Advertisement

ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿ: ಕೊಠಡಿ ಕೊರತೆ

10:21 PM Sep 03, 2021 | Team Udayavani |

ಸರಕಾರಿ ಶಾಲೆಯ ದಾಖಲಾತಿ ಹೆಚ್ಚಳವಾಗುತ್ತಿರುವುದು ಸಂತಸದ ವಿಚಾರವಾದರೂ ಮೂಲ ಸೌಕರ್ಯಗಳ ಕೊರತೆ ಚಿಂತೆಗೆ ಕಾರಣವಾಗಿದೆ. ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉದಯವಾಣಿ ಸುದಿನವು ಮಕ್ಕಳು ಬರುವರು ಶಾಲೆಗೆ-ಸೌಲಭ್ಯ ಕಲ್ಪಿಸಿ ಅಭಿಯಾನದ ಮೂಲಕ ಬೆಳಕು ಚೆಲ್ಲಲಿದೆ.

Advertisement

ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗುವುದು ಒಂದು ಉತ್ತಮ ಬೆಳವಣಿಗೆಯಾದರೆ, ಮತ್ತೂಂದೆಡೆ ಅಲ್ಲಿನ ಮೂಲಸೌಕರ್ಯ ಕೊರತೆ ವೃದ್ಧಿಯಾಗುವುದು ದೊಡ್ಡ ಹಿನ್ನಡೆಯಾಗಿದೆ. ಪ್ರಸ್ತುತ ಅಂತಹ ಸ್ಥಿತಿ ಪುದು-ಮಾಪ್ಲ ಸರಕಾರಿ ಶಾಲೆಗೆ ಬಂದೊದಗಿದೆ. ಶಾಲೆಯಲ್ಲಿ ಪ್ರಸ್ತುತ ವರ್ಷ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಯಾಗಿದ್ದು, ತರಗತಿ ಕೊಠಡಿ, ಪೀಠೊಪಕರಣಗಳ ಕೊರತೆ ಕಾಡುತ್ತಿದೆ.

ಪುದು-ಮಾಪ್ಲ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಕಳೆದ ವರ್ಷ 283 ವಿದ್ಯಾರ್ಥಿಗಳಿದ್ದು, ಪ್ರಸ್ತುತ 411 ವಿದ್ಯಾರ್ಥಿಗಳಿದ್ದಾರೆ. ಅಂದರೆ 128 ವಿದ್ಯಾರ್ಥಿಗಳು ಈ ವರ್ಷ ಹೆಚ್ಚಳವಾಗಿದೆ. ಜತೆಗೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದು, ಆದರೆ ಅವರ ಟಿಸಿ ನೋಂದಣಿಯಾಗದೆ ಅದರ ಸಂಖ್ಯೆ ಇನ್ನೂ ಅಂತಿಮಗೊಂಡಿಲ್ಲ ಎಂದು ಶಾಲೆಯ ಮೂಲಗಳು ತಿಳಿಸಿವೆ.

ಒಟ್ಟು 70 ಸೆಂಟ್ಸ್‌ ನಿವೇಶನವನ್ನು ಹೊಂದಿರುವ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕೊಠಡಿ ಸೇರಿ ಒಟ್ಟು 9 ತರಗತಿ ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಎ, ಬಿಗಳೆಂದು ವರ್ಗೀಕರಣ ಮಾಡಿದರೆ ಒಟ್ಟು 20 ಕೊಠಡಿಗಳ ಅವಶ್ಯಕತೆ ಇರುತ್ತದೆ.

ಇದನ್ನೂ ಓದಿ:ವರ್ಷಾಂತ್ಯಕ್ಕೆ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ : ಸುಧಾಂಶು ಪಾಂಡೆ

