ವಾಷಿಂಗ್ಟ್ ನ್: ಅತಿ ಹೆಚ್ಚು ಕೋವಿಡ್ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಸೋಂಕು ಹರಡುವಿಕೆ ತಡೆಗಟ್ಟುವ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಸೋಂಕು ಹಾಗೂ ಸಾವಿನ ಸಂಖ್ಯೆ ದಿನೇ ದಿನೆ ಅಧಿಕವಾಗುತ್ತಾ ಹೋಗುತ್ತಿವೆ. ಇದೀಗ ಅಧಿಕೃತ ಮಾಹಿತಿಯೊಂದರ ಪ್ರಕಾರ ಅಮೆರಿಕದ ಅರ್ಧದಷ್ಟು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿದೆ. ಕೆಲವು ದೇಶಗಳಲ್ಲಿ ಕೋವಿಡ್‌ನ ಎರಡನೇ ಹಂತ ಕಾಣಿಸಿಕೊಳ್ಳುತ್ತಿದೆ. ಆದರೆ ಅಮೆರಿಕದಲ್ಲಿ ಮಾತ್ರ ಮೊದಲ ಹಂತವೇ ಕಡಿಮೆಯಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.
ಹೆಚ್ಚಿನ ರಾಜ್ಯಗಳಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ವೈದ್ಯಕೀಯ ಶ್ರಮಗಳು ವಿಫಲವಾಗಿವೆ. ಸರಕಾರ ಕೋವಿಡ್ ಸೋಂಕನ್ನು ಲಘುವಾಗಿ ಪರಿಗಣಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆಯಷ್ಟೇ ಕೋವಿಡ್ ಸೋಂಕು ಪರೀಕ್ಷೆ ನಿಲ್ಲಿಸಿ, ಇದರಿಂದ ಸೋಂಕಿತರ ಸಂಖ್ಯೆ ಕಡಿಮೆ ಎಂಬ ಲಘು ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದು, ಸಾಮಾಜಿಕ ಜಾಲತಾಣಗಳಲಿ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಸೋಂಕು ಪರೀಕ್ಷೆ ಹೆಚ್ಚು ನಡೆದಂತೆ ಸೋಂಕಿತರ ಸಂಖ್ಯೆಯನ್ನು ಗುರುತಿಸಿ ಹರಡುವ ವೇಗವನ್ನು ಕಡಿಮೆ ಮಾಡಲು ಇತರ ದೇಶಗಳು ಪ್ರಯತ್ನಿಸಿದರೆ ಅಮೆರಿಕ ಇದಕ್ಕೆ ತೀರ ವಿರುದ್ಧವಾಗಿದೆ. ದಕ್ಷಿಣ ಅಮೆರಿಕದಲ್ಲಿ ಸೋಂಕಿಗೆ ಬಲಿಯಾಗುತ್ತಿರುವವರು ಯುವಜನತೆ ಎಂಬ ಮಾಹಿತಿಯೊಂದು ಬಂದಿದೆ. ಕೋವಿಡ್ ಹೆಚ್ಚುತ್ತಿರುವ ರಾಜ್ಯಗಳು ವಾಷಿಂಗ್ಟ್ನ್, ಕ್ಯಾಲಿಫೋರ್ನಿಯಾ, ನೆವಾಡ, ಇಡಾಹೋ, ಮೊಂಟನಾ, ವ್ಯೋಮಿಂಗ್. ಕೊಲ್ಯಾರೊಡೊ, ಟೆಕ್ಸಾಸ್, ಒಕ್ಲಹೊಮಾ, ಕನ್ಸಾಸ್, ವೆಸ್ಟ್ ವರ್ಜಿನಿಯಾ, ಜಾರ್ಜಿಯಾ, ಹವಾಯಿ ಮೊದಲಾದ ರಾಜ್ಯಗಳಲಿ ಸೋಂಕು ಹೆಚ್ಚುತ್ತಿವೆ.
ರಾಜ್ಯದಲ್ಲಿ ದಿನವೊಂದಕ್ಕೆ ಲಕ್ಷ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಪ್ರತಿಯೊಂದು ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಸೌತ್ ಡೆಕೋಟ, ಅಲ್ಬಮಾ, ಅಲಸ್ಕಾ, ನ್ಯೂ ಜೆರ್ಸಿ, ನ್ಯೂಯಾರ್ಕ್ ಮೊದಲಾದ ರಾಜ್ಯಗಳಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದೆ ಎಂಬುದು ಆಶಾದಾಯಕ ವಿಚಾರ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ರವಿವಾರ ದೇಶದಲ್ಲಿ ಸಾವಿನ ಸಂಖ್ಯೆ ಅತಿ ಕಡಿಮೆಯಾಗಿತ್ತು. ರವಿವಾರ 267 ಮಂದಿ ಮೃತಪಟ್ಟಿದ್ದಾರೆ. ಸೋಂಕು ಕಡಿಮೆಯಾಗ ಬೇಕೆಂದರೆ ಜನ ವೈದ್ಯಕೀಯ ಅಧಿಕೃತರ ಮಾತು ಪಾಲಿಸಲೇ ಬೇಕಾಗುತ್ತದೆ. ಅವರ ಎಚ್ಚರಿಕೆಯನ್ನು ಸ್ವತಃ ಅಮೆರಿಕ ಅಧ್ಯಕ್ಷರೇ ಪಾಲಿಸುವುದಿಲ್ಲವೆಂದ ಮೇಲೆ ಸಾರ್ವಜನಿಕರು ಎಷ್ಟು ಪಾಲಿಸಬಹದೆಂಬುದು ಬಹುದೊಡ್ಡ ಯಕ್ಷ ಪ್ರಶ್ನೆ. ರವಿವಾರ ಟ್ರಂಪ್ ಆಯೋಜಿಸಿದ್ದ ಪಾರ್ಟಿ
ಮೀಟಿಂಗ್‌ನ್ನು ತಜ್ಞರು ವಿರೋಧಿಸಿದ್ದರೂ ಟ್ರಂಪ್ ಸಮಾಲೋಚನೆ ನಡೆಸಿದ್ದಾರೆ.