Advertisement

ಹೆಚ್ಚುತ್ತಿರುವ ಸೈಬರ್‌ ಅಪರಾಧ; ಮಂಗಳೂರು ಸೈಬರ್‌ ಠಾಣೆಗೆ”ಪ್ರಭಾರಿ’ಗಳೇ ಉಸ್ತುವಾರಿ!

12:08 AM May 16, 2024 | Team Udayavani |

ಮಂಗಳೂರು: ದಿನೇದಿನೆ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಅವುಗಳನ್ನು ನಿರ್ವಹಿಸಲು ಮಂಗಳೂರಿನ ಸೆನ್‌ (ಎಕನಾಮಿಕ್‌, ನಾರ್ಕೊಟಿಕ್‌ ಮತ್ತು ಸೈಬರ್‌ ಅಪರಾಧ) ಠಾಣೆ ರೆಗ್ಯುಲರ್‌ ಅಧಿಕಾರಿಗಳ ಕೊರತೆ ಎದುರಿಸುತ್ತಿದೆ. “ಪ್ರಭಾರಿ’ ಅಧಿಕಾರಿಗಳೇ ಉಸ್ತುವಾರಿ ಗಳಾಗಿದ್ದು ಆರ್ಥಿಕ ಅಪರಾಧ ಸೇರಿದಂತೆ ಸೈಬರ್‌ ವಂಚನೆ ಪ್ರಕರಣಗಳನ್ನು ಭೇದಿಸಲು ತೊಡಕಾಗಿದೆ.

Advertisement

ಸೈಬರ್‌ ಅಪರಾಧಗಳ ತನಿಖೆಗೆ ಆದ್ಯತೆ ನೀಡುವುದಕ್ಕೆ ಎಸಿಪಿ ದರ್ಜೆಯ ಅಧಿಕಾರಿಗೆ ಮೇಲುಸ್ತುವಾರಿ ಅಧಿಕಾರ ನೀಡಲಾಗಿದೆ. ಆದರೆ ಠಾಣೆಯನ್ನು ನಿಭಾಯಿಸಬೇಕಾದ ರೆಗ್ಯುಲರ್‌ ಇನ್‌ಸ್ಪೆಕ್ಟರ್‌ಗಳಿಲ್ಲದೆ ಸಮಸ್ಯೆಯಾಗಿದೆ. ಎರಡು ವರ್ಷಗಳಿಂದ ರೆಗ್ಯುಲರ್‌ ಇನ್‌ಸೆ³ಕ್ಟರ್‌ಗಳು ಆಗೊಮ್ಮೆ ಈಗೊಮ್ಮೆ ಎಂಬಂತೆ ಬಂದು ಹೋಗುತ್ತಿದ್ದಾರೆ. ಸಿಸಿಬಿ ಇನ್‌ಸ್ಪೆಕ್ಟರ್‌ ಅವರೇ ಸೆನ್‌ ಠಾಣೆಯಲ್ಲಿಯೂ ಪ್ರಭಾರಿ ಆಗಿದ್ದಾರೆ.

ಪ್ರತೀ ದಿನ ಪ್ರಕರಣ
ಸೆನ್‌ ಠಾಣೆಯಲ್ಲಿ ಪ್ರತೀ ದಿನವೆಂಬಂತೆ ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗು ತ್ತಿವೆ. ಮಾಸಿಕ ಸರಾಸರಿ 25ಕ್ಕೂ ಅಧಿಕ ದೂರುಗಳು ಬರುತ್ತಿವೆ. ಕೆಲವು ಎಫ್ಐಆರ್‌ ಆಗುತ್ತಿದೆ. ಆದರೆ ಪ್ರಕರಣಗಳನ್ನು ಭೇದಿಸಲಾಗಿಲ್ಲ. ಸೈಬರ್‌ ಪ್ರಕರಣ ಗಳು ಇತರ ಪ್ರಕರಣಗಳಿಗಿಂತ ಭಿನ್ನ. ಆ ಪ್ರಕರಣಗಳ ಬೆನ್ನು ಬಿದ್ದು ವಂಚಕರನ್ನು ಪತ್ತೆ ಹಚ್ಚಿ ಬಂಧಿಸುವುದು ಸವಾಲು. ಹೀಗಿದ್ದೂ ರೆಗ್ಯುಲರ್‌ ಇನ್‌ಸ್ಪೆಕ್ಟರ್‌ಗಳು ಇಲ್ಲಿಲ್ಲ ಎಂದರು.