Advertisement

ಇತ್ತೀಚೆಗೆ ಶಾಸಕರ ಅನುದಾನದ ಮೂಲಕ ಶಾಲೆಯ ಸಭಾಂಗಣ ಉದ್ಘಾಟನೆಗೊಂಡಿದೆ. ಆದರೆ ತರಗತಿ ಕೊಠಡಿಗಳ ಬೇಡಿಕೆ ಹಾಗೇ ಇದೆ.
ಶಾಲೆಯ 1ನೇ ತರಗತಿಯಲ್ಲಿ 107 ವಿದ್ಯಾರ್ಥಿಗಳಿದ್ದು, 30 ವಿದ್ಯಾ ರ್ಥಿಗಳಂತೆ ವಿಭಾಗಿಸಿದರೆ ಕನಿಷ್ಠ 3 ತರಗತಿ ಕೊಠಡಿಗಳು ಬೇಕಾಗುತ್ತದೆ. 2-3ನೇ ತರಗತಿಯಲ್ಲಿ 80ಕ್ಕೂ ಅಧಿಕ ಮಕ್ಕಳಿದ್ದು, 40ರಂತೆ ವಿಭಾಗಿಸಿದರೆ ತಲಾ ಎರಡು ಕೊಠಡಿ ಬೇಕಾಗುತ್ತದೆ. ಉಳಿದಂತೆ 4ರಿಂದ 8ರ ವರೆಗೆ 5 ತರಗತಿ ಕೊಠಡಿಗಳು ಬೇಕಾಗುತ್ತದೆ. ಜತೆಗೆ ಪೀಠೊಪಕರಣಗಳು ಕೊರತೆಯಾಗುತ್ತಿದೆ.

ಮೌಲನಾ ಆಝಾದ್‌ ಶಾಲೆಯೂ ಇದೆ
ಪುದುವಿಗೆ ಮಂಜೂರಾಗಿರುವ ಮೌಲನಾ ಆಝಾದ್‌ ಶಾಲೆಯು ಪುದು-ಮಾಪ್ಲ ಶಾಲೆಯ ಕಟ್ಟಡದಲ್ಲೇ ಇದ್ದು, ಸುಮಾರು 200 ಮಕ್ಕಳು ಅಲ್ಲಿದ್ದಾರೆ.ಅಂದರೆ 4 ಕೊಠಡಿಗಳನ್ನು ಅವರಿಗೆ ಬಿಟ್ಟು ಕೊಡಲಾಗಿದೆ. ಈ ಶಾಲೆಗೆ ತರಗತಿ ಕೊಠಡಿಗಳ ಕೊರತೆಗೆ ಇದು ಕೂಡ ಮುಖ್ಯ ಕಾರಣವಾಗಿದೆ. ಮೌಲನಾ ಆಝಾದ್‌ ಶಾಲೆಯ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿದೆ.

ಶೌಚಾಲಯದ ಬೇಡಿಕೆಯೂ ಇದೆ
ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾದಾಗ ಶೌಚಾಲಯದ ಬೇಡಿಕೆಯೂ ಇದ್ದು, ಹಾಲಿ ತಲಾ 5ರಂತೆ ಬಾಲಕ-ಬಾಲಕಿಯರಿಗೆ ಒಟ್ಟು 10 ಶೌಚಾಲಯಗಳಿವೆ. ಒಂದು ವಿಶೇಷ ಮಕ್ಕಳ ಶೌಚಾಲಯವಿದೆ. ಆದರೆ ಮುಂದೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭಗೊಂಡು ಅಲ್ಪ ವಿರಾಮದಲ್ಲಿ ಎಲ್ಲರೂ ಶೌಚಾಲಯವನ್ನು ಉಪ ಯೋಗಿಸುವುದು ಕಷ್ಟ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಶಿಕ್ಷಕರ ಹುದ್ದೆ ಮಂಜೂರು
ಶಾಲೆಯಲ್ಲಿ ಪ್ರಸ್ತುತ 6 ಖಾಯಂ ಶಿಕ್ಷಕರಿದ್ದು, ಕಳೆದ ವರ್ಷ 3 ಅತಿಥಿ ಶಿಕ್ಷಕರು ಸೇರಿ 9 ಮಂದಿ ಕರ್ತವ್ಯ ನಿರ್ವಹಿಸಿದ್ದರು. ಈ ವರ್ಷ ಮುಂದಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ಶಾಲೆಗೆ 4 ಶಿಕ್ಷಕರನ್ನು ನೀಡುವ ಭರವಸೆ ಸಿಕ್ಕಿದ್ದು, ಜತೆಗೆ ಅತಿಥಿ ಶಿಕ್ಷಕರೂ ಸಿಗುವುದರಿಂದ ಶಿಕ್ಷಕರ ಸಂಖ್ಯೆ ಕೊರತೆಯಾಗದು ಎಂದು ಶಾಲೆಯ ಮೂಲಗಳು ತಿಳಿಸಿವೆ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next