Advertisement

ಪ್ರಧಾನಿ ಮೋದಿಯಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ

09:50 PM Sep 09, 2019 | Lakshmi GovindaRaju |

ಗುಡಿಬಂಡೆ: ದೇಶದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದಾಗಿನಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ನ ಜಿಲ್ಲಾ ಕಾರ್ಯದರ್ಶಿ ಹಳೇಯರ್ರಹಳ್ಳಿ ಮಧು ದೂರಿದರು. ಸೋಮವಾರ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಉದ್ಯೋಗ ವಂಚಿತ ಯುವಜನರ ಜೀವನ ನರಕ ಸದೃಶವಾಗಿದೆ.

Advertisement

ಸ್ವಾತಂತ್ರ ಭಾರತದಲ್ಲಿ ನೆಮ್ಮದಿ, ಘನತೆ ಬದುಕು ಸಾಗಿಸಬಲ್ಲ ಉದ್ಯೋಗ ಪಡೆಯುವ ಯುವಜನರ ಕನಸು ಈಡೇರಲೇ ಇಲ್ಲ. ಉದ್ಯೋಗದ ಹಕ್ಕಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದರೂ ಸರ್ವರಿಗೂ ಉದ್ಯೋಗ ಎಂಬ ಸಂವಿಧಾನದ ಆಶಯ ಜಾರಿಗೆ ತರಲು ನಮ್ಮನ್ನಾಳುವ ಸರ್ಕಾರಗಳು ಗಂಭೀರ ಪ್ರಯತ್ನ ಮಾಡಲೇ ಇಲ್ಲ ಎಂದು ಹೇಳಿದರು.

ನವ ಉದಾರೀಕರಣದ ನೀತಿ ಜಾರಿಗೆ ಬಂದ ನಂತರವಂತೂ ಇರುವ ಉದ್ಯೋಗಗಳನ್ನೂ ಕಸಿದುಕೊಳ್ಳಲಾಗುತ್ತಿದೆ. ಅದರಲ್ಲೂ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ಅವಧಿಯಲ್ಲಿ ಇರುವ ಉದ್ಯೋಗಗಳೂ ದೊಡ್ಡ ಪ್ರಮಾಣದಲ್ಲಿ ನಷ್ಟಕ್ಕೊಳಗಾಗಿವೆ ಎಂದು ತಿಳಿಸಿದರು.

ಇದಲ್ಲದೆ ಖಾಸಗಿ ಉದ್ದಿಮೆಗಳು ತಮ್ಮ ಕೈಗಾರಿಕೆ, ಉದ್ಯಮಗಳಲ್ಲಿ ಕನ್ನಡಿಗರನ್ನು, ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳದೆ ಹೊರ ರಾಜ್ಯದ ಕಾರ್ಮಿಕರನ್ನು ಕರೆಸಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಬ್ಯಾಂಕ್‌, ರೈಲ್ವೆಯಂತಹ ಕ್ಷೇತ್ರದಲ್ಲಿ ಹಿಂದಿ ಭಾಷಿಕರೇ ತುಂಬಿಕೊಂಡಿದ್ದಾರೆಂದು ಆಕ್ರೋಶಗೊಂಡರು.

ಲಕ್ಷಾಂತರ ಉದ್ಯೋಗಕ್ಕೆ ಪೆಟ್ಟು: ಡಿವೈಎಫ್‌ಐ ತಾಲೂಕು ಅಧ್ಯಕ್ಷ ಮಾತನಾಡಿ, ರಾಜ್ಯ ಸರ್ಕಾರದ ಅಧೀನದಲ್ಲಿ ಇರುವ ಇಲಾಖೆಗಳಲ್ಲಿ ಸರಿ ಸುಮಾರು 2 ಲಕ್ಷ ಉದ್ಯೋಗ ಖಾಲಿ ಬಿದ್ದಿವೆ. ಕೇಂದ್ರ ಸರ್ಕಾರ, ಸಾರ್ವಜನಿಕ ರಂಗದ ಉದ್ಯಮಗಳಲ್ಲಿಯೂ ಲಕ್ಷಾಂತರ ಉದ್ಯೋಗಗಳು ಖಾಲಿ ಬಿದ್ದಿವೆ. ಹೊಸ ಉದ್ಯೋಗ ಸೃಷ್ಟಿ ಮಾಡಲಾಗದ ಸರ್ಕಾರಗಳು ಖಾಲಿ ಬಿದ್ದಿರುವ ಉದ್ಯೋಗಗಳನ್ನೂ ಭರ್ತಿ ಮಾಡುತ್ತಿಲ್ಲ.

Advertisement

ಬದಲಿಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿರುವ ರೈಲ್ವೆ, ಟೆಲಿಕಾಂ, ಬ್ಯಾಂಕಿಂಗ್‌ ಸತತ ತನ್ನ ಅಧೀನದ ಇಲಾಖೆಗಳ ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಮತ್ತೂಂದೆಡೆ ಸರ್ಕಾರಗಳ ತಪ್ಪಾದ ಆರ್ಥಿಕ ನೀತಿಗಳಿಂದಾಗಿ ಖಾಸಗಿ ರಂಗದ ಉದ್ಯಮಗಳು ಲಕ್ಷಗಟ್ಟಲೇ ಸಂಖ್ಯೆಯ ಕಾರ್ಮಿಕರನ್ನು ಹೊರದಬ್ಬುತ್ತಿವೆ ಎಂದು ಹೇಳಿದರು. ಗುತ್ತಿಗೆ, ಹೊರಗುತ್ತಿಗೆ ಪದ್ಧತಿಯಲ್ಲಿ ಅರೆ ಉದ್ಯೋಗ, ಅರೆ ಸಂಬಳ ಪದ್ಧತಿ ಮೂಲಕ ಕಾರ್ಮಿಕರ ಬದುಕನ್ನು ಅತಂತ್ರವಾಗಿಡುತ್ತಿವೆ ಎಂದು ಆರೋಪಿಸಿದರು.

ಬೇಡಿಕೆಗಳು: ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬೇಕು, ಸ್ಥಳೀಯರನ್ನೇ ಆದ್ಯತೆಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕು, ಖಾಲಿ ಬಿದ್ದಿರುವ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ತಲುಪಿಸುವಂತೆ ತಹಶೀಲ್ದಾರ್‌ ಮುಖಾಂತರ ಮನವಿ ಪತ್ರ ನೀಡಿದರು.

ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್‌ ಡಿ.ಹನುಮಂತರಾಯಪ್ಪ ಮನವಿ ಪತ್ರವನ್ನು ಮೇಲಧಿಕಾರಿಗಳಿಗೆ ವರ್ಗಾಯಿಸುತ್ತೇನೆಂದು ತಿಳಿಸಿದರು. ಡಿವೈಎಫ್‌ಐ ತಾಲೂಕು ಉಪಾಧ್ಯಕ್ಷ ಶ್ರೀನಿವಾಸ್‌, ಪದಾಧಿಕಾರಿಗಳಾದ ಶಿವಪ್ಪ, ನವೀನ್‌, ನಾಗರಾಜ್‌, ಆದಿನಾರಾಯಣಸ್ವಾಮಿ, ಆದಿರೆಡ್ಡಿ, ರಾಮಕೃಷ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next