದಿಗೆ ಜಿಲ್ಲಾಡಳಿತ ಕೂಡಾ ಶ್ವಾನ ಪಾಲನಾ ಕೇಂದ್ರ ಸ್ಥಾಪಿಸಲು ಮುಂದಾಗಬೇಕಿದೆ.
ಜಯಕರ್‌ ಪೂಜಾರಿ,
ಮಾಜಿ ಗ್ರಾ.ಪಂ. ಸದಸ್ಯ, ಕೈಪುಂಜಾಲು

 ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next