ದೀರ್ಘ‌ ರಜೆ/ಪ್ರಭಾರ: ರೆಗ್ಯುಲರ್‌ ಆಗಿದ್ದ ಇನ್‌ಸ್ಪೆಕ್ಟರ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ದೀರ್ಘ‌ ರಜೆಯಲ್ಲಿ ತೆರಳಿದ್ದಾರೆ. ಹಾಗಾಗಿ ಸಿಸಿಬಿ ಇನ್‌ಸ್ಪೆಕ್ಟರ್‌ ಸೆನ್‌ ಠಾಣೆಯ ಜವಾಬ್ದಾರಿ ಕೂಡ ನಿಭಾಯಿಸುತ್ತಿದ್ದಾರೆ. ಪ್ರಸ್ತುತ ರೆಗ್ಯುಲರ್‌ ಇನ್‌ಸ್ಪೆಕ್ಟರ್‌ ಆಗಿದ್ದ ಸತೀಶ್‌ ಕುಮಾರ್‌ ಅವರಿಗಿಂತ ಮೊದಲು ರವಿ ನಾೖಕ್‌ ಇನ್‌ಸ್ಪೆಕ್ಟರ್‌ ಆಗಿದ್ದರು. ಆದರೆ ಅವರು ಸ್ವಲ್ಪ ಸಮಯ ಠಾಣೆಯಲ್ಲಿ ಲಭ್ಯವಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸುದೀರ್ಘ‌ ರಜೆಯಲ್ಲಿದ್ದರು. ಇದೀಗ ಸಿಸಿಬಿಯ ಶ್ಯಾಮ್‌ ಸುಂದರ್‌ ಪ್ರಭಾರಿಯಾಗಿದ್ದಾರೆ.ಸಿಸಿಬಿಯ ಎಸಿಪಿಯವರು ಕೂಡ ಒಂದೂವರೆ ವರ್ಷದಿಂದ ಸೆನ್‌ ಠಾಣೆಯ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆ ಶೀಘ್ರ ಮೇಲ್ದರ್ಜೆಗೇರಲಿದೆ. ಪ್ರತ್ಯೇಕವಾಗಿ ಓರ್ವ ಎಸಿಪಿಯ ನೇಮಕವಾಗಲಿದೆ. ಸದ್ಯ ರೆಗ್ಯುಲರ್‌ ಇನ್‌ಸ್ಪೆಕ್ಟರ್‌ ಅನಾರೋಗ್ಯ ಪೀಡಿತರಾಗಿರುವುದರಿಂದ ಸಿಸಿಬಿ ಇನ್‌ಸ್ಪೆಕ್ಟರ್‌ ಪ್ರಭಾರಿಯಾಗಿದ್ದಾರೆ. ಶೀಘ್ರವೇ ರೆಗ್ಯುಲರ್‌ ಇನ್‌ಸ್ಪೆಕ್ಟರ್‌ ಕೂಡ ನೇಮಕಗೊಳ್ಳುವರು. ಪೊಲೀಸ್‌ ಆಯುಕ್ತರು ಸೆನ್‌ ಠಾಣೆಗೆ ಹೆಚ್ಚಿನ ಸಿಬಂದಿ, ಅಧಿಕಾರಿ ಒದಗಿಸಿದ್ದು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ.
– ರವೀಶ್‌ ನಾಯ್ಕ, ಪ್ರಭಾರ ಎಸಿಪಿ, ಸೆನ್‌ ಪೊಲೀಸ್‌ ಠಾಣೆ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next